ಭಟ್ಕಳ ತಾಲೂಕಿನಾದ್ಯಂತ ಭಾರೀ ಗಾಳಿ ಮಳೆ : ತಗ್ಗು ಪ್ರದೇಶ ಜಲಾವೃತ ಹೊಳೆಯಾದ ರಂಗಿನಕಟ್ಟೆ, ವೃತ್ತದ ಹೆದ್ದಾರಿ

KannadaprabhaNewsNetwork |  
Published : Aug 02, 2024, 12:59 AM ISTUpdated : Aug 02, 2024, 02:00 PM IST
ಪೊಟೋ ಪೈಲ್ : 1ಬಿಕೆಲ್1,2,3 | Kannada Prabha

ಸಾರಾಂಶ

ಭಟ್ಕಳ ತಾಲೂಕಿನಲ್ಲಿ ಗುರುವಾರ ಬೆಳಗ್ಗೆಯವರೆಗೆ 120 ಮಿಮೀ ಮಳೆಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆಯ ಜತೆಗೆ ಗಾಳಿಯೂ ಬೀಸುತ್ತಿರುವುದರಿಂದ ಗ್ರಾಮಾಂತರ ಭಾಗದಲ್ಲಿ ಅಡಕೆ, ತೆಂಗಿನ ಮರ ಸೇರಿದಂತೆ ವಿವಿಧ ಮರಗಳು ನೆಲಕ್ಕುರುಳಿದೆ.

ಭಟ್ಕಳ: ತಾಲೂಕಿನಾದ್ಯಂತ ಭಾರೀ ಗಾಳಿ ಮಳೆ ಮುಂದುವರಿದಿದ್ದು, ತಗ್ಗು ಪ್ರದೇಶ ಜಲಾವೃತಗೊಂಡರೆ, ಪಟ್ಟಣದ ರಂಗೀನಕಟ್ಟೆ ಮತ್ತು ಸಂಶುದ್ದೀನ ವೃತ್ತ ಹೆದ್ದಾರಿ ಮತ್ತೆ ಮಳೆ ನೀರು ನಿಂತು ಹೊಳೆಯಾಗಿದ್ದರಿಂದ ವಾಹನ ಸಂಚಾರಕ್ಕೆ ಪರದಾಡುವಂತಾಯಿತು.

ತಾಲೂಕಿನಲ್ಲಿ ಗುರುವಾರ ಬೆಳಗ್ಗೆ.ವರೆಗೆ 120 ಮಿಮೀ ಮಳೆಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆಯ ಜತೆಗೆ ಗಾಳಿಯೂ ಬೀಸುತ್ತಿರುವುದರಿಂದ ಗ್ರಾಮಾಂತರ ಭಾಗದಲ್ಲಿ ಅಡಕೆ, ತೆಂಗಿನ ಮರ ಸೇರಿದಂತೆ ವಿವಿಧ ಮರಗಳು ನೆಲಕ್ಕುರುಳಿದೆ. ಭಾರೀ ಮಳೆಗೆ ಕಡವಿನಕಟ್ಟೆ ಡ್ಯಾಂ ಸೇರಿದಂತೆ ಹೊಳೆ, ಹಳ್ಳಗಳು ತುಂಬಿ ತುಳುಕುತ್ತಿದೆ. ಪಟ್ಟಣದ ಪುರಸಭೆಯ ಬಳಿಯ ಮುಖ್ಯರಸ್ತೆ ಒಂದು ದೊಡ್ಡ ಮಳೆ ಬಂದರೆ ಜಲಾವೃತಗೊಂಡು ಸಂಚರಿಸಲು ಪರದಾಡಬೇಕಾಗುತ್ತದೆ. ದಿನದಿಂದ ದಿನಕ್ಕೆ ಮಳೆಯ ಪ್ರಮಾಣ ಹೆಚ್ಚುತ್ತಿರುವುದರಿಂದ ಅಡಕೆ ಬೆಳೆಗೆ ಕೊಳೆ ರೋಗ ಬಂದಿದೆ. ಅಡಕೆ ಮಿಳ್ಳೆಗಳು ಉದುರುತ್ತಿದ್ದು, ಬೆಳೆಗಾರರಿಗೆ ದಿನಂಪ್ರತಿ ಕೊಳೆ ಅಡಕೆ ಸಂಗ್ರಹಿಸುವುದೇ ಕೆಲಸವಾಗಿದೆ.

ಭಾರೀ ಮಳೆಗೆ ತಗ್ಗು ಪ್ರದೇಶದ ಗದ್ದೆಗಳು ಜಲಾವೃತವಾಗಿದ್ದು, ಭತ್ತದ ಸಸಿಗಳು ನೀರಲ್ಲಿ ಮುಳುಗಿದೆ. ತಾಲೂಕಿನ ಹದ್ಲೂರಿನ ಜಮಗೋಡ್ಲಿನಲ್ಲಿ ಶ್ರೀಧರ ಹೆಬ್ಬಾರ, ವೆಂಕಟ್ರಮಣ ಹೆಬ್ಬಾರ ಮತ್ತಿತರ ಅಡಕೆ ತೋಟಕ್ಕೆ ಹೊಳೆ ನೀರು ನುಗ್ಗಿದ್ದು, ತೋಟದ ಗೊಬ್ಬರ ನೀರಲ್ಲಿ ಕೊಚ್ಚಿ ಹೋಗಿದೆ.

ತೋಟದಲ್ಲಿನ ಅಡಕೆ, ತೆಂಗು, ಲವಂಗ, ಜಾಯಿಕಾಯಿ ಮುಂತಾದ ಗಿಡಗಳಿಗೆ ಹಾನಿಯಾಗಿದೆ. ಭಟ್ಕಳದಲ್ಲಿ ದಾಖಲೆಯ ಮಳೆ ಸುರಿಯುತ್ತಿದ್ದು, ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನೆರೆ ಹಾವಳಿ ಬರದಿದ್ದರೆ ಸಾಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಪಟ್ಟಣದ ರಂಗಿನಕಟ್ಟೆಯ ಹೆದ್ದಾರಿಯಲ್ಲಿ ಮತ್ತೆ ಮಳೆ ನೀರು ನಿಂತು ಹೊಳೆಯಾಗಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ವಾಹನಗಳು ನೀರಿನಲ್ಲಿ ನಿಧಾನಗತಿಯಲ್ಲಿ ಚಲಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ವೃತ್ತದಲ್ಲೂ ಮಳೆ ನೀರು ನಿಂತಿದ್ದರಿಂದ ಮಳೆಗೆ ತಾಲೂಕಿನ ಎಲ್ಲಿಲ್ಲಿ ಹಾನಿ ಹಾನಿಯಾಗಿದೆ ಎನ್ನುವುದು ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ