ಹುಬ್ಬಳ್ಳಿ: ಬಹಳಷ್ಟು ಕ್ಯಾನ್ಸರ್ ರೋಗಿಗಳನ್ನು ಕೊನೆಯ ಹಂತದಲ್ಲಿ ನೋಡಿಕೊಳ್ಳಲು ಸಾಧ್ಯವಾಗದೇ ಕುಟುಂಬದವರು ಸುಸ್ತಾಗಿ ಹೋಗುತ್ತಿದ್ದಾರೆ. ಅಂತಹ ರೋಗಿಗಳಿಗೆ ಮಜೇಥಿಯಾ ಫೌಂಡೇಷನ್ ಆರಂಭಿಸಿರುವ ರಮಿಲಾ ಪ್ರಶಾಂತಿ ಮಂದಿರ (ಹಾಸ್ಪೈಸ್) ವರದಾನವಾಗಿದೆ ಎಂದು ಕ್ಯಾನ್ಸರ್ ತಜ್ಞೆ, ಪದ್ಮಶ್ರೀ ಡಾ.ವಿಜಯಲಕ್ಷ್ಮೀ ದೇಶಮಾನೆ ಹೇಳಿದರು.
ಇಲ್ಲಿಯ ನವನಗರದ ಕರ್ನಾಟಕ ಕ್ಯಾನ್ಸರ್ ಥೆರಫಿ ಹಾಗೂ ಸಂಶೋಧನಾ ಸಂಸ್ಥೆ(ಕೆಸಿಟಿಆರ್ಐ)ಯ ಆವರಣದಲ್ಲಿರುವ ಹಾಸ್ಪೈಸ್ ರಮಿಲಾ ಪ್ರಶಾಂತಿ ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹಾಸ್ಪೈಸ್ ಪ್ಯಾಲಿಯೇಟಿವ್ ಕೇರ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ವಯಸ್ಸಾದ ಅನೇಕ ರೋಗಿಗಳಿಗೆ ಮನೆಯಲ್ಲಿ ಆರೈಕೆ ಮಾಡಲು ಕಷ್ಟವಾಗುತ್ತದೆ. ಆದರೆ, ಹಾಸ್ಪೈಸ್ ಅಂಥವರಿಗೆ ಆರೈಕೆಯ ಜತೆ ಇರುವಷ್ಟು ಕಾಲ ನೆಮ್ಮದಿಯ ಬದುಕು ನೀಡಲು ಶ್ರಮಿಸುತ್ತದೆ. ಅನೇಕ ಕಡೆಗಳಲ್ಲಿ ಇಂತಹ ವ್ಯವಸ್ಥೆ ಮಾಡಲಾಗಿದೆ. ಕ್ಯಾನ್ಸರ್ ಕಾಯಿಲೆ ಬರದಂತೆ ಜೀವನ ಕ್ರಮ ಉತ್ತಮಗೊಳಿಸಿಕೊಳ್ಳಬೇಕು. ಹಸಿರು ತರಕಾರಿ, ಸಸ್ಯಾಹಾರ ಸೇವನೆ ಮಾಡುವ ಮೂಲಕ ಆರೋಗ್ಯಕರ ಜೀವನ ಸಾಗಿಸಬಹುದು ಎಂದು ಸಲಹೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ನವನಗರ ಕೆಸಿಟಿಆರ್ಐ ಚೇರ್‌ಮನ್ ಡಾ. ಬಿ.ಆರ್.ಪಾಟೀಲ ಮಾತನಾಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆಯ ಎಲ್ಲ ಹಂತಗಳು ಮುಗಿದ ನಂತರ ರೋಗಿಯನ್ನು ಹಾಸ್ಪೈಸ್ನಲ್ಲಿ ಒಂದಿಷ್ಟು ದಿನ ಇಡಬಹುದಾಗಿದೆ. ಫೌಂಡೇಷನ್ ಸಹಾಯದಿಂದ ನೂತನವಾದ ಇಂತಹ ವ್ಯವಸ್ಥೆ ಕಲ್ಪಿಸುವಲ್ಲಿ ನಾವು 10 ವರ್ಷ ಮುಂಚೂಣಿಯಲ್ಲಿದ್ದೇವೆ. ಜೀವನದ ಕೊನೆಯ ಗಳಿಗೆಯಲ್ಲಿ ರೋಗಿಗಳಿಗೆ ಗೌರವ ಬದುಕು ನೀಡುವುದು ಇದರ ಉದ್ದೇಶ. ಇದರಿಂದ ಎಷ್ಟೋ ಜನರಿಗೆ ಅನುಕೂಲವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮಜೇಥಿಯಾ ಫೌಂಡೇಷನ್ ಚೇರ್‌ಮನ್ ಜಿತೇಂದ್ರ ಮಜೇಥಿಯಾ ಮಾತನಾಡಿ, ನನ್ನ ಕರ್ಮಭೂಮಿ ಹುಬ್ಬಳ್ಳಿಗೆ ಏನಾದರೂ ಮಾಡಬೇಕು ಎಂದುಕೊಂಡು ಫೌಂಡೇಶನ್ ಮೂಲಕ ಸಾಮಾಜಿಕ ಸೇವಾ ಕಾರ್ಯ ಆರಂಭಿಸಿದ್ದೇವೆ. ಅದರಲ್ಲಿ ಹಾಸ್ಪೈಸ್ ಒಂದಾಗಿದೆ. ಆಸ್ಪತ್ರೆ ಮಾದರಿಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಪಚರಿಸಲಾಗುತ್ತದೆ ಎಂದರು.
ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ್ ಮಜೇಥಿಯಾ ಮಾತನಾಡಿ, ನನ್ನ ತಾಯಿ ಸಣ್ಣ ವಯಸ್ಸಿನಲ್ಲಿ ಕ್ಯಾನ್ಸರ್ನಿಂದ ಬಳಲಿದರು. ಬಹಳಷ್ಟು ಗಂಭೀರವಾದ ಈ ಕಾಯಿಲೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಜೀವನದ ಕೊನೆಯಲ್ಲಿ ಉತ್ತಮ ಆರೈಕೆ ಬೇಕಾಗುತ್ತದೆ. ಇಂತಹ ಸೇವೆ ಇದೆ ಎಂಬುದೇ ಅನೇಕರಿಗೆ ಗೊತ್ತಿರುವುದಿಲ್ಲ. ಇದರ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯ ಎಂದರು.ವೈದ್ಯಾಧಿಕಾರಿ ಡಾ. ನಾಗರಾಜರಾವ ಸಾನು ಮಾತನಾಡಿದರು. ಹಾಸ್ಪೈಸ್ ನಲ್ಲಿ ಲಭ್ಯ ಇರುವ ಸೇವೆಯ ಬಗ್ಗೆ ಉಮಾ ಹಿರೇಮಠ, ಕವಿತಾ, ರಾಕೇಶ ಇತರರು ಅಭಿಪ್ರಾಯ ಹಂಚಿಕೊಂಡರು. ಹಾಸ್ಪೈಸ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಚರ್ಚಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಈ ವೇಳೆ ರಮಿಲಾ ಮಜೇಥಿಯಾ, ಕಶ್ಯಪ್ ಮಜೇಥಿಯಾ, ಡಾ.ಪ್ರಹ್ಲಾದರಾವ್, ಅಮೃತಲಾಲ್ ಪಟೇಲ್, ಡಾ. ಸುನಿಲಕುಮಾರ ಕುಕನೂರ, ಬಾಲಚಂದ್ರ ಡಂಗನವರ ಸೇರಿದಂತೆ ಹಲವರಿದ್ದರು. ಆರತಿ ನಿರೂಪಿಸಿದರು. ಡಾ. ವಿ.ಬಿ.ನಿಟಾಲಿ ಪರಿಚಯಿಸಿದರು. ಡಾ. ರಮೇಶಬಾಬು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ವಂದಿಸಿದರು.