ಫೆ. 24ಕ್ಕೆ ಉಳವಿ ಚೆನ್ನಬಸವಣ್ಣನ ರಥೋತ್ಸವ

KannadaprabhaNewsNetwork | Updated : Jan 11 2024, 01:02 PM IST

ಸಾರಾಂಶ

ಜೋಯಿಡಾ ತಾಲೂಕಿನ ಶ್ರೀಕ್ಷೇತ್ರ ಉಳವಿಯ ಚೆನ್ನಬಸವಣ್ಣನವರ ರಥೋತ್ಸವ ಫೆ. 24ರಂದು ನಡೆಯುವ ಹಿನ್ನೆಲೆ ಬುಧವಾರ ಪೂರ್ವ ಸಿದ್ಧತೆ ಸಭೆ ಕಾರವಾರ ಸಹಾಯಕ ಕಮಿಷನರ್ ಕನಿಷ್ಕ ಅಧ್ಯಕ್ಷತೆಯಲ್ಲಿ ನಡೆಯಿತು.ಜಾತ್ರಾ ಸಿದ್ಧತೆ, ಅವುಗಳ ಪಾಲನೆಯ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು.

ಜೋಯಿಡಾ:ತಾಲೂಕಿನ ಶ್ರೀಕ್ಷೇತ್ರ ಉಳವಿಯ ಚೆನ್ನಬಸವಣ್ಣನವರ ರಥೋತ್ಸವ ಫೆ. 24ರಂದು ನಡೆಯುವ ಹಿನ್ನೆಲೆ ಬುಧವಾರ ಪೂರ್ವ ಸಿದ್ಧತೆ ಸಭೆ ಕಾರವಾರ ಸಹಾಯಕ ಕಮಿಷನರ್ ಕನಿಷ್ಕ ಅಧ್ಯಕ್ಷತೆಯಲ್ಲಿ ನಡೆಯಿತು.ಜಾತ್ರಾ ಸಿದ್ಧತೆ, ಅವುಗಳ ಪಾಲನೆಯ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. 

ವಿಶೇಷವಾಗಿ ಅರಣ್ಯ ಇಲಾಖೆ ಮತ್ತು ಸಾರಿಗೆ, ಅಬಕಾರಿ ಇಲಾಖೆಗಳ ಕುರಿತು ಚರ್ಚೆ ನಡೆದವು. ಪೋಟೊಲಿ, ಗುಂದ, ಉಳವಿ ಮಾರ್ಗ ತೀರಾ ಹದಗೆಟ್ಟಿದೆ. ಈ ಮಾರ್ಗಕ್ಕೆ ತೇಪೆ ಕಾರ್ಯ ಕೂಡ ಸರಿಯಾಗಿ ಮಾಡಿಲ್ಲ, ರಸ್ತೆಯನ್ನು ಜಾತ್ರೆ ಒಳಗೆ ಸರಿಪಡಿಸದಿದ್ದರೆ ಪೋಟೊಲಿಯಲ್ಲಿ ರಸ್ತೆ ತಡೆದು ಫೆ. 20ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಭಕ್ತರಾದ ರಾಜು ಬೈಲಹೊಂಗಲ ಹಾಗೂ ಇತರರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಾತ್ರೆಯಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವ ಕಾರಣ ಅಬಕಾರಿ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕೆಂದರು. ಕುಡಿಯುವ ನೀರು ಮತ್ತು ಸಾರಿಗೆ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಇಲಾಖೆ ಅಗತ್ಯ ಕ್ರಮಗೊಳ್ಳುವ ಭರವಸೆ ನೀಡಿದರು. ಫೆ. 16ರಿಂದ 26ರ ವರೆಗೆ ಉಳವಿ ಜಾತ್ರೆ ನಡೆಯಲಿದ್ದು ಫೆ. 24ರಂದು ಮಧ್ಯಾಹ್ನ 4ಕ್ಕೆ ಮಹಾರಥೋತ್ಸವ ನಡೆಯಲಿದೆ ಎಂದು ವ್ಯವಸ್ಥಾಪಕ ಶಂಕರಯ್ಯ ಕಲ್ಮಠ ಶಾಸ್ತ್ರಿ ತಿಳಿಸಿದರು.

ಟ್ರಾಫಿಕ್ ಸಮಸ್ಯೆ ನಿವಾರಿಸುವ ಕುರಿತು ದಾಂಡೇಲಿ ಡಿವೈಎಸ್‌ಪಿ ಶಿವಾನಂದ ಕಟಗಿ ತಮ್ಮ ಸಿಬ್ಬಂದಿ ಕೈಕೊಳ್ಳುವ ಕ್ರಮಗಳ ಕುರಿತು ವಿವರಿಸಿದರು. ಈ ವೇಳೆ ಸಹಾಯಕ ಆಯುಕ್ತ ಕನಿಷ್ಕ ಮಾತನಾಡಿ, ಇದು ಒಬ್ಬರ ಜಾತ್ರೆ ಅಲ್ಲ, ನಮ್ಮ, ನಿಮ್ಮೆಲ್ಲರ ಜಾತ್ರೆ. ನಿಮ್ಮ ಅಭಿಪ್ರಾಯ ತಿಳಿದಿದ್ದೇನೆ, ಚೆನ್ನಾಗಿ ಜಾತ್ರೆ ಮಾಡೋಣ ಎಂದರು.

ಈ ವೇಳೆ ಉಳವಿ ಟ್ರಸ್ಟ್ ಉಪಾಧ್ಯಕ್ಷ ಸಂಜಯ್ ಕಿತ್ತೂರು , ತಹಸೀಲ್ದಾರ್ ಮಂಜುನಾಥ ಮುನ್ನೊಳಿ, ಗ್ರಾಪಂ ಅಧ್ಯಕ್ಷ ಮಂಜುನಾಥ ಮೊಕಾಶಿ, ನಂದಿಗದ್ದೆ ಗ್ರಾಪಂ ಅಧ್ಯಕ್ಷ ಅರುಣ್ ದೇಸಾಯಿ, ಉಳವಿ ಗ್ರಾಪಂ ಸದಸ್ಯರು, ಟ್ರಸ್ಟ್ ಸದಸ್ಯರು, ಸಿಪಿಐ ನಿತ್ಯಾನಂದ ಪಂಡಿತ್, ಪಿಎಸ್‌ಐ ಮಹೇಶ ಎಂ., ಅಧಿಕಾರಿಗಳು ಉಪಸ್ಥಿತರಿದ್ದರು.

Share this article