ಕನ್ನಡಪ್ರಭ ವಾರ್ತೆ ಹರಿಹರ
ಅಣ್ಣ ತಮ್ಮಂದಿರು ಆಸ್ತಿ, ಅಧಿಕಾರಕ್ಕೆ ಕಚ್ಚಾಡದಿದ್ದರೆ ಅದು ರಾಮಾಯಣ, ಕಚ್ಚಾಡಿದರೆ ಅದು ಮಹಾಭಾರತ. ಆದರ್ಶ ತತ್ವಗಳ ತಳಹದಿಯನ್ನು ವಾಲ್ಮೀಕಿ ಪ್ರಪಂಚಕ್ಕೆ ನೀಡಿದ್ದಾರೆ ಎಂದು ರಾಜನಹಳ್ಳಿ ಮಠದ ಪ್ರಸನ್ನಾನಂದ ಸ್ವಾಮೀಜಿ ನುಡಿದರು.ತಾಲೂಕಿನ ಉಕ್ಕಡಗಾತ್ರಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ದೇವಸ್ಥಾನ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಹಾತ್ಮರು ಸಮಾಜದ ಒಳಿತಿಗಾಗಿಯೇ ಧಾರೆ ಎರೆದ ತಪೋಭೂಮಿ ಬಾರತ ದೇಶ. ಹುಟ್ಟು ಮತ್ತು ಸಾವಿನ ನಡುವೆ ಜೀವವೆಂಬ ದೀಪ ಇತರರಿಗೆ ಬೆಳಕಿನ ದಾರಿ ತೋರಿಸಿ ಸಾರ್ಥಕ್ಯ ಪಡೆಯಬೇಕು. ಈ ಜಗತ್ತಿಗೆ ರಾಮನ ಆದರ್ಶವನ್ನು ತಿಳಿಸಿದ ಮಹರ್ಷಿ ವಾಲ್ಮೀಕಿ ಎಂದೆಂದಿಗೂ ಅಜರಾಮರ ಎಂದು ತಿಳಿಸಿದರು.ರಟ್ಟಿಹಳ್ಳಿ ಕಬ್ಬಿಣ ಕಂತಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀ ಮಾತನಾಡಿ, ರಾಮ ಮತ್ತು ರಾಮಾಯಣ ವಾಲ್ಮೀಕಿಯ ರಚನೆ ಜಗತ್ತಿಗೆ ನೀಡಿದ ಕೊಡುಗೆಯಾಗಿದೆ. ಕ್ರೂರ ಮಾನವತ್ವ ಹೊಂದಿದ ವ್ಯಕ್ತಿ ದೈವತ್ವವನ್ನು ಪಡೆದು ಮಹರ್ಷಿ ವಾಲ್ಮೀಕಿಯಾದ. ಸುಸಂದರ್ಭದಲ್ಲಿ ಗುರುವಿನ ಮಾರ್ಗದರ್ಶನದಿಂದ ಎಲ್ಲವೂ ಸಾಧ್ಯ. ಗುರು ಪರಂಪರೆಯೇ ಇಂದಿನ ಪ್ರತಿಷ್ಠಾಪನೆ ಎಂದರು.
ಕೊಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ, ರಾಜ್ಯ ಬಿಜೆಪಿ ಎಸ್ಟಿ ಮೊರ್ಚ ರಾಜ್ಯಾಧ್ಯಕ್ಷ ಬಂಗಾರ ಹನುಮಂತ, ಎನ್. ಜಿ. ನಾಗನಗೌಡ್ರು, ಚಂದ್ರಶೇಖರ್ ಪೂಜಾರ್, ಜಿ ಸಿ ಹಾಲೇಶ್ ಗೌಡ, ದಾವಣಗೆರೆ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಹೆಚ್ ಎಸ್ ಮಂಜುನಾಥ್, ಜಿ ಬಿ ವಿನಯಕುಮಾರ್ ಮಾತನಾಡಿದರು.ಶಾಸಕ ಬಿ.ಪಿ. ಹರೀಶ್ ದೇವಸ್ಥಾನ ಉದ್ಘಾಟಿಸಿದರು. ಹರಿಹರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಶಾಸಕ ಎಸ್ ರಾಮಪ್ಪ ಮೆರವಣಿಗೆ ಉದ್ಘಾಟಿಸಿದರು.
ಪ್ರಕಾಶ್, ಮಂಜುನಾಥ್ ದೊಡ್ಮನಿ ಸಂಗೀತ ಬಂಗೇರ ಕಾರ್ಯಕ್ರಮ ನಡೆಸಿಕೊಟ್ಟರು. ಕರಿಬಸವೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್ ಸುರೇಶ್ ಸ್ವಾಗತಿಸಿದರು.ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಿಗಳಿ ಆನಂದಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ. ಕುಬೇರಪ್ಪ, ಡಾ ಎನ್ ನಾಗರಾಜ್ ಜಿಗಳಿ, ಸೋಮಣ್ಣ ದಾಸರ, ಬಿ ಎಂ ವಾಗೀಶ ಸ್ವಾಮಿ, ಕೆ ಆರ್ ರಂಗಪ್ಪ, ಪಾರ್ವತಿ, ಇತರರು ಇದ್ದರು.