ಕಳೆದ ಬಾರಿ ನಾನು ಸ್ಪರ್ಧಿಸಿದ್ದರೆ ಡಿಕೆಸು ಗೆಲ್ತಿರಲಿಲ್ಲ: ಸಿ.ಪಿ.ಯೋಗೇಶ್ವರ್

Published : Mar 18, 2024, 01:40 PM ISTUpdated : Mar 18, 2024, 01:41 PM IST
CP Yogeshwar

ಸಾರಾಂಶ

ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರೆ ಸುರೇಶ್ ಗೆಲ್ಲುತ್ತಿರಲಿಲ್ಲ. ನಾನು ರಾಜ್ಯ ರಾಜಕೀಯದಲ್ಲೇ ಇರಬೇಕು. ಲೋಕಸಭೆಗೆ ಹೋಗಬಾರದು ಎಂದು ನಿರ್ಧರಿಸಿದ್ದೇನೆ. ಹಾಗಾಗಿ ಡಿಕೆಸು ಅವರನ್ನು ಈ ಬಾರಿ ಬುಡಸಮೇತ ತೆಗೆಯಬೇಕು ಎಂದು ಡಾ.ಮಂಜುನಾಥ್ ಅವರನ್ನು ತಂದಿದ್ದೇವೆ ಎಂದು ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

5 ವರ್ಷಗಳ ಹಿಂದೆ ನಾನು ಬೆಂ.ಗ್ರಾ. ಕ್ಷೇತ್ರದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರೆ ಸುರೇಶ್ ಗೆಲ್ಲುತ್ತಿರಲಿಲ್ಲ. ನಾನು ರಾಜ್ಯ ರಾಜಕೀಯದಲ್ಲೇ ಇರಬೇಕು. ಲೋಕಸಭೆಗೆ ಹೋಗಬಾರದು ಎಂದು ನಿರ್ಧರಿಸಿದ್ದೇನೆ. 

ಹಾಗಾಗಿ ಡಿಕೆಸು ಅವರನ್ನು ಈ ಬಾರಿ ಬುಡಸಮೇತ ತೆಗೆಯಬೇಕು ಎಂದು ಡಾ.ಮಂಜುನಾಥ್ ಅವರನ್ನು ತಂದಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಜೆಡಿಎಸ್-ಬಿಜೆಪಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ಕ್ಷೇತ್ರದಿಂದ ಸ್ಪರ್ಧೆ ಮಾಡದೇ ಈಗಲೂ ನನಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದರು. 

ರಾಜ್ಯ ರಾಜಕೀಯದಲ್ಲಿ ಇರಬೇಕೆಂದು ನನ್ನ ನಿಲುವು, ಪಾರ್ಲಿಮೆಂಟ್ ನನ್ನ ಕ್ಷೇತ್ರವಲ್ಲ. ನನ್ನದೇನಿದ್ದರೂ ರಾಜ್ಯ ರಾಜಕಾರಣ ಎಂದು ನಾನು ಸುಮಾರು ವರ್ಷಗಳ ಹಿಂದೆಯೆ ತೀರ್ಮಾನಿಸಿದ್ದೇನೆ. 

ಹಾಗಾಗಿ ಅವಕಾಶಗಳು ಬಂದರೂ ನಾನು ಸ್ಪರ್ಧಿಸಲಿಲ್ಲ, ನನ್ನ ತೀರ್ಮಾನ ಬದಲಿಸಲಿಲ್ಲ. ಈಗಲೂ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹತಾಶರಾಗಿರುವ ಸುರೇಶ್‌: ಡಿ.ಕೆ.ಸುರೇಶ್ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಒಬ್ಬ ರಾಜಕಾರಣಿ ಸ್ಪರ್ಧಿಸಿದ್ದರೆ ಏನಾದರೂ ಮಾತನಾಡಬಹುದಿತ್ತು. ಆದರೆ, ಮಂಜುನಾಥ್ ಬಗ್ಗೆ ಆಪಾದನೆ ಹೊರೆಸಲು ಸುರೇಶ್‌ಗೆ ಯಾವುದೇ ವಿಚಾರ ಸಿಗುತ್ತಿಲ್ಲ. 

ಮಂಜುನಾಥ್ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಸುರೇಶ್‌ಗೆ ಇಲ್ಲ. ಮಂಜುನಾಥ್ ವಿರುದ್ಧ ಗೆಲವು ಸುಲಭವಿದ್ದರೆ ಕುಕ್ಕರ್, ಸೀರೆ, ಹಣ ಏಕೆ ಕೊಡುತ್ತಿದ್ದರು. ಅವರು ಕೆಲಸ ಮಾಡಿದ್ದರೆ ಇದನ್ನೆಲ್ಲ ಏಕೆ ಹಂಚಬೇಕಿತ್ತು ಎಂದು ಪ್ರಶ್ನಿಸಿದರು.

ಲೋಕಸಭಾ ವ್ಯಾಪ್ತಿಯ ಎಲ್ಲ ೮ ವಿಧಾನಸಭಾ ಕ್ಷೇತ್ರಗಳಲ್ಲೂ ನಾನು ಸುತ್ತಾಡಿದ್ದೇನೆ. ಹೋದ ಕಡೆಯಲ್ಲೆಲ್ಲಾ ಡಾ.ಮಂಜುನಾಥ್ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ.

 ಇಂತವರು ರಾಜಕಾರಣಕ್ಕೆ ಬರಬೇಕು ಎಂದು ಜನ ಬಯಸುತ್ತಿದ್ದಾರೆ. ಎಲ್ಲ ಕಡೆ ಕಾರ್ಯಕರ್ತರಲ್ಲಿ ಉತ್ಸಾಹ ಕಂಡುಬರುತ್ತಿದೆ ಎಂದರು.

ಬೆಂಗಳೂರು ದಕ್ಷಿಣದಲ್ಲಿ ಮುಖಂಡರಿಲ್ಲ: ಬೆಂಗಳೂರು ದಕ್ಷಿಣದಲ್ಲಿ ಕಳೆದ ಬಾರಿ ಸೋತ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸಹೋದರರ ಧೋರಣೆಯಿಂದ ಬೇಸತ್ತು ಈ ಬಾರಿ ಮನೆ ಸೇರಿದ್ದಾರೆ. 

ಏಳೂವರೆ ಲಕ್ಷ ಮತವಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಲು ಮುಖಂಡರು ಮುಂದೆ ಬರುತ್ತಿಲ್ಲ. ಅಲ್ಲಿ ನಾವು ಒಂದು ಲಕ್ಷಕ್ಕೂ ಅಧಿಕ ಲೀಡ್ ಪಡೆಯಲಿದ್ದೇವೆ ಎಂದರು. 

ಆನೇಕಲ್, ರಾಜಾರಾಜೇಶ್ವರಿನಗರ, ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಸುಮಾರು ಹದಿನೇಳು ಲಕ್ಷ ಮತಗಳಿದ್ದು, ಅಲ್ಲಿ ಕಾಂಗ್ರೆಸ್‌ಗೆ ಧ್ವನಿಯೇ ಇಲ್ಲ. ಕಳೆದ ಚುನಾವಣೆಯಲ್ಲಿ ಮುನಿರತ್ನ ಕಾಂಗ್ರೆಸ್‌ನಲ್ಲಿದ್ದರು, ಅಣ್ಣತಮ್ಮ ಇದ್ದರೂ ಸಹ ಬಿಜೆಪಿಗೆ ಅಲ್ಲಿ ೩೦ ಲೀಡ್ ಪಡೆದಿತ್ತು. 

ಈ ಬಾರಿ ಮುನಿರತ್ನ ಬಿಜೆಪಿಯಲ್ಲಿದ್ದಾರೆ. ಇವರ ಪರ ಧ್ವನಿ ಎತ್ತುವವರು ಇಲ್ಲಿ ಯಾರು ಇಲ್ಲ. ಅವರಿಗೆ ಎಂಟು ಕ್ಷೇತ್ರದಲ್ಲಿ ಏನಾಗುತ್ತದೆ ಗೊತ್ತಿಲ್ಲ.

ಚನ್ನಪಟ್ಟಣಕ್ಕೆ ಬರುವುದು ಮುಖಂಡರ ಮನೆಗೆ ಹೋಗಿ ಕಾಂಗ್ರೆಸ್ ಶಾಲು ಹಾಕುವುದು ಮಾಡುತ್ತಿದ್ದಾರೆ. ಅವರಿಗೆ ಮತ್ತೆ ನಾನು ಬಿಜೆಪಿ ಶಾಲು ಹಾಕಿಸುತ್ತೇನೆ ಎಂದು ಕಿಡಿಕಾರಿದರು.

ಕ್ಷೇತ್ರಕೆ ನಿಮ್ಮ ಕೊಡುಗೆ ಏನು?
ನಿಮ್ಮ 10 ವರ್ಷದ ಸಂಸತ್ ಅವಧಿಯಲ್ಲಿ ಚನ್ನಪಟ್ಟಣ, ರಾಮನಗರಕ್ಕೆ ಎಷ್ಟು ಅನುದಾನ ನೀಡಿದ್ದೀರಾ ಎಂದು ಶ್ವೇತ ಪತ್ರ ಹೊರಡಿಸಿ. ಯಾವ ಸಂಘ ಸಂಸ್ಥೆಗಳಿಗೆ ಹಣ ಕೊಟ್ಟಿದ್ದೀರಾ ತಿಳಿಸಿ. ಅವರದೇ ಟ್ರಸ್ಟ್ ಮಾಡಿಕೊಂಡು ಎಲ್ಲ ಹಣ ಬಳಸಿಕೊಳ್ಳುತ್ತಿದ್ದಾರೆ. 

ಇದರ ಲೆಕ್ಕ ಕೇಳುವವರಿಲ್ಲ. ಅವರ ಉಡಾಫೆಗೆ ಈ ಚುನಾವಣೆಯಲ್ಲಿ ಜನ ಉತ್ತರ ನೀಡಲಿದ್ದಾರೆ. ನಾವು ಜೆಡಿಎಸ್ ಕಿತ್ತಾಡಿಕೊಂಡು ಅವರಿಗೆ ಲಾಭ ಮಾಡಿಕೊಡುತ್ತಿದ್ದೆವು. 

ಇದು ನಮ್ಮ ದೌರ್ಭಾಗ್ಯ. ಈಗ ನಾವು, ಜೆಡಿಎಸ್‌ನವರು ಒಂದಾಗಿದ್ದೇವೆ. ದೇವೇಗೌಡರು ಬಿಜೆಪಿ ಜತೆ ಮೈತ್ರಿಗೆ ಮನಃಪೂರ್ವಕ ಸಮ್ಮತಿಸಿದ್ದಾರೆ.

ನಮಗ್ಯಾರಿಗೂ ವೈಯಕ್ತಿಕ ದ್ವೇಷವಿಲ್ಲ. ಪಕ್ಷದ ಸಿದ್ಧಾಂತದ ಕಾರಣಕ್ಕೆ ಬೇರೆ ಇದ್ದೆವು, ಇದೀಗ ಒಂದಾಗಿದ್ದು, ಮುಂದೆ ಮಾರಿಹಬ್ಬ ಮಾಡಲಿದ್ದೇವೆ ಎಂದರು.

PREV
Get the latest news from Ramanagara district (ಬೆಂಗಳೂರು ದಕ್ಷಿಣ ಸುದ್ದಿ) — covering local developments, civic issues, agriculture, industry, tourism, culture, infrastructure and community stories. Stay updated with timely reports and in-depth coverage from Ramanagara (now Bengaluru South) via Kannada Prabha.

Recommended Stories

ಸ್ವಾಮಿ ವಿವೇಕಾನಂದರ ತತ್ವಾದರ್ಶ ಅನುಸರಿಸಿ: ಯೋಗೇಶ್ ಚಕ್ಕೆರೆ
ಸ್ವಾಮಿ ವಿವೇಕಾನಂದರ ತತ್ವಾದರ್ಶ ಯುವಕರಿಗೆ ಸಂಜೀವಿನಿ