ಗುಂಡ್ಲುಪೇಟೆಯಲ್ಲಿ ಸಡಗರದ ರಂಜಾನ್‌ ಆಚರಣೆ

KannadaprabhaNewsNetwork | Published : Apr 1, 2025 12:48 AM

ಸಾರಾಂಶ

ಮುಸ್ಲಿಮರ ಪವಿತ್ರ ರಂಜಾನ್ ಹಬ್ಬದ ಸಂಕೇತವಾದ ಶಾಂತಿ, ಭ್ರಾತೃತ್ವ, ಭಾವೈಕ್ಯತೆಯ ಅಂಗವಾಗಿ ಪಟ್ಟಣದ ಈದ್ಗಾ ಮೈದಾನದಲ್ಲಿ ಸಾವಿರಾರು ಮಂದಿ ಮುಸ್ಲಿಂ ಭಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮುಸ್ಲಿಮರ ಪವಿತ್ರ ರಂಜಾನ್ ಹಬ್ಬದ ಸಂಕೇತವಾದ ಶಾಂತಿ, ಭ್ರಾತೃತ್ವ, ಭಾವೈಕ್ಯತೆಯ ಅಂಗವಾಗಿ ಪಟ್ಟಣದ ಈದ್ಗಾ ಮೈದಾನದಲ್ಲಿ ಸಾವಿರಾರು ಮಂದಿ ಮುಸ್ಲಿಂ ಭಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸೋಮವಾರ ಬೆಳಗ್ಗೆ ೧೦.೩೦ ಗಂಟೆಯ ಸಮಯದಲ್ಲಿ ಚಾಮರಾಜನಗರ ರಸ್ತೆಯ ಈದ್ಗಾ ಮೈದಾನದಲ್ಲಿ ಧರ್ಮ ಗುರುಗಳ ನೇತೃತ್ವದಲ್ಲಿ ಮುಸ್ಲಿಂ ಭಾಂದವರು ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರು.

ಪ್ರಾರ್ಥನೆಯ ನಂತರ ಸಾಮೂಹಿಕವಾಗಿ ಶುಭಾಷಯ ವಿನಿಯಮ ಮಾಡಿಕೊಂಡ ನಂತರ ಈದ್ಗಾ ಮೈದಾನದಿಂದ ಪ್ರಾರ್ಥನೆ ಮುಗಿಸಿ ಕೋಡಹಳ್ಳಿ ವೃತ್ತದ ಬಳಿಯಿರುವ ಮಸೀದಿಗೆ ಮೆರವಣಿಗೆ ನಡೆಸಿದರು.

ಕೋಡಹಳ್ಳಿ ವೃತ್ತದ ಬಳಿ ಯುವಕರು ಸಮಾವೇಶಗೊಂಡರು. ಕೆಲ ಕಾಲ ಕುಣಿದು ಕುಪ್ಪಳಿಸಿದರು. ಅಲ್ಲಿಂದ ನೇರವಾಗಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ೩೦ ದಿನಗಳ ಕಾಲ ಉಪವಾಸ ಮಾಡಿದ್ದರು.

ಕೋಡಹಳ್ಳಿ ವೃತ್ತದ ಬಳಿಯಿಂದ ಕೆಲವರು ನೇರವಾಗಿ ಮನೆಗೆ ತೆರಳಿ ಕುಟುಂಬದ ಹಿರಿಯರು ಹಾಗೂ ತಂದೆ, ತಾಯಿಯರ ಆಶೀರ್ವಾದ ಪಡೆಯಲು ಮನೆಯತ್ತ ಹೆಜ್ಜೆ ಹಾಕಿದರು. ಇನ್ನೂ ಕೆಲವು ಭಾಂದವರು ಕುಟುಂಬದ ಹಿರಿಯರು ಸಾವನ್ನಪ್ಪಿದ ಗೋರಿಗೆ ತೆರಳಿ ಪುಷ್ಪಾರ್ಚನೆ ಮಾಡಿದರು. ಮಕ್ಕಳು ಸಹ ಭಾಗವಹಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.

ಹಬ್ಬದ ವಿಶೇಷ ಏನೆಂದರೆ ಕುಟುಂಬಸ್ಥರು ಸಂಪಾದನೆಯಲ್ಲಿ ಶೇ.೨೦ ರಷ್ಟಾದರೂ ಬಡ ಕುಟುಂಬದವರಿಗೆ ಮಾಂಸ ಹಾಗು ಹಣ ಸಹಾಯ ಮಾಡುವ ವಾಡಿಕೆಯಂತೆ ಹಣ ಉಳ್ಳವರು ದಾನ ನೀಡಿದರು. ಪ್ರತಿ ಸಾರಿಯಂತೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆಯ ನಂತರ ಯುವಕರು ಜೋಳಿಗೆ ಹಿಡಿದು ಹಣ ಸಂಗ್ರಹ ಮಾಡಿದರು. ಜಾಮಿಯಾ ಮಸೀದಿ ಗುರು ಜಾಬೀರ್ ಹಜ್ರತ್, ಲಬಾಬಿನ್ ಮಸೀದಿ ಗುರು ಅಬ್ದುಲ್ ಕರೀಮ್ ಮಾತನಾಡಿದರು.

ಪ್ರಾರ್ಥನೆಯಲ್ಲಿ ಜಾಮೀಯ ಮಸೀದಿ ಅಧ್ಯಕ್ಷ ಸರ್ದಾರ್‌, ಪುರಸಭೆ ಸದಸ್ಯ ಮಹಮ್ಮದ್ ಇಲಿಯಾಸ್(ಅಲ್ಲಾಹು)ಪುರಸಭೆ ಮಾಜಿ ಉಪಾಧ್ಯಕ್ಷ ದಸ್ತಗೀರ್, ಪುರಸಭೆ ಮಾಜಿ ಸದಸ್ಯ ನೂರುಲ್ಲಾ, ಮುಖಂಡರಾದ ನಿಜಾಮುದ್ದೀನ್‌, ಜಾಫರ್‌, ಶಾಪಿ, ನವೀದ್ ಖಾನ್, ಎ.ಅಬ್ದುಲ್‌ ಮಾಲೀಕ್ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.

ಪೊಲೀಸ್‌ ಇನ್ಸ್‌ಪೆಕ್ಟರ್‌ ಜಯಕುಮಾರ್‌, ಸಬ್‌ ಇನ್ಸ್‌ ಪೆಕ್ಟರ್ ಸಾಹೇಬ ಗೌಡ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

ಶುಭಾಶಯ ಕೋರಿದ ಶಾಸಕ ಗಣೇಶ್:

ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್‌ಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಶುಭಾಶಯ ಕೋರಿದರು. ಈದ್ಗಾ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಸಮಯದಲ್ಲಿ ಹಾಜರಾದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ, ಮಸೀದಿಗೆ ಬೇಕಾದ ಅನುದಾನ ಕೊಡುವುದಾಗಿ ಭರವಸೆ ನೀಡಿದರು. ಈ ಸಮಯದಲ್ಲಿ ಪುರಸಭೆ ಅಧ್ಯಕ್ಷ ಮಧು, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಜಿ.ಕೆ.ನಾಜೀಮುದ್ದೀನ್‌ ಹಾಗು ಮುಸ್ಲಿಮರು ಇದ್ದರು.

Share this article