ಜಿಡ್ಡುಗಟ್ಟಿದ ಗದಗ ಜಿಲ್ಲಾಡಳಿತಕ್ಕೆ ರಾಯರಡ್ಡಿ ಬಿಸಿ

KannadaprabhaNewsNetwork |  
Published : Aug 08, 2026, 02:15 AM IST
ಅಧಿಕಾರಿಗಳನ್ನು ತೀವ್ರ ತೆಗೆದುಕೊಂಡ ಸಚಿವ ಬಸವರಾಜ ರಾಯರಡ್ಡಿ.  | Kannada Prabha

ಸಾರಾಂಶ

ಕುಡಿಯುವ ನೀರಿನ ಡಿಬಿಒಟಿ ಯೋಜನೆ ನಿರ್ವಹಣೆಯ ಲೋಪಗಳ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರಾಯರಡ್ಡಿ, ಜನರ ಜೀವದ ಜತೆ ಆಟವಾಡುತ್ತಿದ್ದೀರಾ? ನೀವೇನು ಜಿಲ್ಲಾ ಸ್ಥಳದಲ್ಲಿ ಕುಳಿತು ಉದ್ದು ಹುರಿತೀರಾ ಎಂದು ಸಚಿವ ಬಸವರಾಜ ರಾಯರಡ್ಡಿ ಪ್ರಶ್ನಿಸಿದರು.

ಶಿವಕುಮಾರ ಕುಷ್ಟಗಿ

ಗದಗ: ಜಿಡ್ಡುಗಟ್ಟಿದ್ದ ಜಿಲ್ಲೆಯ ಆಡಳಿತ ಯಂತ್ರಕ್ಕೆ ನೂತನ ಸಚಿವ ಬಸವರಾಜ ರಾಯರಡ್ಡಿ ಅವರು ಜಿಪಂ ಸಭಾಭವನದಲ್ಲಿ ಶುಕ್ರವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ಮೂಲಕ ನೇರವಾಗಿ ಬಿಸಿ ಮುಟ್ಟಿಸಿದ್ದಾರೆ.

ನೀವು ಪಡೆಯುವ ಪಗಾರ ಜನರ ತೆರಿಗೆ ಹಣ. ಜನರಿಗಾಗಿ ಕೆಲಸ ಮಾಡಿ, ಬೇಜವಾಬ್ದಾರಿತನ ಸಹಿಸಲ್ಲ ಎಂದು ಹೆಜ್ಜೆ ಹೆಜ್ಜೆಗೆ ಎಚ್ಚರಿಸುವ ಮೂಲಕ ಅಧಿಕಾರಿಗಳ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ.

ಸಭೆಗೆ ಅಧಿಕಾರಿಗಳು ನೀಡಿದ ಮಾಹಿತಿ ಪುಸ್ತಕದಲ್ಲಿದ್ದ ಅಂಕಿ, ಸಂಖ್ಯೆಗಳ ವ್ಯತ್ಯಾಸ ಹಾಗೂ ತಪ್ಪುಗಳನ್ನು ಸೂಕ್ಷ್ಮವಾಗಿ ಗಮನಿಸಿದ ಸಚಿವರು ತೀವ್ರ ಗರಂ ಆದರು.

ಇಂಗ್ಲಿಷ್ ಬರೆಯೋಕೆ ಬರಲ್ಲ ಅಂದರೆ ಕನ್ನಡದಲ್ಲೇ ಬರೆಯಿರಿ. ವಾಟ್ ಈಸ್ ದಿಸ್ ನಾನ್‌ಸೆನ್ಸ್? ಅಂಕಿ, ಸಂಖ್ಯೆ ನಮೂದಿಸುವಾಗ ಲಕ್ಷ್ಯ ಬೇಡವೇ, ಹೆಕ್ಟೇರ್ ಜತೆಗೆ ಎಕರೆಯನ್ನೂ ಬರೆಯಿರಿ. ಸರ್ಕಾರಕ್ಕೆ ಕೊಡುವ ಮಾಹಿತಿ ಪುಸ್ತಕದಲ್ಲಿಯೇ ನೀವು ತಪ್ಪು ತಪ್ಪು ಕೊಟ್ಟರೆ ನಿಮ್ಮಿಂದ ಅದೇಗೆ ಜಿಲ್ಲೆಯ ರೈತರಿಗೆ ನ್ಯಾಯ ಸಿಗಲು ಸಾಧ್ಯ? ಎಂದು ಖಡಕ್ ಎಚ್ಚರಿಕೆ ನೀಡಿದರು.

ಕಣ್ಣೀರಿಟ್ಟ ಜಂಟಿ ನಿರ್ದೇಶಕಿ: ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದಾಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಹಾಗೂ ತೋಟಗಾರಿಕಾ ಅಧಿಕಾರಿ ರಾಜೇಂದ್ರ ಸರಿಯಾದ ಮಾಹಿತಿ ನೀಡಲು ತಡಕಾಡಿದರು. ನಿಮಗೆ ಬೆಳೆಗಳ ಬಗ್ಗೆಯೇ ಮಾಹಿತಿ ಇಲ್ಲ. ಇದು ತೀವ್ರ ನಿರ್ಲಕ್ಷ್ಯ ಎಂದು ಚಳಿ ಬಿಡಿಸಿದ ಸಚಿವರು, ಮೈಂಡ್ ಇಟ್, ದಿಸ್ ಈಸ್ ವಾರ್ನಿಂಗ್. ಇದು ಅಸಮರ್ಥ ಅಧಿಕಾರಿಯ ಲಕ್ಷಣವಾಗಿದೆ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಸಭೆಯಲ್ಲೇ ತಲೆತಗ್ಗಿಸಿ ಗಳಗಳನೆ ಕಣ್ಣೀರಿಟ್ಟ ಘಟನೆ ನಡೆಯಿತು.

ಸರ್ವೇ ಮೊಬೈಲ್ ಆ್ಯಪ್: ಬೆಳೆ ಸಮೀಕ್ಷೆ ನಡೆಸುವ ಮೊಬೈಲ್ ಕೆಟ್ಟುಹೋಗಿದ್ದರಿಂದ ಬಿಂಕದಕಟ್ಟಿ ಗ್ರಾಮದ ನೂರಾರು ರೈತರಿಗೆ ಅನ್ಯಾಯವಾಗಿರುವುದನ್ನು ಪ್ರಸ್ತಾಪಿಸಿದ ಎಚ್.ಕೆ. ಪಾಟೀಲ ಈ ವಿಷಯವಾಗಿ ಕೃಷಿ ಮತ್ತು ಅಂಕಿ ಸಂಖ್ಯೆ ವಿಭಾಗದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮಧ್ಯಪ್ರವೇಶಿಸಿದ ಸಚಿವ ರಾಯರಡ್ಡಿ ಅವರು, ಒಂದು ಸರ್ವೇ ಮಾಡುವಷ್ಟರಲ್ಲಿ ಮೊಬೈಲ್ ಸ್ವಿಚ್ ಆಫ್ ಆಯ್ತು ಎಂದು ಸಬೂಬು ನೀಡುವುದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಶೋಭೆ ತರುತ್ತದೆಯೇ? ನೀವು ಈ ರೀತಿಯ ವರ್ತಿಸಿದರೆ ರೈತರ ಗತಿಯೇನು? ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ತರಾಟೆಗೆ: ಕುಡಿಯುವ ನೀರಿನ ಡಿಬಿಒಟಿ ಯೋಜನೆ ನಿರ್ವಹಣೆಯ ಲೋಪಗಳ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರಾಯರಡ್ಡಿ, ಜನರ ಜೀವದ ಜತೆ ಆಟವಾಡುತ್ತಿದ್ದೀರಾ? ನೀವೇನು ಜಿಲ್ಲಾ ಸ್ಥಳದಲ್ಲಿ ಕುಳಿತು ಉದ್ದು ಹುರಿತೀರಾ?, ಸ್ಥಳಕ್ಕೆ ಹೋಗಿ ಸಮಸ್ಯೆ ಬಗೆಹರಿಸಲು ಆಗುವುದಿಲ್ಲವೇ? ಕುಡಿಯುವ ನೀರು ಪೂರೈಕೆ ಮಾಡುವ ಸ್ಥಳದಲ್ಲಿ 5ರಿಂದ 6 ಅಡಿ ಎತ್ತರದಷ್ಟು ಹೊಲಸು ಸಂಗ್ರಹವಾಗಿದೆ ಎನ್ನುವುದನ್ನು ಸಾರ್ವಜನಿಕರೇ ಹೇಳುತ್ತಾರೆ ಎಂದರೆ ನಿಮ್ಮ ಕೆಲಸವೇನು, ನೀವು ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದೀರಾ? ಕಲುಷಿತ ನೀರು ಕೊಡುವುದು ದೊಡ್ಡ ಅಪರಾಧ. ಒಳ್ಳೆಯ ಯೋಜನೆಯನ್ನು ಮೇಂಟೆನೆನ್ಸ್ ಮಾಡದಿದ್ದರೆ ಹೇಗೆ ಜಿಲ್ಲಾಧಿಕಾರಿಯಾಗಿ ನೀವೇನು ಮಾಡುತ್ತಿದ್ದೀರಿ? ಅವರನ್ನು ಕೂಡಾ ತೀವ್ರ ತರಾಟೆಗೆ ತೆಗೆದುಕೊಂಡರು.ಸುಮ್ ಕುಂದ್ರೀ ಗೌಡ್ರ..

ಸಭೆಯಲ್ಲಿ ಕೃಷಿ ಅಧಿಕಾರಿಗಳು ತಪ್ಪುಮಾಹಿತಿ ನೀಡಿದಾಗ ತೀವ್ರ ಆಕ್ರೋಶಗೊಂಡಿದ್ದ ಬಸವರಾಜ ರಾಯರಡ್ಡಿ ಅಧಿಕಾರಿಗೆ ಬೆಳೆ ಹಾನಿಯ ಲೆಕ್ಕವನ್ನು ಹೆಕ್ಟೇರ್ ಮತ್ತು ಎಕರೆಯಲ್ಲಿ ಕೇಳಿದರು. ಆಗ ಮಧ್ಯಪ್ರವೇಶಿಸಿದ ಎಚ್.ಕೆ. ಪಾಟೀಲರು ಎಕರೆಗಳಲ್ಲಿ ಲೆಕ್ಕ ಮಾಡಿ ಹೇಳಲು ಮುಂದಾದರು. ಇದಕ್ಕೆ ಪತ್ರಿಕೆ ನೀಡಿದ ರಾಯರಡ್ಡಿ ಸುಮ್ನೆ ಕುಂದ್ರಿ ಗೌಡ್ರ..., ಅವರು ಉತ್ತರ ಕೊಡ್ಲಿ... ಎಲ್ಲ ನೀವೇ ಹೇಳಿದ್ರೆ ಮತ್ತೆ ಅಧಿಕಾರಿಗಳು ಕೆಲ್ಸ ಮಾಡುವುದು ಯಾವಾಗ? ಎಂದು ಸಭೆಯಲ್ಲಿ ನಗುತ್ತಲೇ ಕಠಿಣ ವಿಷಯನ್ನು ಸೌಮ್ಯವಾಗಿ ಹೇಳಿದ್ದು ವಿಶೇಷವಾಗಿತ್ತು. ಇದು ನನ್ನ ಮೊದಲ ಸಭೆಯಾದ್ದರಿಂದ ಸೌಮ್ಯವಾಗಿ ಎಚ್ಚರಿಕೆ ನೀಡುತ್ತಿದ್ದೇನೆ. ತಪ್ಪು ಮರುಕಳಿಸಿದರೆ ಶಿಕ್ಷೆ ಖಂಡಿತ. ಹೇಗೋ ಮಾಹಿತಿ ನೀಡಿದರೆ ನಡೆಯುತ್ತದೆ ಎಂದು ತಿಳಿದುಕೊಂಡಿದ್ದರೆ ಅದನ್ನು ಮರೆತು ಬಿಡಿ ಎಂದು ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುತ್ತಿಗೆ ಉದ್ಯೋಗಕ್ಕಾಗಿ ಹರಿದು ಬಂದ ಉದ್ಯೋಗಾಕಾಂಕ್ಷಿಗಳು
ಮೊಬೈಲ್ ದುರ್ಬಳಕೆಯಿಂದ ಹಾಳಾಗಬೇಡಿ