ರಾಯಣ್ಣನ ದೇಶಪ್ರೇಮ ಯುವ ಸಮುದಾಯಕ್ಕೆ ಸ್ಫೂರ್ತಿ

KannadaprabhaNewsNetwork |  
Published : Jan 13, 2024, 01:35 AM IST
ಅಅಅಅ | Kannada Prabha

ಸಾರಾಂಶ

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಂದಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಐಕ್ಯ ಸ್ಥಳದಲ್ಲಿ ಶುಕ್ರವಾರ ನಡೆದ ನಂದಗಡ ಉತ್ಸವ 2024ರ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬೆಳಗಾವಿ

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ. ಕಿತ್ತೂರು ಚನ್ನಮ್ಮಳ ಬಲಗೈ ಬಂಟನಾಗಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಸಿಡಿದೆದ್ದು, ದೇಶದ ಸ್ವಾತಂತ್ರಕ್ಕಾಗಿ ನೇಣುಗಂಬದವರೆಗೆ ನಿರಂತರ ಸೆಣಸಿದ ಮಹಾನ್ ಶೂರ ಸಂಗೊಳ್ಳಿ ರಾಯಣ್ಣ ಎಂದು ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಂದಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಐಕ್ಯ ಸ್ಥಳದಲ್ಲಿ ಶುಕ್ರವಾರ ನಡೆದ ನಂದಗಡ ಉತ್ಸವ 2024ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಸಂಗೊಳ್ಳಿಯಲ್ಲಿ ಜನ್ಮ ಪಡೆದರು ತಮ್ಮ ಆಶಯದಂತೆ ಅವರು ಐಕ್ಯರಾಗಿದ್ದು, ನಂದಗಡದಲ್ಲಿ. ರಾಯಣ್ಣ ಕೇವಲ 33 ವರ್ಷ ಬದುಕಿದರು. ಇಡೀ ಜಗತ್ತು ಅವರ ಹೆಸರು ಗುರುತಿಸುವಷ್ಟು ದೊಡ್ಡ ಹೆಸರು ಸಂಪಾದನೆ ಮಾಡಿದ್ದಾರೆ. ರಾಯಣ್ಣನ ದೇಶ ಪ್ರೇಮ, ನಿಸ್ವಾರ್ಥ ಸೇವೆ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿ ಎಂದರು.

ಸಂಗೊಳ್ಳಿ ರಾಯಣ್ಣನಂತಹ ಮಕ್ಕಳು ಪ್ರತಿ ಮನೆ ಮನೆಯಲ್ಲಿ ಜನಿಸಲಿ ಎಂಬುವುದು ಪ್ರತಿಯೊಬ್ಬರ ಆಸೆ. ಅವರ ಜನ್ಮದಿನ ಆಗಸ್ಟ್ 15 ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನವಾದರೆ, ಹುತಾತ್ಮರಾದ ದಿನ ಜನವರಿ 26 ಭಾರತ ಗಣರಾಜ್ಯೋತ್ಸವ ದಿನವಾಗಿರುವುದು ವಿಶೇಷ. ಸಂಗೊಳ್ಳಿ ಉತ್ಸವದಂತೆ ನಂದಗಡದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಉತ್ಸವ ಮಾಡಬೇಕು ಎಂದು ಅಭಿಮಾನಿಗಳ ಬೇಡಿಕೆಯಾಗಿತ್ತು. ಅದರಂತೆ ಸರ್ಕಾರ ಸಹ ಇದಕ್ಕೆ ಅನುಮತಿ ನೀಡಿ ಈ ವರ್ಷ ಜಿಲ್ಲಾಡಳಿತದಿಂದ ನಂದಗಡ ಉತ್ಸವ ಆಚರಣೆ ಮಾಡಲಾಗುತ್ತಿದೆ. ಬರುವ ವರ್ಷದಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ನಂದಗಡ ಉತ್ಸವ ನಡೆಯಲಿ ಎಂಬುದು ನನ್ನ ಆಶಯವಾಗಿದೆ ಎಂದು ತಿಳಿಸಿದರು.

ಬೆಳಗಾವಿ ಉಪವಿಭಾಗಾಧಿಕಾರಿ ಶವ್ರಣ ನಾಯಕ, ಖಾನಾಪುರ ತಹಸೀಲ್ದಾರ್‌ ಪ್ರಕಾಶ ಗಾಯಕವಾಡ, ನಂದಗಡ ಗ್ರಾಮ ಪಂಚಾಯತಿ ಅಧ್ಯಕ್ಷ ಯಲ್ಲಪ್ಪ ಶಿವಾಜಿಗರವ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವೀರ ಜ್ಯೋತಿಗೆ ಯಾತ್ರೆಗೆ ಚಾಲನೆ

ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರು ಕ್ರಾಂತಿ ಸಂಗೊಳ್ಳಿ ರಾಯಣ್ಣ ಉತ್ಸವದ ನಿಮಿತ್ತ ಜಿಲ್ಲೆಯಾದ್ಯಂತ ಸಂಚರಿಸಲಿರುವ ವೀರ ಜ್ಯೋತಿ ಯಾತ್ರೆಗೆ ರಾಯಣ್ಣನ ಐಕ್ಯ ಸ್ಥಳದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಹಸಿರು ನಿಶಾನೆ ತೋರಿಸುವ ಮೂಲಕ ನಂದಗಡದ ರಾಯಣ್ಣ ವೃತ್ತದಿಂದ ಜ್ಯೋತಿಯನ್ನು ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಖಾನಾಪೂರ ತಹಶೀಲ್ದಾರ ಪ್ರಕಾಶ ಗಾಯಕವಾಡ ಹಾಗೂ ನಂದಗಡ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸಿಬ್ಬಂದಿ, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ