;Resize=(412,232))
ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಬಿಡದಿ ಹೋಬಳಿ ಮಂಡಲಹಳ್ಳಿ ಗ್ರಾಮದಲ್ಲಿ ಸೋಮವಾರ ಜಂಟಿ ಸರ್ವೇ (ಜೆಎಂಸಿ)ಗೆ ಬಂದಿದ್ದ ಜಿಬಿಡಿಎ ಅಧಿಕಾರಿಗಳ ಮೇಲೆ ರೈತ ಮಹಿಳೆಯರು ಪೊರಕೆಯಿಂದ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿದ್ದು, ಎರಡು ವಾಹನಗಳು ಜಖಂಗೊಂಡಿವೆ. ರೈತರ ತೀವ್ರ ವಿರೋಧಕ್ಕೆ ಹೆದರಿ ಅಧಿಕಾರಿಗಳು ಸ್ಥಳದಿಂದ ಕಾಲ್ಕಿತ್ತಿದ್ದು, ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದು, ಆ ಪೈಕಿ, ಪೊಲೀಸ್ ಅಧಿಕಾರಿಯೊಬ್ಬರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಜಿಬಿಡಿಎಯ ಕೆಲ ಅಧಿಕಾರಿಗಳಿಗೆ ತರುಚಿದ ಗಾಯಗಳಾಗಿವೆ. ತಳ್ಳಾಟ ನೂಕಾಟದಲ್ಲಿ ಅಸ್ವಸ್ಥಗೊಂಡ ಕೆಂಪಶೆಟ್ಟಿದೊಡ್ಡಿ ಗ್ರಾಮದ ರೈತ ಕೃಷ್ಣಪ್ಪ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಡದಿ ಟೌನ್ ಶಿಪ್ ಯೋಜನೆಗಾಗಿ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ವಡೇರಹಳ್ಳಿ ಗ್ರಾಮಗಳ ಭೂಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಈ ಪೈಕಿ ಬೈರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡಲಹಳ್ಳಿ ಗ್ರಾಮದಲ್ಲಿ 70 ಎಕರೆ 37 ಗುಂಟೆ ಜಮೀನನ್ನು ಭೂ ಸ್ವಾಧೀನಕ್ಕಾಗಿ ಗುರುತಿಸಲಾಗಿದೆ.
ಮಂಡಲಹಳ್ಳಿಯಲ್ಲಿ 27 ಭೂ ಮಾಲೀಕರ ಪೈಕಿ 23 ಮಂದಿ ಟೌನ್ ಶಿಪ್ ಯೋಜನೆಗೆ ಭೂಮಿ ಕೊಡಲು ಒಪ್ಪಿಗೆ ಪತ್ರ ನೀಡಿದ್ದು, ಉಳಿದ 3 ರೈತರು ಮಾತ್ರ ವಿರೋಧ ಮಾಡುತ್ತಿದ್ದರು. ಒಪ್ಪಿಗೆ ನೀಡಿರುವ ರೈತರ ಭೂಮಿಯ ಜಂಟಿ ಸರ್ವೇ (ಜೆಎಂಸಿ) ಮಾಡಲು ಬೆಳಗ್ಗೆ 11 ಗಂಟೆಗೆ ಜಿಬಿಡಿಎ ಅಧಿಕಾರಿಗಳು ಏಳೆಂಟು ವಾಹನಗಳಲ್ಲಿ ಮಂಡಲಹಳ್ಳಿಗೆ ಆಗಮಿಸಿದ್ದರು.
ಈ ವೇಳೆ, ಸರ್ವೇ ಕಾರ್ಯಕ್ಕೆ ಕೆಲ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಪೊಲೀಸರು, ಭೂಮಿ ಕೊಡಲು ಒಪ್ಪಿರುವ ರೈತರ ಜಮೀನುಗಳ ಸರ್ವೇ ಮಾಡಲಾಗುತ್ತಿದ್ದು, ವಿರೋಧ ಮಾಡುವವರ ಜಮೀನು ಸರ್ವೇ ಮಾಡುವುದಿಲ್ಲ ಎಂದು ತಿಳಿ ಹೇಳಿದರು. ಆಗ ಸ್ಥಳೀಯರು ಬೈರಮಂಗಲ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಮಾಹಿತಿ ನೀಡಿದರು. ಈ ವೇಳೆ, ಮಂಡಲಹಳ್ಳಿಗೆ ಆಗಮಿಸಿದ ರೈತರು ಮತ್ತು ರೈತ ಮಹಿಳೆಯರು ಆಕ್ರೋಶಭರಿತರಾಗಿ ಸರ್ವೇಗಾಗಿ ಬಂದಿದ್ದ ಜಿಬಿಡಿಎ ಅಧಿಕಾರಿಗಳ ಮೇಲೆ ಮುಗಿಬಿದ್ದರು.
ಜಮೀನುಗಳಲ್ಲಿ ನಿಂತು ಸರ್ವೇ ಮಾಡುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಟ್ಟಾಡಿಸಿದರು, ಅವರನ್ನು ಹಿಡಿದು ಎಳೆದಾಡಿದರು. ರೈತ ಮಹಿಳೆಯರು ಅಧಿಕಾರಿಗಳ ಮೇಲೆ ಪೊರಕೆಯಿಂದ ಹಲ್ಲೆ ನಡೆಸಿದರೆ, ಉದ್ರಿಕ್ತ ಗುಂಪು ಕಲ್ಲು ತೂರಿತು. ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ ಕೆಲ ರೈತರು ಕೈಯಲ್ಲಿ ವಿಷದ ಬಾಟಲಿ ಹಿಡಿದು, ನಾವು ಪ್ರಾಣ ಬೇಕಾದರೂ ಬಿಡುತ್ತೇವೆ. ಟೌನ್ ಶಿಪ್ ಗೆ ಭೂಮಿ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪೊಲೀಸರು, ಅಧಿಕಾರಿಗಳನ್ನು ಇನ್ನೋವಾ ಕಾರಿನಲ್ಲಿ ಕೂರಿಸಿ ಕಳುಹಿಸಲು ಮುಂದಾದಾಗ, ರೈತ ಮಹಿಳೆಯರು ಕಾರನ್ನು ಅಡ್ಡಗಟ್ಟಲು ಯತ್ನಿಸಿದರು. ಇದೇ ವೇಳೆ, ಕೆಲವರು ಕಾರಿನ ಮೇಲೆ ಕಲ್ಲು ತೂರಿದ್ದು, ಇದರಿಂದ ಕಾರಿನ ಹಿಂಬದಿ ಗಾಜು ಪುಡಿ ಪುಡಿಯಾಗಿದೆ. ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದು, ಆ ಪೈಕಿ ಪೊಲೀಸ್ ಅಧಿಕಾರಿಯೊಬ್ಬರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಇದೇ ವೇಳೆ, ಕೆಂಪಶೆಟ್ಟಿದೊಡ್ಡಿ ಗ್ರಾಮದ ಕೃಷ್ಣಪ್ಪ ಎಂಬುವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕೆಲ ರೈತರನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಪೊಲೀಸರ ಮೇಲೆ ಕಲ್ಲು ತೂರಿ ಗಾಯಗೊಳಿಸಿರುವ ಸಂಬಂಧ ಪ್ರಕರಣ ದಾಖಲಾಗಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳು ನೀಡುವ ದೂರಿನ ಮೇರೆಗೆ ತಪ್ಪಿತಸ್ಥ ರೈತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಚಿತಾವಣೆಯಿಂದ ಸರ್ವೇ ನಡೆಸಲು ಅಧಿಕಾರಿಗಳು ಏಕಾಏಕಿ ಬಂದಿದ್ದು, ಅವರ ವಿರುದ್ಧ ರೈತ ಮಹಿಳೆಯರು ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸರ್ಕಾರದ ಬೇಜವಾಬ್ದಾರಿ ಮತ್ತು ಚಿತಾವಣೆಯೇ ಕಾರಣ. ಆದರೆ, ಕೆಟ್ಟ ಘಟನೆಗಳಿಗೆ ಅವಕಾಶ ಕೊಡಬೇಡಿ ಎಂದು ರೈತರಿಗೆ ಮನವಿ ಮಾಡುತ್ತೇನೆ. ಶಾಂತಿಯುತ ಹೋರಾಟ ಮುಂದುವರೆಸಿ.
- ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ.
ಹೇರಿಕೆ ಖಂಡನೀಯ; ನಿಖಿಲ್
ರೈತರ ಭಾವನೆಗಳು, ಜೀವನೋಪಾಯದ ಬಗ್ಗೆ ಕನಿಷ್ಠ ಕಾಳಜಿ ಇಲ್ಲದ ಸರ್ಕಾರ, ಯಾವುದೇ ಸಮಾಲೋಚನೆ ನಡೆಸದೆ ಯೋಜನೆಯನ್ನು ತಲೆ ಮೇಲೆ ಹೇರಲು ಹೊರಟಿರುವುದು ಖಂಡನೀಯ. ರೈತರ ಹಿತಕ್ಕೆ ಧಕ್ಕೆ ತರುವ ಯಾವುದೇ ನಿರ್ಧಾರವನ್ನು ಜೆಡಿಎಸ್ ಸಹಿಸುವುದಿಲ್ಲ. ಬಂಧನಕ್ಕೊಳಗಾದ ರೈತರನ್ನು ತಕ್ಷಣ ಬಿಡುಗಡೆ ಮಾಡಬೇಕು.
- ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ.
ಮಂಡಲಹಳ್ಳಿಯಲ್ಲಿ ಏನಾಯ್ತು?
ಬಿಡದಿ ಟೌನ್‌ಶಿಪ್‌ಗೆ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ, ವಡೇರಹಳ್ಳಿಯಲ್ಲಿ ಭೂಸ್ವಾಧೀನ
ಮಂಡಲಹಳ್ಳಿ ಗ್ರಾಮದಲ್ಲಿ 70 ಎಕರೆ 37 ಗುಂಟೆ ಜಮೀನನ್ನು ಭೂ ಸ್ವಾಧೀನಕ್ಕಾಗಿ ಗುರುತು
ಗ್ರಾಮದ 27 ಭೂಮಾಲೀಕರ ಪೈಕಿ 23 ರೈತರಿಂದ ಸರ್ಕಾರಕ್ಕೆ ಭೂಮಿ ನೀಡಲು ಒಪ್ಪಿಗೆ
ಈ ಭೂಮಿ ಜಂಟಿ ಸಮೀಕ್ಷೆಗಾಗಿ ಸೋಮವಾರ ಆಗಮಿಸಿದ್ದ ಜಿಬಿಡಿಎ ಅಧಿಕಾರಿಗಳ ತಂಡ
ಈ ವೇಳೆ ಭೂಮಿ ನೀಡಲು ನಿರಾಕರಿಸಿದ್ದ ಕೆಲ ಭೂಮಾಲೀಕರಿಂದ ಭೂಸಮೀಕ್ಷೆಗೆ ಆಕ್ಷೇಪ
ಭೂಮಿ ನೀಡಲು ಒಪ್ಪಿದವರ ಜಮೀನು ಮಾತ್ರ ಸಮೀಕ್ಷೆ ಎಂದರೂ ಒಪ್ಪಂದ ಭೂಮಾಲೀಕರು
ಏಕಾಏಕಿ ಅಧಿಕಾರಿಗಳ ಮೇಲೆ ಕಲ್ಲುತೂರಾಟ, ಮಹಿಳೆಯರಿಂದ ಅಧಿಕಾರಿಗಳಿಗೆ ಪೊರಕೆ ಏಟು
ದಾಳಿಯಿಂದ ಆತಂಕಗೊಂಡ ಸ್ಥಳದಿಂದ ಓಡಿ ಹೋಗಿ ವಾಹನ ಏರಿದ ಅಧಿಕಾರಿಗಳ ತಂಡ
ಆದರೂ ಬಿಡದ ಅಧಿಕಾರಿಗಳ ಮೇಲೆ, ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಡಿ ಹಿಂಸೆ