ದಾಂಡೇಲಿ: ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆ ವತಿಯಿಂದ ಅ. 2ರಂದು ರಾಮಲೀಲೋತ್ಸವ ಮತ್ತು ಸಿಡಿಮದ್ದು ಸಿಡಿಸುವ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೫೦ ಅಡಿ ಎತ್ತರದ ರಾವಣ, ೪೮ ಅಡಿ ಎತ್ತರದ ಕುಂಭಕರ್ಣ, ಮೇಘನಾದ ಮೂರ್ತಿಗಳನ್ನು ಒಳಗೊಂಡ ರಾಮಲೀಲೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಅ. ೨ರಂದು ಸಂಜೆ ೬.೩೦ರಿಂದ ೮ ಗಂಟೆ ವರೆಗೆ ಕಾಗದ ಕಾರ್ಖಾನೆಯ ಬಂಗೂರ ನಗರದ ಡಿಲಕ್ಸ್ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಡಿವೈಎಸ್ಪಿ ಶಿವಾನಂದ ಮದರಕಂಡಿ ಮಾತನಾಡಿ, ರಾಮಲೀಲೋತ್ಸವ ಮತ್ತು ದಾಂಡೇಲಪ್ಪ ಜಾತ್ರೆ ಶಾಂತಿಯುತವಾಗಿ ನಡೆಯಲು ಈಗಾಗಲೇ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅ. ೨ರಂದು ಪುರಮಾರ ಶ್ರೀ ದಾಂಡೇಲಪ್ಪ ಜಾತ್ರೆ ಮತ್ತು ರಾಮಲೀಲೋತ್ಸವ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳಿಗೆ ಕನ್ಯಾ ವಿದ್ಯಾಲಯದ ಮೈದಾನದಲ್ಲಿ ಮತ್ತು ಕಾರು ಹಾಗೂ ಇನ್ನಿತರ ವಾಹನಗಳಿಗೆ ಜನತಾ ವಿದ್ಯಾಲಯದ ಮೈದಾನದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯ ಮುನ್ನಾದಿನ ಸಂಜೆ ೬ ಗಂಟೆಯಿಂದ ಜಾತ್ರೆ ಮುಗಿಯುವ ವರೆಗೆ ದಾಂಡೇಲಿಯಿಂದ ಹಳಿಯಾಳಕ್ಕೆ ಹೋಗುವ, ಬರುವ ವಾಹನಗಳು, ಬಸ್‌ಗಳು ಕರ್ಕಾ-ಬರ್ಚಿ ಮಾರ್ಗವಾಗಿ ಸಂಚರಿಸಲು ಕ್ರಮವನ್ನು ಕೈಗೊಳ್ಳಲಾಗಿದೆ. ಕಾಗದ ಕಾರ್ಖಾನೆಗೆ ಕಚ್ಚಾವಸ್ತುಗಳನ್ನು ತರುವ ಟ್ರಕ್‌ಗಳನ್ನು ಜಾತ್ರೆ ಮುಗಿಯುವವರೆಗೆ ಕೆಸರೊಳ್ಳಿಯಲ್ಲಿ ನಿಲುಗಡೆ ಮಾಡಲಾಗುವುದು. ಹಳಿಯಾಳದಿಂದ ಹಾಳಮಡ್ಡಿ ಕೆರವಾಡದ ವರೆಗೆ ಜಾತ್ರೆಗಾಗಿ ಮಿನಿ ಬಸ್‌ಗಳನ್ನು ಬಿಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯ ಮೂಲಕ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದರು. ಈ ಬಾರಿ ಗಾಂಧಿ ಜಯಂತಿಯಂದು ಜಾತ್ರೋತ್ಸವ ನಡೆಯುತ್ತಿರುವುದರಿಂದ ಕೋಳಿ ಬಲಿ ಅರ್ಪಣೆ ಮಾಡುವಂತಿಲ್ಲ ಎಂದರು.
ತಹಸೀಲ್ದಾರ್ ಶೈಲೇಶ ಪರಮಾನಂದ ಅವರು ರಾಮಲೀಲೋತ್ಸವ ಮತ್ತು ಜಾತ್ರೋತ್ಸವ ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಇಲಾಖೆಯ ನಿಯಮಾವಳಿ ಒಳಗೆ ನಡೆಯವಂತೆ ಕ್ರಮಕೈಗೊಳ್ಳಲಾಗಿದೆ ಎಂದರು.ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೀಪಕ ನಾಯ್ಕ ಮಾತನಾಡಿ, ರಾಮಲೀಲೋತ್ಸವ ಮತ್ತು ಜಾತ್ರೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹೆಸ್ಕಾಂ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ ಜೆ.ಆರ್., ಪಿಎಸ್‌ಐಗಳಾದ ಅಮೀನ ಅತ್ತಾರ, ಕಿರಣ ಪಾಟೀಲ, ಶಿವಾನಂದ ನಾವದಗಿ, ಕಾರ್ಖಾನೆಯ ಇಲೆಕ್ಟ್ರಿಕಲ್ ವಿಭಾಗದ ಅಭಿಯಂತರ ಶ್ರೀಕಾಂತ ದೇವರಡ್ಡಿ, ಕಾರ್ಖಾನೆಯ ಭದ್ರತಾ ಅಧಿಕಾರಿಗಳಾದ ಕುಶಲಪ್ಪ, ಎಸ್.ಜಿ. ಪಾಟೀಲ ಉಪಸ್ಥಿತರಿದ್ದರು.