ಮಂಗಳೂರು: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಆ ದೇಶದಲ್ಲಿ ಮಧ್ಯಂತರ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದು, ಅದೇ ಪರಿಸ್ಥಿತಿ ನಮ್ಮ ದೇಶದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಟ್ಟಿದೆ. ಮುಂದಿನ ದಿನಗಳಲ್ಲಿ ಅದರ ಪರಿಣಾಮ ಗೊತ್ತಾಗಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ ದೇಶವ್ಯಾಪಿ ಹಮ್ಮಿಕೊಂಡಿರುವ ‘ವೋಟ್ ಬಚಾವೋ- ದೇಶ್ ಬಚಾವೋ’ ಜನಾಂದೋಲನದ ಭಾಗವಾಗಿ ಗುರುವಾರ ಇಲ್ಲಿನ ಕ್ಲಾಕ್ ಟವರ್ ಬಳಿ ದ.ಕ. ಕಾಂಗ್ರೆಸ್ ಜಿಲ್ಲಾ ಸಮಿತಿ ಆಯೋಜಿಸಿದ ಪ್ರತಿಭಟನೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಪ್ರಜಾಪ್ರಭುತ್ವವನ್ನು ಅಲುಗಾಡಿಸಲು ಹೊರಟಿರುವ ಬಿಜೆಪಿಯವರು ಪ್ರಜಾಪ್ರಭುತ್ವ ಉಳಿಸಿ ಎಂದು ಯಾರಿಗೆ ಕರೆ ಕೊಡುತ್ತೀರಿ ಎಂದು ಪ್ರಶ್ನಿಸಿದರು.
ಈ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕುಗಳ ಸಂರಕ್ಷಣೆಗಾಗಿ ಕಾಂಗ್ರೆಸ್ ರಸ್ತೆಗಿಳಿದು ಹೋರಾಟ ಮಾಡುತ್ತದೆ. ನಮ್ಮ ಹೋರಾಟ ಮನೆ ಮಕ್ಕಳಿಗೂ ಗೊತ್ತಾಗಿದೆ. ಪ್ರಜಾಪ್ರಭುತ್ವ ರಕ್ಷಣೆಗೆ ಕಾಂಗ್ರೆಸ್ ಬದ್ಧವಾಗಿದೆ. ಪ್ರಜಾಪ್ರಭುತ್ವದ ಬಗ್ಗೆ ಬಿಜೆಪಿಯವರಿಗೆ ಗೌರವ ಇದ್ದರೆ ಕೂಡಲೇ ಎಸ್ ಐಆರ್ ರದ್ದು ಮಾಡಬೇಕು ಎಂದರು.ಮನೆ ಮನೆಗೆ ಅಭಿಯಾನ:
ಎಸ್ ಐಆರ್ ಹೆಸರಿನಲ್ಲಿ ಅರ್ಹ ಮತದಾರರನ್ನು ಮತಪಟ್ಟಿಯಿಂದ ಕೈ ಬಿಡುವ ವೋಟ್ ಚೋರಿ ಕೆಲಸ ನಡೆಯುತ್ತಿದೆ. ನಾವು ಜಾಗೃತರಾಗಬೇಕು, ಪ್ರತಿ ಬೂತ್‌ನಲ್ಲಿ ಮತದಾರರ ಪಟ್ಟಿ ಹಿಡಿದು, ಯಾರ ಹೆಸರು ಸೇರ್ಪಡೆಯಾಗಿದೆ ಎಂದು ಪರಿಶೀಲಿಸಿ ಕೈಬಿಟ್ಟವರನ್ನು ಫಾರ್ಮ್ 6ರ ಮೂಲಕ ಮತದಾರರ ಪಟ್ಟಿಗೆ ಸೇರಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.