ಕನ್ನಡಪ್ರಭ ವಾರ್ತೆ ಬೆಳಗಾವಿ
ನಂದಗಡಲ್ಲಿ ಶುಕ್ರವಾರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ ವೀರ ಭೂಮಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು. ವಸ್ತು ಸಂಗ್ರಹಾಲಯ, ಹಾಲೋಗ್ರಾಮ ವೀಕ್ಷಣೆಯ ಗುಣಮಟ್ಟ, ಮೂರ್ತಿಗಳು, ಧ್ವನಿವರ್ಧಕ, ಗುಹೆ, ಕವಳ ಗುಡ್ಡ, ಡೈಮೆನ್ಶನ್ ಚಿತ್ರಮಂದಿರ, ಘಟನಾ ಚಿತ್ರಣದ ವಿವರ, ರಸ್ತೆ, ಉದ್ಯಾನವನ, ಉಪಹಾರ ಗೃಹ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ಕಾಂಪೌಂಡ್, ದೀಪಾಲಂಕಾರ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಕಾಮಗಾರಿಗಳ ಗುಣಮಟ್ಟ ಕಾಪಾಡುವ ಮೂಲಕ ಕಾಲಮಿತಿಯೊಳಗೆ ಬಾಕಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.ಈಗಾಗಲೇ ಮ್ಯೂಸಿಯಂ ಸಂಪೂರ್ಣ ಮುಕ್ತಾಯಗೊಂಡಿದೆ, ಪ್ರವಾಸಿಗರ ಬೇಡಿಕೆಯಂತೆ ಅವರಿಗೆ ತೊಂದರೆಯಾಗದ ರೀತಿಯಲ್ಲಿ ಶೀಘ್ರ ಸಂಗ್ರಹಾಲಯ ಪ್ರಾರಂಭಕ್ಕೆ ಯೋಜನೆ ರೂಪಿಸಲಾಗಿದೆ. ಅಂದಾಜು ₹ 75 ಕೋಟಿ ವೆಚ್ಚದಲ್ಲಿ ರಾಯಣ್ಣ ವಸ್ತು ಸಂಗ್ರಹಾಲಯ ನಿರ್ಮಾಣವಾಗಿದೆ. ಶಾಲಾ ಕಾಲೇಜು ಮಕ್ಕಳಿಗೆ ರಿಯಾಯತಿ ದರದಲ್ಲಿ ಪ್ರವೇಶ ನೀಡಲಾಗುವುದು. ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ರಾಯಣ್ಣನ ದೇಶ ಪ್ರೇಮ, ಪ್ರತಿಯೊಬ್ಬರು ಅರಿಯಬೇಕು ಎಂಬ ಉದ್ದೇಶದಿಂದ ಸಂಗ್ರಹಾಲಯ ನಿರ್ಮಾಣ ಮಾಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಮಾತನಾಡಿ, ರಾಯಣ್ಣನ ವೀರಭೂಮಿ ನಂದಗಡದಲ್ಲಿರುವ ಕಾರಣ ರಾಯಣ್ಣನ ಜೀವನ ಚರಿತ್ರೆ ಸಾರುವ ಮೂರ್ತಿಗಳಿರುವ ಮ್ಯೂಸಿಯಂ ನಂದಗಡದಲ್ಲಿ ನಿರ್ಮಾಣ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಸಾಕಷ್ಟು ಪ್ರೇಕ್ಷಕರನ್ನು ವಸ್ತು ಸಂಗ್ರಹಾಲಯ ಸೆಳೆಯಲಿದೆ ಎಂದರು.
ಈ ವೇಳೆ ಶಾಸಕ ವಿಠ್ಠಲ ಹಲಗೇಕರ, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಆರ್.ಶಾಲಿನಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ ಜೈನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ ಸೇರಿ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.