ಆರ್‌ಸಿಬಿ, ಕೆಎಸ್‌ಸಿಎ ಪದಾಧಿಕಾರಿಗಳ ವಿಚಾರಣೆ

KannadaprabhaNewsNetwork |  
Published : Jun 14, 2025, 03:30 AM ISTUpdated : Jun 14, 2025, 07:01 AM IST
KSCA

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ನಗರ ಜಿಲ್ಲಾಧಿಕಾರಿ ಜಿ.ಜಗದೀಶ್‌ ಅವರು ಶುಕ್ರವಾರ ಆರ್‌ಸಿಬಿ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಪದಾಧಿಕಾರಿಗಳಿಂದ ಹೇಳಿಕೆ ಪಡೆದರು.

 ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ನಗರ ಜಿಲ್ಲಾಧಿಕಾರಿ ಜಿ.ಜಗದೀಶ್‌ ಅವರು ಶುಕ್ರವಾರ ಆರ್‌ಸಿಬಿ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಪದಾಧಿಕಾರಿಗಳಿಂದ ಹೇಳಿಕೆ ಪಡೆದರು.

ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆಗಿರುವ ಜಗದೀಶ್‌ ಅವರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5.30ರವರೆಗೂ ವಿಚಾರಣೆ ನಡೆಸಿದ್ದು, ಆರ್‌ಸಿಬಿ ತಂಡದ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ರಾಜೇಶ್ ಮೆನನ್, ಕೆಎಸ್‌ಸಿಎ ಅಧ್ಯಕ್ಷ ರಘುರಾಮ್‌ ಭಟ್‌ ಅವರು ವಿಚಾರಣೆಗೆ ಹಾಜರಾಗಿ ಅಂದು ನಡೆದ ಘಟಾನಾವಳಿಗಳ ಬಗ್ಗೆ ವಿವರ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿ ನಿರ್ಗಮಿತ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಅವರಿಗೆ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ವಿಚಾರಣೆ ಆರಂಭವಾದಾಗ ದಯಾನಂದ್‌ ಪರ ವಕೀಲರು ವಿಷಯ ಪ್ರಸ್ತಾಪ ಮಾಡಿ, ‘ನಮ್ಮ ಕಕ್ಷಿದಾರರು ಸಿಐಡಿ ತನಿಖೆಗೆ ತೆರಳಿರುವುದರಿಂದ ಇಲ್ಲಿಗೆ ಹಾಜರಾಗಲು ಸ್ವಲ್ಪ ವಿಳಂಬವಾಗುತ್ತದೆ. ಆದ್ದರಿಂದ ಕಾಲಾವಕಾಶ ನೀಡಬೇಕು’ ಎಂದು ಕೋರಿದರು.

ಕಾಲಾವಕಾಶಕ್ಕೆ ಮನವಿ:

ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ಸಂಜೆ 5 ಗಂಟೆಯವರೆಗೂ ಕಾಲಾವಕಾಶ ನೀಡಿ ಉಳಿದ ಸಾಕ್ಷಿಗಳ ವಿಚಾರಣೆ ಮುಂದುವರೆಸಿದರು.

ಆರ್‌ಸಿಬಿ ಮಾರ್ಕೆಟಿಂಗ್‌ ವಿಭಾಗವಾದ ಡಿಎನ್‌ಎ ಸಂಸ್ಥೆಯ ಕೆಲ ಹಿರಿಯ ಅಧಿಕಾರಿಗಳು ವಿಚಾರಣೆಗೆ ಆಗಮಿಸದೇ ಇದ್ದುದರಿಂದ ಅಲ್ಲಿನ ಕೆಲ ಸಿಬ್ಬಂದಿ ಆಗಮಿಸಿ ವಿಚಾರಣೆಗೆ ಹಾಜರಾಗಲು ಐದು ದಿನ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಮತ್ತೊಂದೆಡೆ, ಸಿಐಡಿ ವಿಚಾರಣೆ ಮುಗಿಯದ ಕಾರಣ ದಯಾನಂದ್‌ ಅವರು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಅವರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಇದೆಲ್ಲವನ್ನೂ ಪರಿಗಣಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜೂ.18 ಮತ್ತು 19ಕ್ಕೆ ನಿಗದಿಪಡಿಸಿತು.

ಆರ್‌ಸಿಬಿ ತಂಡದ ಸಂಭ್ರಮಾಚರಣೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಮೃತಪಟ್ಟು, ಹಲವರು ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿ ವರದಿ ನೀಡುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ನಗರ ಜಿಲ್ಲಾಧಿಕಾರಿ ಹಾಗೂ ದಂಡಾಧಿಕಾರಿ ಜಗದೀಶ್‌ ಅವರು ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪರಿಶೀಲನೆ ನಡೆಸಿದ್ದು ಬಳಿಕ ಸಂಬಂಧಪಟ್ಟವರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರು.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ