ರಟ್ಟೀಹಳ್ಳಿ ಪಟ್ಟಣದ ತರಳಬಾಳು ಬಡಾವಣೆಯ ಉಜ್ಜಕ್ಕಳವ ಪ್ಲಾಟ್‍ನಲ್ಲಿ ₹9 ಲಕ್ಷ ವೆಚ್ಚದ ಉದ್ಯಾನ ನಿರ್ಮಾಣ ಕಾಮಗಾರಿ ನಡೆದು ವರ್ಷಗಳು ಗತಿಸಿದರೂ ಸರಿಯಾದ ನಿರ್ವಹಣೆ ಇಲ್ಲದೇ ಪಾಳುಬಿದ್ದಿದೆ.
ಸತೀಶ ಸಿ.ಎಸ್.
ರಟ್ಟೀಹಳ್ಳಿ: ಪಟ್ಟಣದ ತರಳಬಾಳು ಬಡಾವಣೆಯ ಉಜ್ಜಕ್ಕಳವ ಪ್ಲಾಟ್‍ನಲ್ಲಿ ₹9 ಲಕ್ಷ ವೆಚ್ಚದ ಉದ್ಯಾನ ನಿರ್ಮಾಣ ಕಾಮಗಾರಿ ನಡೆದು ವರ್ಷಗಳು ಗತಿಸಿದರೂ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಹಾವು, ಚೇಳುಗಳ ಕಾಟಕ್ಕೆ ಅಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.2022-23ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಕೈಗೊಂಡ ಉದ್ಯಾನ ಅಭಿವೃದ್ಧಿ ಕಾಮಗಾರಿ ನಡೆಸಿ ಅದನ್ನು ನಿರ್ವಹಣೆ ಮಾಡದೇ ನಿರ್ಲಕ್ಷ್ಯವಹಿಸಿದ್ದರಿಂದ ಉದ್ಯಾನದಲ್ಲಿ ಎದೆ ಎತ್ತರಕ್ಕೆ ಬೆಳೆದು ನಿಂತ ಗಿಡ ಗಂಟಿಗಳು ಕಸದ ರಾಶಿಗಳಿಂದಾಗಿ ಹಾವು, ಚೇಳು ಹಾಗೂ ಇನ್ನಿತರ ಪ್ರಾಣಿಗಳ ಹಾವಳಿಯಿಂದಾಗಿ ಅಲ್ಲಿನ ನಿವಾಸಿಗಳು ಬೇಸತ್ತು ಹೋಗಿದ್ದಾರೆ. ನಾವು ಕಟ್ಟಿದ ತೆರಿಗೆ ಹಣ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಪೋಲು ಮಾಡಿ ಕಾಮಗಾರಿ ಪೂರ್ಣಗೊಳಿಸದೆ ಲಕ್ಷಾಂತರ ಹಣ ದುರ್ಬಳಕೆಯಾಗುತ್ತಿದ್ದು, ಸ್ಥಳೀಯ ಆಡಳಿತದ ಯಾವುದೇ ಕಾಮಗಾರಿಗಳಾಗಲಿ ಸಾರ್ವಜನಿಕರ ಬಳಕೆಗೆ ಉಪಯೋಗವಾಗುತ್ತಿಲ್ಲ ಎಂದು ಸ್ಥಳೀಯ ಆಡಳಿತದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.ಸಾರ್ವಜನಿಕರಿಗೆ ಉಪಯೋಗವಾಗುವಂತ ವಾಕಿಂಗ್ ಪಾತ್, ಮಕ್ಕಳ ಆಟಿಕೆ ವಸ್ತುಗಳು, ವಿಶ್ರಾಂತಿ ಮಾಡಲು ಬೆಂಚ್, ನೆರಳಿಗಾಗಿ ಗಿಡ ಗಂಟೆಗಳನ್ನು ನೆಡದೆ ಕೇವಲ ಕಾಟಾಚಾರದ ಕಾಮಗಾರಿ ನಡೆಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಲ್ಲಿನ ನಿವಾಸಿ ಮಹೇಶ ಕೆರೂರ ಅಸಮಧಾನ ವ್ಯಕ್ತಪಡಿಸಿದರು.ಪಾರ್ಕ್ ನಿರ್ಮಾಣ ಕಾಮಗಾರಿಗೆ ಬಳಸಿದ ಕಬ್ಬಿಣದ ಗೇಟ್‍ಗಳು, ತಡೆಗೋಡೆಗಳು ಕಿತ್ತು ಹೋಗಿದ್ದು, ದನ ಕರುಗಳ, ಹಂದಿ ನಾಯಿಗಳ ಹಾಗೂ ವಿಷಕಾರಿ ಪ್ರಾಣಿಗಳ ವಾಸಸ್ಥಾನವಾಗಿದೆ. ಕಾಮಗಾರಿ ಮುಗಿದು ವರ್ಷಗಳೇ ಗತಿಸಿದರೂ ಹೆಚ್ಚಿನ ಅಭಿವೃದ್ಧಿ ಕೆಲಸಗಳಿಗೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ್ ಎಂಜಿನಿಯರ್ ಹಾಗೂ ಜನ ಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳದೇ ಇರುವುದು ವಿಪರ್ಯಾಸ. ಸುಮಾರು 9 ಲಕ್ಷ ವೆಚ್ಚದಲ್ಲಿ ಜಂಗಲ್ ಕಟಾವ್ ಹಾಗೂ ಸುತ್ತಲೂ ಕಬ್ಬಿಣದ ತಡೆಗೋಡೆ ಹಾಗೂ ಗೇಟ್ ಅಳವಡಿಸಿ ಕಾಮಗಾರಿ ಮುಗಿಸಿ ವರ್ಷಗಳೂ ಗತಿಸಿದ್ದು ಪ್ರಸ್ತುತ ಗೇಟ್‍ಗಳು ಹಾಗೂ ತಡೆಗೋಡೆಗಳು ಕಿತ್ತು ಜಂಗು ತಿನ್ನುತ್ತಿವೆ. ಕಾರಣ ಇನ್ನಾದರೂ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲಿ ಇತ್ತ ಕಡೆ ಗಮನ ಹರಿಸುವರೋ ಕಾದು ನೋಡಬೇಕಿದೆ.ಸರ್ಕಾರಿ ಕಟ್ಟಡ ನಿರ್ವಹಣೆ ನಿರ್ಲಕ್ಷ್ಯ: ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸುಮಾರು 16 ಲಕ್ಷದ 2 ಹೈಟೆಕ್ ಶೌಚಾಲಯ ನಿರ್ಮಾಣವಾಗಿ ವರ್ಷ ಕಳೆದರೂ ಉದ್ಘಾಟನೆಗೊಳ್ಳದೆ ಕಟ್ಟಡ ಬಿರುಕು ಬಿಟ್ಟು ಕುಸಿಯುವ ಹಂತ ತಲುಪಿದೆ. ಹೀಗೆ ಇನ್ನೂ ಅನೇಕ ಸಮಸ್ಯೆಗಳ ಜೊತೆಗೆ ಸಮರ್ಪಕ ನಿರ್ವಹಣೆ ಇಲ್ಲದೆ ನರಳುತ್ತಿದ್ದು, ಪಟ್ಟಣ ಪಂಚಾಯತ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಪ್ರಯೋಜನವಾಗಿಲ್ಲ: ಪಟ್ಟಣ ಪಂಚಾಯತ್ ವತಿಯಿಂದ ನಿರ್ಮಾಣವಾದ ಉದ್ಯಾನವನ ಸಾರ್ವಜನಿಕರ ಬಳಕೆಗೆ ಉಪಯೋಗವಾಗದೆ ವಿಷ ಜಂತುಗಳ ವಾಸಸ್ಥಾನವಾಗಿದೆ. ಮನೆಯ ಒಳಗಡೆ ಹಾವು, ಚೇಳು, ನಾಯಿಗಳ ಉಪಟಳ ಹೆಚ್ಚಾಗಿದ್ದು, ಈ ಬಗ್ಗೆ ಪಟ್ಟಣ ಪಂಚಾಯತ್‍ಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿ ಮಹೇಶ ಕೆರೂರ ಹೇಳಿದರು.ಉಜ್ಜಕ್ಕಳವರ ಪ್ಲಾಟ್‍ನಲ್ಲಿ ನಿರ್ಮಾಣವಾದ ಉದ್ಯಾನವನದಲ್ಲಿ ಗಿಡ ಗಂಟಿಗಳು ಬೆಳೆದಿದ್ದು, ಇನ್ನೆರಡು ದಿನಗಳಲ್ಲಿ ಜೆಸಿಬಿ ಬಳಸಿ ಎಲ್ಲವನ್ನು ಸ್ವಚ್ಛಗೊಳಿಸಿ ಅಲ್ಲಿನ ನಿವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸದ್ಯ ಕೂರಲು ಬೆಂಚ್ ನಿರ್ಮಾಣ ಹಾಗೂ ವಾಕಿಂಗ್ ಮಾಡಲು ಅನುಕೂಲವಾಗುವಂತೆ ಮಾಡಲಾಗುವುದು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.