ರಾಣಿಬೆನ್ನೂರು:ಇಲ್ಲಿಯ ಯುವ ಕವಯಿತ್ರಿ, ಸಾಹಿತಿ ಉಮಾರಾಣಿ ಅಶೋಕ ಪೂಜಾರ ಅವರಿಗೆ ಬೆಂಗಳೂರಿನಲ್ಲಿ ಈಚೆಗೆ ಯೂನಿವರ್ಸಲ್ ಐಕಾನ್-2026 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉಮಾರಾಣಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲೂ ಕವನ ಬರೆದಿದ್ದಾರೆ. ಮೌನ, ಸಂವೇದನೆ ಮತ್ತು ಆತ್ಮಪರಿಶೀಲನೆ ಅವರ ಬರವಣಿಗೆಯೂ ಜೀವನಾಡಿ. ಸ್ತ್ರೀವಾದವನ್ನು ಘೋಷಣೆಯಾಗಿ ಅಲ್ಲ, ಬದುಕಿನ ಸಹಜ ನಿಲುವಾಗಿ ಕಾಣುವ ಅವರು, ತಮ್ಮ ಕವಿತೆಗಳಲ್ಲಿ ಮೃದುವಾದ ಆದರೆ ದೃಢವಾದ ಸ್ತ್ರಿಧ್ವನಿಯನ್ನು ವ್ಯಕ್ತಪಡಿಸುತ್ತಾರೆ.
ನದಿ, ಮಣ್ಣು, ಬೇರು ಮತ್ತು ಮರಗಳಂತಹ ನಿಸರ್ಗ ರೂಪಕಗಳ ಮೂಲಕ ಸ್ತ್ರೀ-ಪ್ರಕೃತಿ ನಂಟನ್ನು ಅನಾವರಣಗೊಳಿಸಿರುವುದು ಅವರ ಬರಹದ ವಿಶೇಷತೆ.ಪ್ರೀತಿ ಎಂದರೇನು?, ವಸಂತದ ಸೊಬಗು, Cherry Blossom, ರೋದನೆ, ಸ್ತ್ರೀವಾದ ಮತ್ತು ನಿನಾದ ಅವರ ಪ್ರಕಟಿತ ಕೃತಿಗಳು. ಓ ಸಖಿ ಅವರ ''''ಇಕೋ ಫೆಮಿನಿಸಂ'''' ಸ್ಪರ್ಶ ಹೊಂದಿದ ಮತ್ತೊಂದು ಕವನಸಂಕಲನವಾಗಿದ್ದು, ಮಹಿಳೆಯ ಅರಿವು, ಆತ್ಮಬಲ ಮತ್ತು ಸಮಾನತೆಯ ನಿಲುವನ್ನು ಕಾವ್ಯರೂಪದಲ್ಲಿ ಮುಂದುವರಿಸುತ್ತದೆ.
2017ರಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆ ಪ್ರಯುಕ್ತ ಸವಿ ಸ್ಮೃತಿ ಯುವ ಸಾಹಿತಿ ರಾಣಿಬೆನ್ನೂರು ಪ್ರಶಸ್ತಿ ಲಭಿಸಿದೆ. 2014ರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ, 13ನೇ ಹಾವೇರಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ, 3ನೇ ಹಾವೇರಿ ಉತ್ಸವದಲ್ಲಿ ಮಕ್ಕಳ ಕವಿಗೋಷ್ಠಿಯಲ್ಲಿ ಕವನ ವಾಚಿಸಿದ್ದಾರೆ.
ಉಮಾರಾಣಿ ಬಾಲ್ಯದಿಂದಲೇ ಕತೆ, ಕವನ ಬರೆದು ಹಲವಾರು ಪ್ರಶಸ್ತಿ ಪಡೆದಿದ್ದಾರೆ. ಅವರ ಐದಾರು ಸಾಹಿತ್ಯಿಕ ಪುಸ್ತಕಗಳು ಪ್ರಕಟವಾಗಿದ್ದು, ಇಂಗ್ಲಿಷ್ ಸ್ನಾತಕ ಪದವಿ ಪಡೆದಿರುವುದರಿಂದ ಆಂಗ್ಲ ಸಾಹಿತ್ಯ ಕೃಷಿ ಮಾಡಲು ಉತ್ತಮ ಅವಕಾಶಗಳಿವೆ. ಚಿತ್ರಕತೆ, ಸಂಭಾಷಣೆ ಬರೆಯುವ ಆಸಕ್ತಿ ಹೊಂದಿದ್ದು, ಭವಿಷ್ಯದಲ್ಲಿ ಉತ್ತಮ ಬರಹಗಾರ್ತಿಯಾಗುವ ಅವಕಾಶಗಳಿವೆ ಎಂದು ರಾಣಿಬೆನ್ನೂರಿನ ಬಿಎಜೆಎಸ್ಸೆಸ್ ಮಹಿಳಾ ಕಾಲೇಜು ಕಾರ್ಯದರ್ಶಿ ಡಾ. ಆರ್.ಎಂ. ಕುಬೇರಪ್ಪ ಹೇಳಿದರು.