ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಡದಿ ಟೌನ್‌ಶಿಪ್‌ ಯೋಜನೆ ಸಂಬಂಧ ಸಾರ್ವಜನಿಕರಲ್ಲಿ ಹಾಗೂ ರೈತರಲ್ಲಿ ಇರುವ ಗೊಂದಲಗಳ ನಿವಾರಿಸಲು ಈ ಯೋಜನೆ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬಿಡದಿಯಲ್ಲಿ ಇವತ್ತು ಸರ್ಕಾರಿ ಅಧಿಕಾರಿಗಳು ಮತ್ತು ಅನ್ನದಾತ ರೈತರ ನಡುವೆ ನಡೆದಿರುವ ಸಂಘರ್ಷ ಅತ್ಯಂತ ಕಳವಳಕಾರಿಯಾಗಿದೆ. ರೈತರ ಹಿತರಕ್ಷಣೆ ಬಲಿಕೊಟ್ಟು ಬಲವಂತದ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ನಿಲುವು ಖಂಡನೀಯ ಎಂದು ಕಿಡಿಕಾರಿದ್ದಾರೆ.

5 ವರ್ಷಗಳ ಮಾಹಿತಿ ಕೊಡಿ:

​ಬಿಡದಿ ಟೌನ್‌ಶಿಪ್ ವ್ಯಾಪ್ತಿಯಲ್ಲಿ 5 ವರ್ಷಗಳ ಹಿಂದೆ ಇದ್ದ ಸರ್ಕಾರಿ ಜಮೀನು ಎಷ್ಟು? ಪ್ರಸ್ತುತ ಲಭ್ಯವಿರುವ ಸರ್ಕಾರಿ ಜಮೀನು ಎಷ್ಟು? ಜಾನುವಾರುಗಳ ಮೇಯಿಸಲು ಮೀಸಲಿದ್ದ ಗೋಮಾಳ ಜಮೀನು ಐದು ವರ್ಷಗಳ ಹಿಂದೆ ಎಷ್ಟಿತ್ತು? ಅದರ ಇಂದಿನ ಸ್ಥಿತಿಗತಿ ಏನು? ಈ ಯೋಜನೆ ಒಳಪಡುವ ಪ್ರದೇಶದಲ್ಲಿ ಈವರೆಗೆ ಒಟ್ಟು ಎಷ್ಟು ಎಕರೆ ಸರ್ಕಾರಿ ಮತ್ತು ಗೋಮಾಳ ಜಮೀನು ಅಕ್ರಮವಾಗಿ ಒತ್ತುವರಿಯಾಗಿದೆ ಎಂದು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.


ಶ್ವೇತಪತ್ರಕ್ಕೆ ಹಿಂದೇಟು ಏಕೆ?

ಭೂಸ್ವಾಧೀನ ನಿಯಮಗಳ ಪ್ರಕಾರ ಯಾವುದೇ ಯೋಜನೆಗೆ ಕನಿಷ್ಠ ಶೇ.80ರಷ್ಟು ರೈತರ ಒಪ್ಪಿಗೆ ಅತ್ಯಗತ್ಯವಾಗಿದೆ. ಪರಿಸ್ಥಿತಿ ಹೀಗಿದ್ದರೂ ನಿಯಮಗಳನ್ನು ಗಾಳಿಗೆ ತೂರಿ ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವುದು ಏಕೆ? ಈ ಕುರಿತು ಸತ್ಯಾಸತ್ಯತೆಗಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಸರ್ಕಾರ ಶ್ವೇತಪತ್ರ ಹೊರಡಿಸಲು ಏಕೆ ಹಿಂದೇಟು ಹಾಕುತ್ತಿದೆ? ​ರೈತರ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳುವ ಪ್ರಯತ್ನವನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಈ ನಾಲ್ಕು ಪ್ರಮುಖ ಪ್ರಶ್ನೆಗಳಿಗೆ ಸರ್ಕಾರ ತಕ್ಷಣವೇ ಪಾರದರ್ಶಕವಾಗಿ ಉತ್ತರಿಸಬೇಕು ಎಂದು ರವಿಕುಮಾರ್ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.-------