ಕುದೂರು ಹೋಬಳಿಯಿಂದ ಜಿಲ್ಲಾಕೇಂದ್ರಕ್ಕಿರುವುದು ಒಂದೇ ಬಸ್ಸು । ರಾಜಧಾನಿಗೆ ದಿನಕ್ಕೆರಡು ಬಸ್ಸು । ವಿದ್ಯಾರ್ಥಿಗಳಿಗೆ, ವೃದ್ದರಿಗೆ ತಪ್ಪದ ಸಂಕಷ್ಟ
ಕನ್ನಡಪ್ರಭ ವಾರ್ತೆ ಕುದೂರುಕುದೂರು ಗ್ರಾಮ ಮಾಗಡಿ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದರೂ ಇಲ್ಲಿಂದ ಜಿಲ್ಲಾ ಕೇಂದ್ರವಾದ ರಾಮನಗರಕ್ಕಿರುವುದು ಒಂದೇ ಒಂದು ಸರ್ಕಾರಿ ಬಸ್ಸು ಮಾತ್ರ. ಬೆಂಗಳೂರಿಗೆ ನಿತ್ಯ ಎರಡು ಬಸ್ಸುಗಳು ಮಾತ್ರ, ಕುಣಿಗಲ್ ಗೆ ಒಂದೇ ಒಂದು ಬಸ್ಸು. ಇಂತಹ ಸ್ಥಿತಿಯಲ್ಲಿ ಜನರು ಅನಿವಾರ್ಯವಾಗಿ ಖಾಸಗಿ ಬಸ್ಸು ಮತ್ತು ಆಟೋಗಳನ್ನು ಅವಲಂಬಿಸಬೇಕಾಗಿದೆ.
ಕುದೂರು ಗ್ರಾಮ ರಾಮನಗರ ಜಿಲ್ಲೆಯಲ್ಲಿ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಕುದೂರಿನಿಂದ ತುಮಕೂರು, ಕುಣಿಗಲ್, ಮಾಗಡಿ, ರಾಮನಗರ, ನೆಲಮಂಗಲ ಮತ್ತು ಬೆಂಗಳೂರಿಗೆ ಜನರು ವ್ಯಾಪಾರ ಮತ್ತು ಕಚೇರಿ ಕಾರ್ಖಾನೆಗಳಿಗೆ ಕೆಲಸಕ್ಕೆ ಹೋಗುತ್ತಾರೆ. ನೂರಾರು ‘ವಿದ್ಯಾರ್ಥಿಗಳು’ ವಿದ್ಯಾಭ್ಯಾಸಕ್ಕೆಂದು ನಿತ್ಯ ಓಡಾಡುತ್ತಾರೆ.ರಾಜಧಾನಿಗೆ ದಿನಕ್ಕೆರೆಡು ಬಸ್ಸು
ಬೆಂಗಳೂರಿಗೆ ತೆರಳಲು ಬೆಳಗ್ಗೆ 6 ಗಂಟೆಗೆ, 6.15 ಕ್ಕೆ ಮತ್ತು 10.30ಕ್ಕೆ ಮಾತ್ರ ಒಂದೆರಡು ಸರ್ಕಾರಿ ಬಸ್ಸುಗಳಿವೆ. ಇದಾದ ನಂತರ ರಾತ್ರಿಗೆ ಬರುತ್ತವೆ. ಆದು ಕೂಡಾ ಬಸ್ಸಿನ ಚಾಲಕರ ಮನಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಅಂದರೆ ಡಿಪೋದಿಂದ ಬಸ್ಸು ತಡವಾಗಿ ಹೊರಗೆ ಬಂದರೆ ಬಸ್ಸು ಬೆಂಗಳೂರಿಗೆ ಹೋಗದೆ ನೆಲಮಂಗಲದಿಂದ ವಾಪಸ್ ಬರುತ್ತದೆ. ಇದರಿಂದಾಗಿ ಜನರು ಬೆಂಗಳೂರಿನಲ್ಲಿ ಬಸ್ಸಿಗಾಗಿ ಕಾದು ಅದು ಬಾರದೆ ಹಾಸನ, ಮಂಗಳೂರಿನ ಬಸ್ಸುಗಳಲ್ಲಿ ಬಂದು ಸೋಲೂರಿನಲ್ಲಿ ಇಳಿದು ಆಟೋ ಹತ್ತಿ ಬರಬೇಕು. ರಾತ್ರಿ 8 ಗಂಟೆಯ ನಂತರ ಸೋಲೂರಿಗೆ ಜನರು ಬಂದಿಳಿದರೆ ಅಲ್ಲಿಂದ ಕುದೂರಿಗೆ ಬರಲು ಯಾವುದೇ ವಾಹನಗಳಿಲ್ಲ.ಕಾಲೇಜು ವಿದ್ಯಾರ್ಥಿಗಳು ಕುದೂರು ಗ್ರಾಮದಿಂದ ಹತ್ತು ಕಿಮೀ ದೂರದಲ್ಲಿರುವ ಸೋಲೂರಿನ ಹೆದ್ದಾರಿಗೆ ಹೋಗಿ ಅಲ್ಲಿ ಮತ್ತೊಂದು ಬಸ್ಸನ್ನು ಹಿಡಿದು ಹೋಗಬೇಕು. ವಯಸ್ಸಾದವರು, ಖಾಯಿಲೆ ಇದ್ದವರು, ಗರ್ಭಿಣಿಯರು ಪ್ರಯಾಣ ಮಾಡಲು ಕಷ್ಟವಾಗುತ್ತದೆ.ಏಕೆಂದರೆ ಅಲ್ಲಿ ಬರುವ ಬಸ್ಸುಗಳು ಭರ್ತಿಯಾಗಿರುತ್ತವೆ.
ಜಿಲ್ಲಾ ಕೇಂದ್ರಕ್ಕೆ ಒಂದೇ ಒಂದು ಬಸ್ಸುಪ್ರತಿದಿನ ಬೆಳಗ್ಗೆ 7 ಗಂಟೆಗೊಂದು ಬಸ್ಸು ಜಿಲ್ಲಾ ಕೇಂದ್ರದ ರಾಮನಗರಕ್ಕೆ ಸಂಚರಿಸುವುದು, ಅದು ಬಿಟ್ಟರೆ ಜನರು 30 ಕಿಮೀ ದೂರದ ಮಾಗಡಿಗೆ ಹೋಗಿ ಅಲ್ಲಿಂದ ಬೇರೆ ಬಸ್ ಹಿಡಿದು ರಾಮನಗರಕ್ಕೆ ಹೋಗಬೇಕು.
ಮಾಗಡಿ ತಾಲೂಕಿನ ಜನರಿಗೆ ಅನುಕೂಲವಾಗಲೆಂದು ಮಾಗಡಿಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಆದರೂ ಜನರಿಗೆ ಬಸ್ಸುಗಳ ಕೊರತೆ ತಪ್ಪಲಿಲ್ಲ. ಇದರ ಕುರಿತು ಮಾಗಡಿ, ನೆಲಮಂಗಲದ ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳ ಮತ್ತು ಮಹಿಳೆಯರ ಬವಣೆ ತಪ್ಪಲಿಲ್ಲ. ಶಾಸಕರು ಜನಸ್ಪಂದನ ಕಾರ್ಯಮಗಳಲ್ಲಿ ಜನರಿಂದ ಬಸ್ಸುಗಳ ಸೌಲಭ್ಯ ಒದಗಿಸಿಕೊಡಿ ಎಂಬ ಮನವಿಗಳನ್ನು ಸ್ವೀಕರಿಸಿ ಹೋಗುತ್ತಾರೆಯೇ ಹೊರತು ಸಮಸ್ಯೆಗಳಿಗೆ ಪರಿಹಾರ ದೊರಕಿಸುವುದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.-------