ಕನಕಪುರ: ದಲಿತರ ಉದ್ದಾರವೇ ನಮ್ಮ ಪಕ್ಷದ ಸಿದ್ದಾಂತ ಎಂದು ದಲಿತ ಸಮುದಾಯದ ಮತಗಳಿಂದ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ ಸಮುದಾಯಕ್ಕೆ ಗ್ಯಾರಂಟಿ ಹೆಸರಿನಲ್ಲಿ ಟೋಪಿ ಹಾಕಿದೆ ಎಂದು ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸುಮಾರು 15,000 ಕೋಟಿಯಷ್ಟು ಹಣ ಮುಂಬರುವ ಬಜೆಟ್‌ನಲ್ಲಿ ಮತ್ತೆ ದುರ್ಬಳಕೆ ಮಾಡಲು ರಾಜ್ಯ ಸರ್ಕಾರ ಹೊಂಚು ಹಾಕಿದ್ದು ಗ್ಯಾರಂಟಿ ಯೋಜನೆಗಳಿಗಾಗಿ ದಲಿತರ ಮೀಸಲು ನಿಧಿಯನ್ನು ಬಳಸಿ ದಲಿತರ ಹಕ್ಕನ್ನು ಕಬಳಿಸಿದೆ. 2023 ಮತ್ತು 2026ರವರೆಗೆ ‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ’ಯಿಂದ ₹38,859 ಕೋಟಿ ಹಣವನ್ನು ಗ್ಯಾರಂಟಿ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಸರ್ಕಾರ ದುರ್ಬಳಸಿಕೊಂಡಿದೆ. ಅಲ್ಪಸಂಖ್ಯಾತರಿಗೆಂದೇ ಬಜೆಟ್‌ನಲ್ಲಿ ತೆಗೆದಿರಿಸಲಾಗಿದ್ದ ಅನುದಾನ, ದಲಿತರ ಕಾಲೋನಿಗಳಿಗೆ, ಆದಿವಾಸಿ ಹಾಡಿಗಳಿಗೆ ಮೂಲಸೌಕರ್ಯಗಳಿಗೆ ಇಟ್ಟಿದ್ದ ಮೀಸಲು ಹಣ ಹಾಗೂ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ವೇತನದ ಹಣವನ್ನು ತಮ್ಮ ಪ್ರಚಾರದ ಹುಚ್ಚಿಗೆ ಬಳಸಿಕೊಂಡು ದಲಿತ ದ್ರೋಹಿ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.
2025/26 ಸಾಲಿನ ಬಜೆಟ್‌ನಲ್ಲಿ ಸುಮಾರು 42,000 ಸಾವಿರ ಕೋಟಿ ನಿಗದಿ ಮಾಡಿದ್ದು ಇದರಲ್ಲಿ ಗ್ಯಾರಂಟಿ ಯೋಜನೆಗಳಿಗೆ ಸೇರಿದಂತೆ ಎಸ್‌ಸಿಟಿಪಿ ಹಾಗೂ ಟಿಎಸ್‌ಪಿಗೆ ಖರ್ಚಾಗಿರುವುದು ಕೇವಲ 13,000 ಸಾವಿರ ಕೋಟಿ ಮಾತ್ರ. 18,000 ಕೋಟಿ ಹಣ ಉಳಿದಿದ್ದು 7ಡಿ ಅನ್ವಯ ಇದಕ್ಕೆ ಯಾರನ್ನು ಶಿಕ್ಷಿಸಬೇಕು ಎಂದು ಪ್ರಶ್ನಿಸಿದ, ಅಂಬೇಡ್ಕರ್, ಆದಿಜಾಂಬವ, ತಾಂಡಾ, ಬೋವಿ, ವಾಲ್ಮೀಕಿ ಹಾಗೂ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳು ಸರ್ಕಾರದ ಹಣಕಾಸಿನ ನೆರವಿಲ್ಲದೆ ಈಗಾಗಲೇ ಸೊರಗಿದ್ದು ಸಾರಿಗೆ–ನೌಕರರ ಸಂಬಳಕ್ಕೂ ಕಾಸಿಲ್ಲದೆ ದಿವಾಳಿ ಸ್ಥಿತಿಯಲ್ಲಿದೆ ಎಂದು ದೂರಿದರು.ಮಾನ್ಯ ಮುಖ್ಯಮಂತ್ರಿಗಳು ಈ ಬಾರಿ ಮಂಡಿಸುವ ಬಜೆಟ್ ವೇಳೆ ಕಳೆದ ಎರಡು ವರ್ಷಗಳ ಅನುದಾನ ಹಂಚಿಕೆ ಹಾಗೂ ಈ ಸಾಲಿನ ಮೀಸಲು ಅನುದಾನದ ಬಗ್ಗೆ ಅಂಕಿ-ಅಂಶ ಸಮೇತ ರಾಜ್ಯದ ಜನತೆಗೆ ತಿಳಿಸುವ ಜೊತೆಗೆ ಕಳೆದ 3 ವರ್ಷಗಳಿಂದ ದುರ್ಬಳಕೆಯಾಗಿರುವ ಸಮುದಾಯದ ಮೀಸಲು ಹಣವನ್ನು ವಾಪಸ್ ನೀಡಿ ಈ ಹಣದಲ್ಲಿ ಎಲ್ಲಾ ಜಿಲ್ಲೆಯ ದಲಿತರ ಅಭಿವೃದ್ಧಿ ಹಾಗೂ ಮೂಲ ಸೌಲಭ್ಯ ಒದಗಿಸಬೇಕು. ಈ ಬಾರಿ ಬಜೆಟ್‌ನಲ್ಲಿ ಮೀಸಲು ಹಣ ಮುಟ್ಟುವುದಿಲ್ಲ ಎಂದು ಘೋಷಿಸಿ ಎಲ್ಲಾ ಎಸ್ಸಿ/ ಎಸ್ಟಿ ನಿಗಮಗಳಿಗೆ ಕನಿಷ್ಠ ತಲಾ ಒಂದು ಸಾವಿರ ಕೋಟಿ ಅನುದಾನ ಮೀಸಲಿಟ್ಟು ಬಾಬಾ ಸಾಹೇಬರ ಆಶಯವನ್ನ ಈಡೇರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ದಲಿತರ ಸಂಘಟನೆಗಳೊಂದಿಗೆ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಬೀಮಪಡೆ ಜಿಲ್ಲಾಧ್ಯಕ್ಷ ಭರತ್ ಕುಮಾರ್, ಚಿಕ್ಕ ವೀರಭದ್ರಯ್ಯ, ಸತೀಶ್, ಶ್ರೀನಿವಾಸ ಮೂರ್ತಿ ಮುತ್ತುರಾಜ್ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 01:
ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.