ರಾಮಾಯಣ ಮೌಲ್ಯಗಳನ್ನು ತಿಳಿಸುವ ಮಹಾಕಾವ್ಯ

KannadaprabhaNewsNetwork |  
Published : Oct 27, 2026, 01:45 AM IST
26ಎಚ್ಎಸ್ಎನ್14 : ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೊರಟ ಮೆರವಣಿಗೆಗೆ ಜಿಲ್ಲಾಧಿಕಾರಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ಈ ಮಹಾಕಾವ್ಯದ ಪ್ರತಿಯೊಂದು ಪಾತ್ರವೂ ಮನುಕುಲಕ್ಕೆ ಜೀವನಮೌಲ್ಯಗಳನ್ನು ಕಲಿಸುತ್ತದೆ. ಕೈಕೇಯಿ ತನ್ನ ಮಗ ಭರತನಿಗೆ ಅಧಿಕಾರ ದೊರೆಯಬೇಕೆಂದು ಬಯಸಿದ್ದರಿಂದ ಶ್ರೀರಾಮ ವನವಾಸಕ್ಕೆ ತೆರಳಬೇಕಾಯಿತು. ಇಂದಿನ ರಾಜಕೀಯದಲ್ಲಿಯೂ ಅಧಿಕಾರಕ್ಕಾಗಿ ನಡೆಯುವ ಪೈಪೋಟಿ ಹಾಗೂ ಕುರ್ಚಿಯ ಕಿತ್ತಾಟಗಳನ್ನು ಕಾಣಬಹುದು. ಕೆಲವೊಮ್ಮೆ ರಾತ್ರಿ ಒಬ್ಬರು ಮುಖ್ಯಮಂತ್ರಿಯಾಗಿ ನೇಮಕಗೊಂಡರೆ, ಮರುದಿನ ಬೆಳಗ್ಗೆ ಮತ್ತೊಬ್ಬರು ಪ್ರಮಾಣವಚನ ಸ್ವೀಕರಿಸುವಂತಹ ರಾಜಕೀಯ ಬೆಳವಣಿಗೆಗಳೂ ನಡೆಯುತ್ತವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಅಧಿಕಾರದ ಆಸೆ, ಅಪ್ರಾಮಾಣಿಕತೆ ಮತ್ತು ಅಧರ್ಮ ಎಷ್ಟೇ ಪ್ರಬಲವಾಗಿದ್ದರೂ ಅಂತಿಮವಾಗಿ ಅವುಗಳಿಗೆ ಸೋಲು ಖಚಿತ ಎಂಬ ಸಂದೇಶವನ್ನು ರಾಮಾಯಣ ಸಾರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಹಾಸ್ಯಭರಿತವಾಗಿ ಹೇಳಿದಾಗ ಸಭಿಕರಲ್ಲಿ ನಗೆ ಮೂಡಿತು.

ನಗರದ ಡಾ. ಬಿ. ಆರ್‌. ಅಂಬೇಡ್ಕರ್‌ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ಈ ಮಹಾಕಾವ್ಯದ ಪ್ರತಿಯೊಂದು ಪಾತ್ರವೂ ಮನುಕುಲಕ್ಕೆ ಜೀವನಮೌಲ್ಯಗಳನ್ನು ಕಲಿಸುತ್ತದೆ. ಕೈಕೇಯಿ ತನ್ನ ಮಗ ಭರತನಿಗೆ ಅಧಿಕಾರ ದೊರೆಯಬೇಕೆಂದು ಬಯಸಿದ್ದರಿಂದ ಶ್ರೀರಾಮ ವನವಾಸಕ್ಕೆ ತೆರಳಬೇಕಾಯಿತು. ಇಂದಿನ ರಾಜಕೀಯದಲ್ಲಿಯೂ ಅಧಿಕಾರಕ್ಕಾಗಿ ನಡೆಯುವ ಪೈಪೋಟಿ ಹಾಗೂ ಕುರ್ಚಿಯ ಕಿತ್ತಾಟಗಳನ್ನು ಕಾಣಬಹುದು. ಕೆಲವೊಮ್ಮೆ ರಾತ್ರಿ ಒಬ್ಬರು ಮುಖ್ಯಮಂತ್ರಿಯಾಗಿ ನೇಮಕಗೊಂಡರೆ, ಮರುದಿನ ಬೆಳಗ್ಗೆ ಮತ್ತೊಬ್ಬರು ಪ್ರಮಾಣವಚನ ಸ್ವೀಕರಿಸುವಂತಹ ರಾಜಕೀಯ ಬೆಳವಣಿಗೆಗಳೂ ನಡೆಯುತ್ತವೆ ಎಂದು ಹೇಳಿದರು.

ರಾಮಾಯಣ ಕೇವಲ ಧಾರ್ಮಿಕ ಮಹಾಕಾವ್ಯವಲ್ಲ, ಮನುಷ್ಯ ಹೇಗೆ ಬದುಕಬೇಕು, ಯಾವ ಮೌಲ್ಯಗಳನ್ನು ಪಾಲಿಸಬೇಕು ಎಂಬುದನ್ನು ತಿಳಿಸುವ ಜೀವನದರ್ಶನವಾಗಿದೆ. ಶ್ರೀರಾಮನ ಆದರ್ಶ, ಆಂಜನೇಯನ ಸ್ವಾಮಿನಿಷ್ಠೆ, ಲಕ್ಷ್ಮಣನ ತ್ಯಾಗ ಹಾಗೂ ಭರತನ ಸಹೋದರ ಪ್ರೀತಿ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಗಳಾಗಿವೆ. ರಾವಣನ ಅಹಂಕಾರ ಮತ್ತು ಅಧರ್ಮ ಅವನ ವಿನಾಶಕ್ಕೆ ಕಾರಣವಾದವು. ಅನ್ಯಾಯ ಹಾಗೂ ದುಷ್ಟತನಕ್ಕೆ ಅಂತ್ಯವಿದೆ ಎಂಬುದನ್ನು ರಾಮಾಯಣ ಜಗತ್ತಿಗೆ ಸಾರುತ್ತದೆ. ಭ್ರಷ್ಟಾಚಾರ, ಅಪ್ರಾಮಾಣಿಕತೆ ಮತ್ತು ಅಧರ್ಮದ ಹಾದಿಯಲ್ಲಿ ನಡೆಯುವವರು ಶಾಶ್ವತವಾಗಿ ಉಳಿಯಲಾರರು. ಸಮಾಜದಲ್ಲಿ ನ್ಯಾಯ, ನಿಷ್ಠೆ ಮತ್ತು ಧರ್ಮಕ್ಕೆ ಆದ್ಯತೆ ನೀಡಿದಾಗ ಮಾತ್ರ ವ್ಯಕ್ತಿಯ ಬದುಕು ಸಾರ್ಥಕವಾಗುತ್ತದೆ. ರಾಮಾಯಣದ ನೀತಿಸಂದೇಶಗಳು ಇಂದಿನ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗೂ ಅನ್ವಯಿಸುತ್ತವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆ ರಚನೆಯಾದ ರಾಮಾಯಣ ಇಂದಿಗೂ ಪ್ರಸ್ತುತವಾಗಿರುವುದಕ್ಕೆ ಅದರಲ್ಲಿರುವ ಸಾರ್ವಕಾಲಿಕ ಜೀವನಮೌಲ್ಯಗಳೇ ಕಾರಣ. ಕುಟುಂಬ ಸಂಬಂಧಗಳು, ಸ್ನೇಹ, ತ್ಯಾಗ, ಕರ್ತವ್ಯನಿಷ್ಠೆ, ತಾಳ್ಮೆ, ಧೈರ್ಯ, ನ್ಯಾಯ ಮತ್ತು ಸತ್ಯದ ಮಹತ್ವವನ್ನು ರಾಮಾಯಣ ತಿಳಿಸಿಕೊಡುತ್ತದೆ ಎಂದರು. ಮಹರ್ಷಿ ವಾಲ್ಮೀಕಿಯವರು ರಾಮಾಯಣದ ಮೂಲಕ ನೀಡಿದ ಸಂದೇಶ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಥೈಲ್ಯಾಂಡ್, ಇಂಡೋನೇಷ್ಯಾ, ಕಾಂಬೋಡಿಯಾ ಸೇರಿದಂತೆ ಆಗ್ನೇಯ ಏಷ್ಯಾದ ಹಲವು ದೇಶಗಳ ಸಾಹಿತ್ಯ, ಕಲೆ, ನೃತ್ಯ, ನಾಟಕ ಹಾಗೂ ಸಾಂಸ್ಕೃತಿಕ ಪರಂಪರೆಯ ಮೇಲೂ ರಾಮಾಯಣದ ಪ್ರಭಾವವಿದೆ. ಇದು ಜಗತ್ತಿನ ವಿವಿಧ ಸಂಸ್ಕೃತಿಗಳೊಂದಿಗೆ ಬೆಸೆದುಕೊಂಡಿರುವ ಮಹತ್ವದ ಕೃತಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತು ಜನರನ್ನು ಸಚಿವ ಕೆ.ಎಂ. ಶಿವಲಿಂಗೇಗೌಡ ಸನ್ಮಾನಿಸಿ ಗೌರವಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲಾ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಹುಡಾ ಅಧ್ಯಕ್ಷ ಪಟೇಲ್ ಶಿವಣ್ಣ, ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಅಣ್ಣಪ್ಪರಾವ್, ಸಮುದಾಯದ ಹಿರಿಯ ಮುಖಂಡ ಶೇಖರಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ ಆರ್‌ ಕೆಂಚೇಗೌಡ, ಹುಡಾ ಮಾಜಿ ಅಧ್ಯಕ್ಷ ಕೃಷ್ಣ ಕುಮಾರ್, ದಲಿತ ಸಮುದಾಯದ ಮುಖಂಡರಾದ ಎಚ್.ಕೆ. ಸಂದೇಶ್, ಧರ್ಮನಾಯಕ್, ರಂಗನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಯದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ರಾಮಾಯಣದಿಂದ ಸಮಾಜಕ್ಕೆ ಸಂದೇಶ
ರುದ್ರಭೂಮಿ ಸ್ವಚ್ಛಗೊಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು