ವಿದ್ಯಾರ್ಥಿಗಳು ಪ್ರೀತಿ ಬಿತ್ತಿ ಬೆಳೆಯುವ ರೈತರಾಗಬೇಕು: ತಿಪ್ಪೇಸ್ವಾಮಿ

KannadaprabhaNewsNetwork | Published : Jan 11, 2024 1:30 AM

ಸಾರಾಂಶ

ಪ್ರೀತಿಯಿಂದ ಮಾತ್ರವೇ ಜಾತಿ ಮೀರಿದ ಸ್ನೇಹಗಳಿಸಲು ಸಾಧ್ಯ. ಜಾತಿ ಮೀರಿದ ದೇಶಪ್ರೇಮದ ಕೊರತೆಯಿಂದಾಗಿಯೇ ಹಡಗಿನಲ್ಲಿ ಬಂದ ಆಂಗ್ಲರಿಗೆ ನಮ್ಮ ದೇಶ ದಾಸ್ಯಕ್ಕೆ ಸಿಕ್ಕಿತ್ತು ಬಿ.ಪಿ.ತಿಪ್ಪೇಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ವಿದ್ಯಾರ್ಥಿಗಳು ಸಮಾಜದಲ್ಲಿ ಪ್ರೀತಿ ಬಿತ್ತಿ ಬೆಳೆಯುವ ರೈತರಾಗಬೇಕು ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.

ತಾಲೂಕಿನ ಶಿಡ್ಲಯ್ಯನಕೋಟೆ ಗ್ರಾಮದಲ್ಲಿ ಬುಧವಾರ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ವರ್ಗದವರು ವಾಸಿಸುವ ಬೀದಿಗಳನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸಿ ಗ್ರಾಮಸ್ಥರ ಪ್ರೀತಿಗಳಿಸಿದ್ದು ರಾಷ್ಟ್ರ ನಿರ್ಮಾಣ ಕಾರ್ಯದಲ್ಲೂ ಸಹ ಇದೇ ತೆರನಾದ ಪ್ರೀತಿ ಬಳಸಬೇಕು. ಪ್ರೀತಿಯಿಂದ ಮಾತ್ರವೇ ಜಾತಿ ಮೀರಿದ ಸ್ನೇಹಗಳಿಸಲು ಸಾಧ್ಯ. ಜಾತಿ ಮೀರಿದ ದೇಶಪ್ರೇಮದ ಕೊರತೆಯಿಂದಾಗಿಯೇ ಹಡಗಿನಲ್ಲಿ ಬಂದ ಆಂಗ್ಲರಿಗೆ ನಮ್ಮ ದೇಶ ದಾಸ್ಯಕ್ಕೆ ಸಿಕ್ಕಂತಾಯಿತು ಎಂದರು.

ಹುಟ್ಟುತ್ತಾ ವಿಶ್ವ ಮಾನವನಾಗಿ ಹುಟ್ಟಿ, ಬೆಳೆಯುತ್ತ ಅಲ್ಪ ಮಾನವನಾಗುತ್ತಾನೆ ಎಂಬ ಕುವೆಂಪುರವರ ಹೇಳಿಕೆಯಂತೆ ಅಲ್ಪ ಮಾನವರಾಗುತ್ತಿರುವವರನ್ನು ವಿಶ್ವಮಾನವತ್ವದ ಕಡೆಗೆ ತರುವ ಶಕ್ತಿ ಯುವ ಸಮೂಹಕ್ಕಿದೆ. ಹಾಗೆಯೇ ಅಂಬೇಡ್ಕರ್ ಹೇಳಿದಂತೆ ವಿದ್ಯಾರ್ಥಿಗಳು ಜನಸಾಮಾನ್ಯರ ಬಳಿಗೆ ಹೋಗಿ ವೈಜ್ಞಾನಿಕತೆಯ ಅರಿವು ಮೂಡಿಸುವ ಅವಶ್ಯಕತೆಯಿದೆ. ಇಲ್ಲವಾದರೆ ಮೌಡ್ಯ, ಅಪನಂಬಿಕೆ, ಪರಸ್ಪರ ವೈಮನಸ್ಸಿನಿಂದ ದೇಶದಲ್ಲಿ ಅಂತಃಕಲಹ ಹೆಚ್ಚಿ ಭಾರತದ ಸಾರ್ವಭೌಮತೆಗೆ ಧಕ್ಕೆಯಾಗುವ ಅಪಾಯವಿದೆ ಎಂದರು.

ವಾಣಿ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಮಹೇಶ್ ಮಾತನಾಡಿ, ಎನ್ಎಸ್ಎಸ್ ಶಿಬಿರದ ಉದ್ಧೇಶವೇ ಸೇವೆ ಮಾಡುವಂತಹದ್ದಾಗಿದೆ. ಇದು ಗಾಂಧಿ ಕನಸು ಕೂಡ ಆಗಿತ್ತು. ಯುವಕರಲ್ಲಿ ದೇಶ ಪ್ರೇಮ ಹೆಚ್ಚಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರಸ್ತುತ ಯುವ ಜನತೆಗೆ ಸ್ವಾಮಿ ವಿವೇಕಾನಂದರವರು ಮಾದರಿಯಾಗುತ್ತಾರೆ. ದೇವಸ್ಥಾನ, ಶಾಲಾ-ಕಾಲೇಜು ಆವರಣ ಹಾಗೂ ಊರಿನ ಕೊಳೆ ತೆಗೆಯುವುದರ ಜೊತೆಗೆ ಮನಸ್ಸಿನ ಕಲ್ಮಶವನ್ನು ಸಹ ತೆಗೆಯುವ ಕೆಲಸವನ್ನು ಇಂತಹ ಶಿಬಿರಗಳು ಮಾಡಬೇಕಾಗಿದೆ. ಪ್ರಸ್ತುತ ದಿನಮಾನದಲ್ಲಿ ಕಣ್ಮರೆಯಾಗುತ್ತಿರುವ ಮನುಷ್ಯ ಪ್ರೀತಿ ಮತ್ತು ಸಂಬಂಧಗಳನ್ನು ಬೆಸೆಯುವಂತಹ ಕೊಂಡಿಗಳು ಇಂತಹ ಶಿಬಿರಗಳಿಂದ ಆಗಬೇಕು. ಮುಖ್ಯವಾಗಿ ಯುವ ಜನತೆ ದೇಶ ಸೇವೆ ಮತ್ತು ದೇಶ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಜಾತಿ, ಧರ್ಮ, ವರ್ಗ, ವರ್ಣ ಹಾಗೂ ಮೌಢ್ಯ ಅಳಿಸುವತ್ತ ಹೆಜ್ಜೆ ಇಡಬೇಕಾಗಿದೆ ಎಂದರು.

ಈ ವೇಳೆ ಹೊಸಯಳನಾಡು ಪಿಯು ಕಾಲೇಜು ಪ್ರಾಂಶುಪಾಲ ಎಚ್.ತಿಪ್ಪೇಸ್ವಾಮಿ, ವಕೀಲ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಗ್ರಾಪಂ ಸದಸ್ಯ ತ್ಯಾರೇಶ್ , ತಿಪ್ಪಮ್ಮ, ತಿಮ್ಮಯ್ಯ, ಎನ್ಎಸ್ಎಸ್ ಅಧಿಕಾರಿ ಮೂರ್ತಿ, ಮಹಂತೇಶ್, ಡಾ.ರಾಧಿಕಾ ಮುಂತಾದವರಿದ್ದರು.

Share this article