ದಾಬಸ್‌ಪೇಟೆ: ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲ ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಶ್ರೀರಾಮ ಸೀತಾಮಾತೆಯೊಂದಿಗೆ ನೆಲಮಂಗಲ ತಾಲೂಕಿನ ವಿವಿಧೆಡೆ ಸಂಚರಿಸಿರುವ ಕುರುಹುಗಳಿಗೂ ಮಹತ್ವ ಬಂದಿದೆ.
ದಾಬಸ್‌ಪೇಟೆ: ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲ ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಶ್ರೀರಾಮ ಸೀತಾಮಾತೆಯೊಂದಿಗೆ ನೆಲಮಂಗಲ ತಾಲೂಕಿನ ವಿವಿಧೆಡೆ ಸಂಚರಿಸಿರುವ ಕುರುಹುಗಳಿಗೂ ಮಹತ್ವ ಬಂದಿದೆ.
ಸೋಂಪುರ ಹೋಬಳಿಯ ನರಸೀಪುರದ ರಾಮದೇವರ ಬೆಟ್ಟದ ಬಳಿ ಶ್ರೀರಾಮ ಪಾದುಕಾ ದೇವಾಲಯದ ಬೆಟ್ಟವಿದೆ. ಪುರಾಣದ ಪ್ರಕಾರ ಈ ಪ್ರದೇಶದಲ್ಲಿ ಗೌತಮ ಮಹರ್ಷಿ - ಅಹಲ್ಯದೇವಿ ದಂಪತಿ ನೆಲೆಸಿದ್ದರು. ಪ್ರತಿದಿನ ಬೆಳಗಿನ ಜಾವ ಗೌತಮ ಮಹರ್ಷಿ ಮಡಿಯಲ್ಲಿ ಮಣ್ಣಿನಿಂದ ಮಡಕೆ ಮಾಡಿ ನೀರು ತಂದು ಸ್ನಾನ, ಸಂಧ್ಯಾವಂದನೆಗಳನ್ನು ನೆರವೇರಿಸುತ್ತಿದ್ದರು. ಹೀಗಿರುವಾಗ ರೂಪವತಿ ಅಹಲ್ಯದೇವಿಯ ಮೇಲೆ ದೇವೆಂದ್ರನಿಗೆ ಬಯಕೆ ಹುಟ್ಟುತ್ತದೆ. ಆಕೆಯನ್ನು ಪಡೆಯಬೇಕೆಂದು ಮಧ್ಯರಾತ್ರಿ ಕೋಳಿಯಂತೆ ಕೂಗುತ್ತಾನೆ. ಇದನ್ನು ಕೇಳಿ ಬೆಳಗಾಯಿತೆಂದು ಮಹರ್ಷಿಗಳು ಎಂದಿನಂತೆ ನೀರು ತರಲು ಹೋಗುತ್ತಾರೆ. ಆದರೆ ಎಷ್ಟೆ ಪ್ರಯತ್ನಪಟ್ಟರೂ ಮಣ್ಣಿನಿಂದ ಮಡಕೆ ಮಾಡಲು ಸಾಧ್ಯವಾಗುವುದೇ ಇಲ್ಲ. ಮಡಕೆ ಮಾಡಲಾಗುತ್ತಿಲ್ಲವೆಂಬ ಕೋಪದಲ್ಲಿಯೇ ಗೌತಮ ಮಹರ್ಷಿಗಳು ಕುಟೀರದ ಬಳಿ ಬಂದು ಅಹಲ್ಯದೇವಿಯನ್ನು ಕೂಗಿ ಕರೆಯುತ್ತಾರೆ. ನಿದ್ರೆಯಲ್ಲಿದ್ದ ಆಕೆಗೆ ಎಚ್ಚರವಾಗುವುದಿಲ್ಲ. ಕೋಪಗೊಂಡ ಮಹರ್ಷಿ ಬಂಡೆಯಾಗು ಎಂದು ಶಾಪ ಕೊಡುತ್ತಾರೆ. ಬಳಿಕ ಮಹರ್ಷಿಗೆ ದೇವೇದ್ರನ ಕುತಂತ್ರ ತಿಳಿಯುತ್ತದೆ. ನಂತರ ಅಹಲ್ಯಾದೇವಿ ನನ್ನದಲ್ಲದ ತಪ್ಪಿಗೆ ನನಗೇಕೆ ಶಿಕ್ಷೆ ಎಂದು ಕಣ್ಣೀರಿಡುತ್ತಾಳೆ. ಆಗ ಗೌತಮ ಮಹರ್ಷಿ, ಶ್ರೀ ರಾಮನು ವನವಾಸದಲ್ಲಿ ಇಲ್ಲಿಗೆ ಬಂದಾಗ ಅವರ ಪಾದ ಸ್ಪರ್ಶದಿಂದ ನಿನ್ನ ಶಾಪ ವಿಮೋಚನೆಯಾಗುತ್ತದೆಂದು ತಿಳಿಸುತ್ತಾರೆ.
ಮುಂದೆ ಶ್ರೀರಾಮ ವನವಾಸಕ್ಕೆ ಬಂದಾಗ ಕುದುರೆ ಕಟ್ಟುತ್ತಿದ್ದ ಸ್ಥಳವಾದ ಹಯಗುಂದ (ಈಗಿನ ಹೆಗ್ಗುಂದ) ದಿಂದ ಬಂಡೆಯಾಗಿದ್ದ ಅಹಲ್ಯಾದೇವಿ ಮೇಲೆ ಹೆಜ್ಜೆಯಿಡುತ್ತಾರೆ. ಆಗ ಶಾಪ ವಿಮೋಚನೆಯಾಗಿ ಬಂಡೆ ಕರಗಿ ನೀರಾಗಿ ಹರಿದು ಬಂಡೆಯಿಂದ ಅಹಲ್ಯೆ ರೂಪ ತಾಳುತ್ತಾಳೆ. ಅದುವೆ ಬೆಟ್ಟದ ಮೇಲೆ ಶ್ರೀರಾಮರ ಪಡಿಯಚ್ಚು ಮೂಡಿದೆ ಎಂಬುದು ಇಲ್ಲಿನ ಪ್ರತೀತಿ.
ಬೆಟ್ಟದ ಮುಂದೆ ಬಾಕ್ನರೆ ಅಥವಾ ಬಾಕಿನ ಅರೆ ಎಂಬ ಸ್ಥಳ. ರಾಮನ ಬಾಕು (ಕತ್ತಿ) ಬಿದ್ದಿತ್ತು ಎನ್ನಲಾಗುವ ಸ್ಥಳ. ಈಗಲೂ ಕತ್ತಿಯ ಕುರುಹು ಕಾಣುತ್ತದೆ. ದಿನದಿನಕ್ಕೆ ಇದರ ಅಳತೆ ಹೆಚ್ಚುತ್ತಿರುವುದೂ ಒಂದು ಸೋಜಿಗ. ಇದರ ಸುತ್ತಲೂ ಕಲ್ಲುಗಳಿಟ್ಟು ಹರಸಿಕೊಂಡರೆ ಮನದ ಆಶಯ ಈಡೇರುತ್ತದೆ ಎಂಬ ನಂಬಿಕೆ.
ಸೀತಾಮಾತೆಯ ಸೀತಕಲ್ಲು ಬೆಟ್ಟ:
ನರಸೀಪುರದ ಸಮೀಪದಲ್ಲೀ ಶ್ರೀರಾಮ ಸೀತಾಮಾತೆ ಲಕ್ಷ್ಮಣ ಹಾಗೂ ಅಂಜನೇಯನ ವಿಗ್ರಹವುಳ್ಳ ಪ್ರಾಚೀನ ದೇಗುಲಗಳಿದ್ದು ಆತ್ಮರಾಮ ಕ್ಷೇತ್ರವೆಂದೇ ಈ ಸ್ಥಳ ಹೆಸರುವಾಸಿ. ಇದರಿಂದ ಸ್ವಲ್ಪ ದೂರದಲ್ಲೇ ಸೀತಕಲ್ಲು ಬೆಟ್ಟವಿದ್ದು ಶ್ರೀರಾಮ ಸೀತಾಮಾತೆಯೊಂದಿಗೆ ಬೆಟ್ಟದಲ್ಲಿ ವಿಶ್ರಾಂತಿ ಪಡೆದಿರುವ ಬಗ್ಗೆ ಇತಿಹಾಸವಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.