ಕನ್ನಡಪ್ರಭ ವಾರ್ತೆ ಹಳೇಬೀಡು
ಸುರಂಗ ಮಾರ್ಗದಲ್ಲಿ ಕಾಂಕ್ರೀಟ್ ಲೈನಿಂಗ್ ಕಾಮಗಾರಿ ಭರದಿಂದ ಸಾಗುತ್ತಿರವುದರಿಂದ ೭ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸೂಚನೆ ಕಂಡುಬಂದಿದೆ. ೫ ಕಿ.ಮೀ ದೂರದ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ೨.೩ ಕಿ.ಮೀ ದೂರ ಕಾಂಕ್ರೀಟ್ ಲೈನಿಂಗ್ ಕಾಮಗಾರಿ ಮುಗಿದಿದೆ. ಉಳಿದ ೨.೭ ಕಿ.ಮೀ ಸುರಂಗ ಮಾರ್ಗದ ಕಾಮಗಾರಿ ಭರದಿಂದ ಸಾಗುತ್ತಿರುವುದು ಗಮನಕ್ಕೆ ಬಂತು. ಶಿವರಾಂ ಅವರು ಸ್ಥಳದಲ್ಲಿದ್ದ ಎಂಜಿನಿಯರ್ಗಳಿಂದ ಸುರಂಗ ಮಾರ್ಗ ಕಾಮಗಾರಿಯ ಪರಿಪೂರ್ಣ ಮಾಹಿತಿ ಪಡೆದುಕೊಂಡರು. ೨೦೨೭ ಮಾರ್ಚ್ ಅಂತ್ಯದೊಳಗೆ ೫ ಕಿ.ಮೀ ಸುರಂಗ ಮಾರ್ಗ ಹಾಗೂ ೧ ಕಿ.ಮೀ ನಾಲೆಯ ಕಾಮಗಾರಿ ಪರಿಪೂರ್ಣವಾಗಿ ಮುಗಿಯಲಿದೆ ಎಂದು ಎಂಜಿನಿಯರ್‌ಗಳು ತಿಳಿಸಿದರು. ಇದೇ ಸಂದರ್ಭದಲ್ಲಿ ಬಿ.ಶಿವರಾಂ ಮಾತನಾಡಿ, ಮುಂದಿನ ವರ್ಷದ ಮಳೆಗಾಲದಲ್ಲಿ ಯಗಚಿ ನದಿಯಲ್ಲಿ ರಭಸದ ನೀರು ಹರಿಯುವ ವೇಳೆಗೆ ರಣಘಟ್ಟ ಯೋಜನೆಯ ಸುರಂಗ ಮಾರ್ಗದಿಂದ ದ್ವಾರಸಮುದ್ರ ಕೆರೆಗೆ ನೀರು ಹರಿಸುವಂತೆ ಜಲಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸುತ್ತೇವೆ ಎಂದರು. ನಾಲೆಗೆ ಕಾಂಕ್ರೀಟ್ ಲೈನಿಂಗ್ ಮಾಡುವ ಕಾಮಗಾರಿ ಚುರುಕಿನಿಂದ ಸಾಗುತ್ತಿದೆ. ಕಾಮಗಾರಿಯ ವೇಗವನ್ನು ಮತ್ತಷ್ಟು ಹೆಚ್ಚಿಸುವಂತೆ ಸಚಿವರಿಗೆ ಮನವಿ ಮಾಡುತ್ತೇವೆ ಎಂದರು.ಹೊಯ್ಸಳರ ಕಾಲದಲ್ಲಿ ದ್ವಾರಸಮುದ್ರ ಕೆರೆಗೆ ನೀರು ಹರಿಸಲು ಯಗಚಿ ನದಿಗೆ ರಣಘಟ್ಟ ಬಳಿ ಒಡ್ಡು ನಿರ್ಮಿಸಿ, ನಾಲೆಯಲ್ಲಿ ನೀರು ಹರಿಸುವ ವ್ಯವಸ್ಥೆ ಮಾಡಿದ್ದರು. ತಾಂತ್ರಿಕ ಸಮಸ್ಯೆಯಿಂದ ರಾಜರ ಕಾಲದಲ್ಲಿಯೇ ನೀರು ಹರಿಯುವುದು ನಿಂತುಹೋಗಿತ್ತು. ನಾಲೆ ಮಾರ್ಗದ ಸುತ್ತ ಹಳ್ಳಿಗಳು ಬೆಳೆದಿವೆ. ಅಲ್ಲದೆ ನಾಲೆಯಲ್ಲಿ ನೀರು ಹರಿಸಲು ತಾತ್ರಿಕ ದೋಷ ಕಂಡು ಬಂದಿದ್ದರಿಂದ ಈಗ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದರಿಂದ ದ್ವಾರಸಮುದ್ರ ಕೆರೆ ಸೇರಿದಂತೆ ಹಳೇಬೀಡು ಭಾಗದ ವಿವಿಧ ಕೆರೆಗಳಿಗೆ ಅನುಕೂಲವಾಗಲಿದೆ. ಒಣ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚುವ ಸಾಧ್ಯತೆ ಹೆಚ್ಚಾಗಿದೆ ಎಂದು ಅವರು ಹೇಳಿದರು.ಮುಖಂಡ ಎಚ್. ಆರ್.ಕಾಂತರಾಜು ಮಾತನಾಡಿ, ಯಗಚಿ ನದಿ ನೀರಿಗಾಗಿ ೩ ದಶಕದಿಂದ ಹೋರಾಟ ನಡೆಸಿದ್ದೇವೆ. ಹಳೇಬೀಡು, ಮಾದಿಹಳ್ಳಿ ಹೋಬಳಿ ರೈತರ ಹೋರಾಟಕ್ಕೆ ಜಯ ಸಿಗುವ ಸಮಯ ಹತ್ತಿರಕ್ಕೆ ಬರುತ್ತಿದೆ. ರಣಘಟ್ಟ ಯೋಜನೆ ಪರಿಪೂರ್ಣಗೊಳಿಸಲು ಮಾಜಿ ಸಚಿವ ಗಂಡಸಿ ಶಿವರಾಂ ಅವರು ಬೆಂಬಲ ಕೊಟ್ಟಿರುವುದರಿಂದ ನೀರಾವರಿ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ ಎಂದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಶಂಭು ಮಾತನಾಡಿ, ರಣಘಟ್ಟ ಯೋಜನೆ ಪರಿಪೂರ್ಣವಾದರೆ ದ್ವಾರಸಮುದ್ರ ಕೆರೆ ವರ್ಷವಿಡೀ ತುಂಬಿ ತುಳುಕುತ್ತದೆ. ವೇದಾವತಿ ನದಿಗೂ ಪುನಶ್ಚೇತನ ದೊರಕಿದಂತಾಗುತ್ತದೆ ಎಂದರು.ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಆನಂದ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎನ್. ಶರತ್, ಮುಖಂಡರಾದ ಕೆ.ಎಂ.ವೀರಣ್ಣ, ಬಂಡಿಲಕ್ಕನಕೊಪ್ಪಲು ಸುರೇಶ್ ಪಾಲ್ಗೊಂಡಿದ್ದರು .