ಕನ್ನಡಪ್ರಭ ವಾರ್ತೆ ಶಿವಮೊಗ್ಗ ಹೊಸನಗರ ತಾಲೂಕಿನ ಪುರಪ್ಪೆಮನೆ ಬಳಿ ಅಪರೂಪದ ಚಿರತೆ ಬೆಕ್ಕು ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪುರಪ್ಪೆಮನೆ– ಗಡಿಕಟ್ಟೆ ಮಾರ್ಗ ಮಧ್ಯದಲ್ಲಿ ರಸ್ತೆ ಬದಿಯ ಚರಂಡಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಈ ಬೆಕ್ಕು ಕಂಡುಬಂದಿದೆ. ಇದು ಚಿರತೆ ಮರಿಯಂತೆ ಕಂಡುಬಂದಿದೆ. ಆದ್ದರಿಂದ ಸ್ಥಳೀಯರು ಭೀತರಾಗಿ ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಎಂ. ರಾಘವೇಂದ್ರ ಮತ್ತು ಸಿಬ್ಬಂದಿ ಚಿರತೆಯಂತೆ ಇರುವ ಪ್ರಾಣಿಯನ್ನು ಕಂಡು ಅಚ್ಚರಿಪಟ್ಟರು. ಇದು ಚಿರತೆ ಮರಿಯಲ್ಲ, ಬದಲಾಗಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಂಡುಬರುವ ಅಪರೂಪದ ಚಿರತೆ ಬೆಕ್ಕು ಎಂದು ಮನವರಿಕೆ ಮಾಡಿಕೊಟ್ಟರು. ಚಿರತೆ ಬೆಕ್ಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪದ ಹುಲಿ ಸಿಂಹಧಾಮಕ್ಕೆ ರವಾನೆ ಮಾಡಲಾಯಿತು. ಅಲ್ಲಿರುವ ವನ್ಯಜೀವಿಗಳ ಆರೈಕೆ ಕೇಂದ್ರಕ್ಕೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಎಂ. ರಾಘವೇಂದ್ರ ಮಾಹಿತಿ ನೀಡಿದ್ದಾರೆ. ವಿನಾಶದ ಅಂಚಿನಲ್ಲಿರುವ ಪ್ರಾಣಿ: ಚಿರತೆ ಬೆಕ್ಕು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಪರೂಪದ ಜಾತಿಗಳಲ್ಲಿ ಒಂದಾಗಿದೆ. ಮರದ ಮೇಲೆ ವಾಸಿಸುವ ಇದು, ಈ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ. ಇವುಗಳ ಜೀವಿತಾವಧಿ ಸುಮಾರು 7-8 ವರ್ಷಗಳು. ಈ ಚಿರತೆ ಬೆಕ್ಕು ಕಾಡಿನ ಕೋಳಿ, ಮೊಲ, ಅಳಿಲುಗಳು ಮತ್ತು ಕೆಲವು ಪಕ್ಷಿಗಳನ್ನು ಬೇಟೆಯಾಡುತ್ತದೆ. ಇದು ಸಧ್ಯ ವಿನಾಶದ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರ್ಪಡೆಯಾಗಿದೆ. - - - -01kpsmg18: ಹೊಸನಗರ ತಾಲೂಕಿನ ಪುರಪ್ಪೆಮನೆ ಬಳಿ ಪತ್ತೆಯಾದ ಅಪರೂಪದ ಚಿರತೆ ಬೆಕ್ಕು.