ಬರದ ನಡುವೆ ರಾಮನಗುಡ್ಡ ಕೆರೆ ಭರ್ತಿ!

KannadaprabhaNewsNetwork |  
Published : Sep 17, 2026, 01:30 AM IST
 ಹರಿದ ನೀರು | Kannada Prabha

ಸಾರಾಂಶ

ತಾಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು ನೀರು ಹರಿಯುತ್ತಿದ್ದು, ಹನೂರು ಸುತ್ತಮುತ್ತಲಿನ ಗ್ರಾಮಗಳ ರೈತರಲ್ಲಿ ಸಂಭ್ರಮ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು ನೀರು ಹರಿಯುತ್ತಿದ್ದು, ಹನೂರು ಸುತ್ತಮುತ್ತಲಿನ ಗ್ರಾಮಗಳ ರೈತರಲ್ಲಿ ಸಂಭ್ರಮ ಮೂಡಿಸಿದೆ.

ಸತತ ಮಳೆ ಕೊರತೆ ಹಾಗೂ ಬರದ ಛಾಯೆಯಿಂದ ಕಂಗೆಟ್ಟಿದ್ದ ರೈತರಿಗೆ ಕೆರೆ ಭರ್ತಿಯಾಗಿರುವುದು ಹೊಸ ಆಶಾಭಾವನೆ ಮೂಡಿಸಿದೆ. ಬೇಸಿಗೆಯ ಬರದ ಸಂದರ್ಭದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ವಿಶೇಷ ಪ್ರಯತ್ನದಿಂದ ಕಾವೇರಿ ನದಿ ಮೂಲದಿಂದ ಪೈಪ್‌ಲೈನ್ ಮೂಲಕ ಕೆರೆಗೆ ನೀರು ತುಂಬಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಇದರ ಪರಿಣಾಮ ಬೇಸಿಗೆಯಲ್ಲೂ ಕೆರೆಯಲ್ಲಿ ನೀರು ಉಳಿದಿತ್ತು. ಇದೀಗ ಕಳೆದ ಕೆಲವು ದಿನಗಳಿಂದ ಸುರಿದ ಉತ್ತಮ ಮಳೆಗೆ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದೆ.

980 ಎಕರೆ ನೀರಾವರಿ ಯೋಜನೆಗೆ ಅನುಕೂಲ:

ಸುಮಾರು 40 ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಕೆರೆಯ ಅಚ್ಚುಕಟ್ಟು ಪ್ರದೇಶ 980 ಎಕರೆ ಇದೆ. ಕೆರೆ ಭರ್ತಿಯಿಂದ ಅಚ್ಚುಕಟ್ಟು ಪ್ರದೇಶ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ರೈತರು ಆತ್ಮವಿಶ್ವಾಸದಿಂದ ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದಾರೆ. ಕೆರೆಯ ಎಡದಂಡೆ 3.95 ಎಕರೆ ಹಾಗೂ ಬಲದಂಡೆ 4.20 ಎಕರೆ ವಿಸ್ತೀರ್ಣ ಹೊಂದಿದೆ.

ಅಂತರ್ಜಲ ಹೆಚ್ಚಳ, ರೈತರ ಮೊಗದಲ್ಲಿ ಮಂದಹಾಸ:

ಕೆರೆ ಭರ್ತಿಯಿಂದ ಕೇವಲ ಅಚ್ಚುಕಟ್ಟು ಪ್ರದೇಶಕ್ಕೆ ಮಾತ್ರವಲ್ಲ, ಸುತ್ತಮುತ್ತಲಿನ ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ತೋಮಿಯರ್ ಪಾಳ್ಯ, ಕೆ.ವಿ.ಎನ್. ದೊಡ್ಡಿ, ಎಂ.ಟಿ. ದೊಡ್ಡಿ ಸೇರಿದಂತೆ ಹಲವು ಗ್ರಾಮಗಳ ತೋಡುಬಾವಿ, ಕೊಳವೆಬಾವಿಗಳ ಅಂತರ್ಜಲ ಮಟ್ಟ ಸುಧಾರಣೆಯಾಗುವ ನಿರೀಕ್ಷೆ ಇದೆ. ಕುಡಿಯುವ ನೀರಿನ ಮೂಲಗಳ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ಜಾನುವಾರಿಗೂ ಅನುಕೂಲವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೋಡಿ ಬಿದ್ದು ಹರಿಯುವ ನೀರಿನ ದೃಶ್ಯ ವೀಕ್ಷಿಸಲು ರೈತರು, ಸಾರ್ವಜನಿಕರು ಕೆರೆ ಬಳಿ ಜಮಾಯಿಸುತ್ತಿದ್ದಾರೆ. ಬರದ ಸಂದರ್ಭದಲ್ಲಿ ಕೆರೆ ಸಂರಕ್ಷಣೆ, ಹೂಳು ತೆಗೆಯುವಿಕೆ ಮತ್ತು ಕಾಲುವೆ ನಿರ್ವಹಣೆಗೆ ಆದ್ಯತೆ ನೀಡಬೇಕೆಂದು ರೈತರು ಮನವಿ ಮಾಡಿದ್ದಾರೆ. ಒಟ್ಟಾರೆ 40 ವರ್ಷಗಳ ನಂತರ ಕೋಡಿ ಬಿದ್ದ ರಾಮನಗುಡ್ಡ ಕೆರೆ ಈ ಭಾಗದ ಕೃಷಿ ಆರ್ಥಿಕತೆಗೆ ಬಲ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಂತಿಯುತವಾಗಿ ಮುಕ್ತಾಯಗೊಂಡ 108 ಗಣಪತಿ ಮೂರ್ತಿಗಳ ಸಾಮೂಹಿಕ ವಿಸರ್ಜನೆ
ಪ್ರಜಾಪ್ರಭುತ್ವಕ್ಕೆ ಶಕ್ತಿ ಕೊಟ್ಟಿದ್ದೇ ಸಂವಿಧಾನ