ಕನ್ನಡಪ್ರಭ ವಾರ್ತೆ ಮೇಲುಕೋಟೆ
ಹತ್ತು ದಿನಗಳ ಅವಧಿಯಲ್ಲಿ ರಾಮಾನುಜಾಚಾರ್ಯರಿಗೆ ವೈವಿಧ್ಯಮಯ ಅಲಂಕಾರಗಳು ನಡೆಯಲಿವೆ. ಮೊದಲ ದಿನ ರಾಮಾನುಜಾಚಾರ್ಯರಿಗೆ ಪುಷ್ಪಾಲಂಕೃತ ಸಮರ ಭೂಪಾಲವಾಹನೋತ್ಸವದೊಂದಿಗೆ ಮಹೋತ್ಸವ ಆರಂಭವಾಗಲಿದೆ. ಈ ನಿಮಿತ್ತ ಚೆಲುವನಾರಾಯಣಸ್ವಾಮಿ ದೇವಾಲಯದ ಪೂಜಾ ಕೈಂಕರ್ಯಗಳು 10 ದಿನಗಳ ಕಾಲವೂ ಬೆಳಗಿನ 5.30ಕ್ಕೆ ಆರಂಭವಾಗಲಿವೆ.
ಪ್ರತಿದಿನ ಬೆಳಗ್ಗೆ 8 ಗಂಟೆಗೆ ವಿವಿದ ವಾಹನೋತ್ಸವಗಳು ದಿವ್ಯಪ್ರಬಂಧ ಪಾರಾಯಣ ಮಂಗಳವಾದ್ಯದೊಡನೆ ಚತುರ್ವೀದಿಗಳಲ್ಲಿ ನಡೆಯಲಿದೆ. ನಂತರ ವಾಹನೋತ್ಸವ ಮಂಟಪದಲ್ಲಿ ತಿರುವಾರಾಧನೆ ಮತ್ತು ಗೋಷ್ಠಿ ನಡೆಯಲಿದೆ.ಏ.14ರಂದು ಹಂಸವಾಹನ, ಏ.15 ಸೂರ್ಯಮಂಡಲವಾಹನೋತ್ಸವ, ಏ.16 ಚಂದ್ರಮಂಡಲವಾಹನೋತ್ಸವ, ಏ.17 ರಂದು ಅಶ್ವವಾಹನೋತ್ಸವ, ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ, ಏ.18ಶ್ರೀಪೆಂಬುದೂರಿನ ಮಾಲೆ ಮರ್ಯಾದೆ ಸಮರ್ಪಣೆ, ರಾತ್ರಿ ಗೋವಿಂದರಾಜಮುಡಿ ಉತ್ಸವ ನಡೆಯಲಿದೆ.
ಆಚಾರ್ಯರ ಕರ್ಮಭೂಮಿಯಲ್ಲಿ ಏ.22 ರಂದು ಇಡೀ ದಿನ ರಾಮಾನುಜರ ಜಯಂತ್ಯುತ್ಸವ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರು ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕೈಂಕರ್ಯಗಳನ್ನು ಅನುಸರಿಸಿ ದೇವರದರ್ಶನ ಪಡೆದು ಸಹಕರಿಸಬೇಕು ಎಂದು ದೇಗುಲದ ಇಒ ಶೀಲಾ, ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಆನಂದಾಳ್ವಾರ್ ಪರಿಚಾರಕ ಹಾಗೂ ಪಾರುಪತ್ತೇಗಾರ್ ಎಂ.ಎನ್‌ಪಾರ್ಥಸಾರಥಿ ಮನವಿ ಮಾಡಿದ್ದಾರೆ.
ಭಾರತ ಕಂಡ ಶ್ರೇಷ್ಟ ಸಂತ ಹಾಗೂ ಮಾನವತಾವಾದಿ ರಾಮಾನುಜರ ಜಯಂತ್ಯುತ್ಸವಕ್ಕೆ ಯಾವುದೇ ಸರ್ಕಾರ ಈವರೆಗೆ ಯಾವ ವರ್ಷವೂ ಅನುದಾನ ಬಿಡುಗಡೆ ಮಾಡಿಲ್ಲ. ಕನಿಷ್ಠ ಆಚಾರ್ಯರ ಕೊಡುಗೆ ಸ್ಮರಿಸುವ ಕಾರ್ಯವನ್ನೂ ಸಹ ಮಾಡಿಲ್ಲ. ಕರ್ಮಭೂಮಿಯಲ್ಲಿ ರಾಮಾನುಜಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮಗಳಿಗೆ ಸರ್ಕಾರ ಅಥವಾ ದೇವಾಲಯದಿಂದ ವಿಶೇಷ ಅನುದಾನ ಇಲ್ಲದಿದ್ದರೂ ಮಹೋತ್ಸವಗಳು ಅರ್ಥಪೂರ್ಣವಾಗಿ ನಡೆಯುತ್ತಾ ಬಂದಿದೆ. ಆಚಾರ್ಯ ರಾಮಾನುಜರು ಆದಿಶೇಷನ ಅವತಾರವೆಂಬ ಪ್ರತೀತಿಯಿದ್ದು, ಶ್ರೀವೈಷ್ಣವರು ರಾಮಾನುಜರಿಗೆ ಅಭಿಷೇಕ ನೆರವೇರಿಸುವ ಮೂಲಕ ಸರ್ಪದೋಶ ನಿವಾರಣೆ ಮಾಡಿಕೊಳ್ಳುತ್ತಾರೆ.