ಕನ್ನಡಪ್ರಭ ವಾರ್ತೆ ರಾಮದುರ್ಗ
ಪಟ್ಟಣದಲ್ಲಿ ರಾಜ ಕುಟುಂಬದ ಮನೆದೇವರು ವೆಂಕಟೇಶ್ವರ ದೇವಸ್ಥಾನದ ರಥೋತ್ಸವ ಗುರುವಾರ ಅದ್ಧೂರಿಯಾಗಿ ನಡೆಯಿತುಬೆಳಗ್ಗೆ 9.28ಕ್ಕೆ ರಥೋತ್ಸವಕ್ಕೆ ತಹಸೀಲ್ದಾರ್ ಸುರೇಶ ಚವಲಾರ, ಮುಖ್ಯಾಧಿಕಾರಿ ಈರಣ್ಣ ಗುಡದಾರಿ, ಜಾತ್ರಾ ಸಮಿತಿ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಐದಡಿ ಎತ್ತರ ಕಲ್ಲಿನ ಗಾಲಿಗಳಿಗೆ ತೆಂಗಿನ ಕಾಯಿ ಒಡೆಯುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು. ಪಟ್ಟಣದ ಗಣ್ಯರು, ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಶಾಸಕ ಅಶೋಕ ಪಟ್ಟಣ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಗಮಿಸಿ ದೇವರ ದರ್ಶನ ಪಡೆದರು.
ಮಲಪ್ರಭಾ ನದಿಯ ಪಕ್ಕದ ಭವ್ಯ ದೇವಸ್ಥಾನದಿಂದ ಎಡಕ್ಕೆ ಹನುಮಂತ ದೇವಸ್ಥಾನದ ತನಕ ಉತ್ಸವ ಮೂರ್ತಿಯನ್ನು ಹೊತ್ತ ಕಲ್ಲಿನ ತೇರನ್ನು ನೆರೆದಿದ್ದ ಭಕ್ತರು ಜಯಕಾರಗಳೊಂದಿಗೆ ಎಳೆದರು. ಸುಮಂಗಲೆಯರು ಆರತಿ ಎತ್ತಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು. ಭಕ್ತರು ರಥದ ಕಡೆಗೆ ಬಾಳೆಹಣ್ಣು, ಹೂವು, ಉತ್ತತ್ತಿ ಎಸೆದರು. ಪಟ್ಟಣ ಮಾತ್ರವಲ್ಲದೆ, ವಿವಿಧ ಗ್ರಾಮಗಳಿಂದ ಬಂದಿದ್ದ ಸಹಸ್ರಾರು ಭಕ್ತರು, ಮಹಿಳೆಯರು, ಮಕ್ಕಳು ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ಹನುಮಂತ ದೇವರ ಗುಡಿಯ ಹತ್ತಿರ ಕೇವಲ ಅರ್ಧ ಗಂಟೆಯಲ್ಲಿ ತಂದು ರಥವನ್ನು ನಿಲ್ಲಿಸಲಾಯಿತು. ಸುಮಾರು 30 ಡಿಗ್ರಿ ಇಳಿಜಾರಿನಲ್ಲಿ ವಾಲಿದ ತೇರನ್ನು ಭೋವಿ ಸಮಾಜದವರು ಕಲ್ಲಿನ ಗಾಲಿಗಳಿಗೆ ಸನ್ನೆಗೋಲು ಹಾಕಿ ತೇರನ್ನು ದೇವಸ್ಥಾನ ಕಡೆಗೆ ತಿರುಗಿಸಿ ನಿಲ್ಲಿಸಿದರು. ಈ ಕಾರ್ಯಕ್ಕೆ ಸುಮಾರು ಒಂದೂವರೆ ಗಂಟೆಗಳ ಕಾಲ 20–30 ಜನ ನಿರಂತರ ಶ್ರಮವಹಿಸಿದರು.
ಕಳೆದ 8 ದಶಕಗಳಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಬೆಳಗಿನ ವೇಳೆಯಲ್ಲಿ ರಥೋತ್ಸವ ನಡೆಯುವುದು ಮತ್ತೊಂದು ವಿಶೇಷವಾಗಿದೆ.ಡೊಳ್ಳು, ಕರಡಿ ಮಜಲು, ಜಾಂಝ್ ಪಥಕ್ ಹಾಗೂ ಬಾಜಾ ಭಜಂತ್ರಿಗಳು ಉತ್ಸವಕ್ಕೆ ಮೆರಗು ನೀಡಿದವು. ಜಾತ್ರೆಗೆಂದು ಆಗಮಿಸಿದ್ದ ಬಂಧುಗಳಿಗೆ ಮನೆಯವರು ಯುಗಾದಿ ಹಬ್ಬದ ನಿಮಿತ್ತ ಸಿಹಿ, ಹಾಲು ಹುಗ್ಗಿ, ಮಾದಲಿ ಉಣಬಡಿಸಿ ಉಪಚರಿಸಿದರು.
ಯುಗಾದಿ ಹಬ್ಬದ ಅಂಗವಾಗಿ ಪ್ರತಿಯೊಬ್ಬರೂ ಎಣ್ಣೆನೀರು (ಅಭ್ಯಂಜನ) ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಜಾತ್ರೆಯಲ್ಲಿ ಆಟಿಕೆ ಸಾಮಾನು, ತೂಗು ತೊಟ್ಟಿಲು, ಜೋಕಾಲಿ ಯಾತ್ರಿಕರಿಗೆ ಮುದ ನೀಡಿದವು. ಸಾಮರಸ್ಯದ ಸಂಕೇತವಾಗಿರುವ ವೆಂಕಟೇಶ್ವರ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಮುಸ್ಲಿಂ ಸಮುದಾಯದ ಯುವಕರು ತಂಪು ಪಾನೀಯ ನೀಡಿ ಉಪಚರಿಸಿದರು.