ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿ: ಮಂಜುನಾಥ ಗುಂಡೂರು

KannadaprabhaNewsNetwork |  
Published : Nov 08, 2025, 02:00 AM IST
ಮಜುನಾತ | Kannada Prabha

ಸಾರಾಂಶ

ಬಡತನ ಮೆಟ್ಟಿ ನಿಂತು 10 ಸರ್ಕಾರಿ ನೌಕರಿ ಪಡೆದ ಕೆಎಎಸ್‌ ಅಧಿಕಾರಿ ಮಂಜುನಾಥ ಗುಂಡೂರು ಅವರು ಕನ್ನಡಪ್ರಭ ಯುವ ಆವೃತ್ತಿಯೊಂದಿಗೆ ಮುಖಾಮುಖಿಯಾಗಿದ್ದಾರೆ. ಅವರ ಕೆಎಎಸ್ ಪಯಣ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಂದರ್ಶನ

ಮಂಜುನಾಥ ಗುಂಡೂರು KAS

ಜಿಲ್ಲಾ ನಗರಾಭಿವೃದ್ಧಿ ಕೋಶದ

ಯೋಜನಾ ನಿರ್ದೇಶಕ ಕೊಪ್ಪಳಸಂದರ್ಶಕ

ವೀರೇಶ ಉಳ್ಳಾಗಡ್ಡಿ, ಮಾಲಗಿತ್ತಿ

ಕನ್ನಡಪ್ರಭ ಯುವ ಆವೃತ್ತಿ

ನೀನು ಬಡವನಾಗಿ ಹುಟ್ಟಿದರೆ

ಅದು ನಿನ್ನ ತಪ್ಪಲ್ಲ, ಆದರೆ

ನೀನು ಬಡವನಾಗಿ ಸತ್ತರೆ

ಅದು ಖಂಡಿತ ನಿನ್ನದೇ ತಪ್ಪು

­ಬಡವನಾಗಿ ಹುಟ್ಟುವುದು ಸಹಜ ಅದರಲ್ಲಿ ಯಾರ ತಪ್ಪು ಇಲ್ಲ, ಆದರೆ ಬಡವ ಎಂಬ ಕಾರಣವನ್ನು ಇಟ್ಟುಕೊಂಡು ಸುಮ್ಮನೆ ಕುಳಿತುಕೊಳ್ಳಬಾರದು. ಕಷ್ಟ ಪಟ್ಟು ಓದಿ ಉನ್ನತ ಹುದ್ದೆ ಪಡೆಯಬೇಕು ಎಂಬುದು ಈ ಗಾದೆ ಮಾತಿನ ಅರ್ಥ. ಈ ಗಾದೆ ಮಾತು ಹೇಳಲು ಕಾರಣವೇನೆಂದರೆ, ಈಗ ನಾನು ನಿಮಗೆ ತಿಳಿಸಲು ಹೊರಟಿರುವ ಅಧಿಕಾರಿ ಯಶೋಗಾಥೆ ಈ ಗಾದೆ ಮಾತಿಗೆ ಹೋಲಿಕೆಯಾಗುತ್ತದೆ. ಅವರು ಕೂಡ ಬಡ ಕೃಷಿ ಕುಟುಂಬದಲ್ಲಿ ಹುಟ್ಟಿ ಕಠಿಣ ಅಭ್ಯಾಸ ಮಾಡಿ 10 ಸರ್ಕಾರಿ ಹುದ್ದೆ ಪಡೆದು ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಅವರೇ ಮಂಜುನಾಥ ಮಲ್ಲಪ್ಪ ಗುಂಡೂರು. ಇವರು 2015ನೇ ಸಾಲಿನ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಗ್ರೂಪ್- ಬಿ ಮುಖ್ಯಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಇವರು ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಹೊರತಟ್ನಾಳ ಗ್ರಾಮದವರು. ತಂದೆ ಮಲ್ಲಪ್ಪ, ತಾಯಿ ಸರೋಜಮ್ಮ. ಇವರು ಆರು ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಂಡರು. ಬಳಿಕ ಓದಿನೊಂದಿಗೆ ಮನೆ ನಿರ್ವಹಣೆ ಮಾಡತೊಡಗಿದರು. ಮನೆಯಲ್ಲಿ ಕಡು ಬಡತನ ಶಿಕ್ಷಣಕ್ಕೆ ಕುತ್ತು ತರುವ ಸ್ಥಿತಿ ಉಂಟಾಗಿತ್ತು. ಆಗ ಇವರ ಶಿಕ್ಷಣಕ್ಕೆ ತಾಯಿಯ ಕೂಲಿಯೇ ಆಸರೆಯಾಯಿತು. ಬಳಿಕ ಮಂಜುನಾಥ ಕೂಡ ತಾಯಿ ಜೊತೆ ಕೂಲಿ ಮಾಡಿ ಕಠಿಣ ಅಭ್ಯಾಸ ಮಾಡಿ 10 ಸರ್ಕಾರಿ ನೌಕರಿ ಪಡೆದಿದ್ದಾರೆ. ಇವರು ಹಲವು ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕನ್ನಡಪ್ರಭ ಯುವ ಆವೃತ್ತಿಯೊಂದಿಗೆ ಮುಖಾಮುಖಿಯಾಗಿದ್ದಾರೆ. ಅವರ ಕೆಎಎಸ್ ಪಯಣ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.1. ನೀವು ಪ್ರಾಥಮಿಕ, ಪ್ರೌಢ ಹಾಗೂ ಪದವಿ, ಸ್ನಾತಕೋತ್ತರ ಶಿಕ್ಷಣವನ್ನು ಎಲ್ಲೇಲಿ ಪೂರೈಸಿದ್ದೀರಿ?

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊರತಟ್ನಾಳ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಕೊಪ್ಪಳದ ಬಾಲಕರ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಪಿಯುಸಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯ, ಡಿಇಡಿ ಶಿಕ್ಷಣವನ್ನು ಕೊಪ್ಪಳದ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪೂರ್ಣಗೊಳಿಸಿದ್ದೇನೆ. ಆಗ ಅತಿಥಿ ಶಿಕ್ಷಕನಾಗಿ ಕೇವಲ ₹1200ಗೆ ಕೆಲಸ ಮಾಡಿ ಅದೇ ಹಣದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮಾನಸ ಗಂಗೋತ್ರಿಯಲ್ಲಿ (ಮೈಸೂರು) ದೂರ ಶಿಕ್ಷಣದ ಮೂಲಕ ಮನೆಯಲ್ಲಿಯೇ ಕುಳಿತು ಅಭ್ಯಾಸ ಮಾಡಿ ಬಿ.ಎ ಪದವಿ, ಬಳಿಕ ಸ್ನಾತಕೋತ್ತರ ಪದವಿ ತೇರ್ಗಡೆಯಾಗಿದ್ದೇನೆ.

2. ನೀವು ಕೆಎಎಸ್ ಅಧಿಕಾರಿಯಾಗಲು ಏನು ಪ್ರೇರಣೆ ನೀಡಿತು?

ನನ್ನ ಮೇಲೆ ಸ್ಪರ್ಧಾಸ್ಪೂರ್ತಿ ಮ್ಯಾಗಜೀನ್‌ ಬಹಳ ಪರಿಣಾಮ ಬೀರಿದೆ. 2009-10ರ ಬ್ಯಾಚ್‌ನಲ್ಲಿ "ಬಳಿಗಾರನ ಮಗ ಕೆಎಎಸ್‌ ಅಧಿಕಾರಿಯಾದ ಅಮೀನ್ ಅತ್ತಾರ " (ಸದ್ಯ ಕೊಪ್ಪಳ ಜಿಲ್ಲಾ ಪಂಚಾಯಿತಿಯಲ್ಲಿ ಮುಖ್ಯ ಲೆಕ್ಕ ಖಾತೆ ಅಧಿಕಾರಿ) ಬಗ್ಗೆ ಸ್ಪರ್ಧಾಸ್ಪೂರ್ತಿ ಮ್ಯಾಗಜೀನ್‌ನಲ್ಲಿ ಸಂದರ್ಶನ ಬಂದಿತ್ತು. ಆಗ ನಾನು 10ನೇ ತರಗತಿಯಲ್ಲಿದ್ದೆ. ಅದು ನನ್ನ ಮೇಲೆ ಬಹಳ ಪರಿಣಾಮ ಬೀರಿತು. ಅದನ್ನು ಓದಿದ ಮೇಲೆ ನಾನು ಕೂಡ ಅಮೀನ್ ಅತ್ತಾರ ರೀತಿ ಕೆಎಎಸ್‌ ಅಧಿಕಾರಿಯಾಗಬೇಕೆಂದು ನಿರ್ಧರಿಸಿದೆ. 3. ನೀವು ಆಯ್ಕೆಯಾಗಿದ್ದ 10 ಸರ್ಕಾರಿ ಹುದ್ದೆಗಳು ಯಾವುವು? ಅದರ ಬಗ್ಗೆ ತಿಳಿಸಿ.

ಕಡು ಬಡತನದ ಕುಟುಂಬದಲ್ಲಿ ಜನಿಸಿದ ನಾನು ಆ ಬಡತನವನ್ನು ಹೆಗಲಿಗೆ ಹಾಕಿಕೊಂಡು ಸರ್ಕಾರಿ ನೌಕರಿ ಪಡೆಯಲು ಕಠಿಣ ಅಭ್ಯಾಸ ಮಾಡತೊಡಗಿದೆ. ತೀವ್ರ ಪೈಪೋಟಿಯುಗದಲ್ಲಿ ಕೂಲಿ ಮಾಡುತ್ತಲೇ ಹಗಲು ರಾತ್ರಿ ಕಷ್ಟಪಟ್ಟು ಓದಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ, ಪರೀಕ್ಷೆ ಬರೆದೆ. 10 ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದೆ. 2014ರಲ್ಲಿ ಎಸ್‌ಡಿಎಎ, 2015ರಲ್ಲಿ ಎಸ್‌ಡಿಎ, 2016ರಲ್ಲಿ ಎಸ್‌ಡಿಎ, ಎಫ್‌ಡಿಎ, 2017 ರಲ್ಲಿ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ, 2018ರಲ್ಲಿ ಕಾರ್ಯದರ್ಶಿ ಗ್ರೇಡ್-1 ಹಾಗೂ ಪಿಡಿಒ, ಕೆ-ಸೆಟ್‌, 2019 ಕೆಎಎಸ್‌ (ಕೆಎಂಎಎಸ್) ಹುದ್ದೆಗೆ ಆಯ್ಕೆಯಾದೆ. 4. ಕೆಎಎಸ್‌ ಪರೀಕ್ಷೆಗೆ ನೀವು ಯಾವ ರೀತಿ ತಯಾರಿ ಮಾಡಿಕೊಂಡಿದ್ದೀರಿ? ಆಗ ನನ್ನದು "ಎಂಜಿ ಕನಸು " ಅಂತ ಟ್ವೀಟರ್‌ ಚಾನೆಲ್‌ ಇತ್ತು. ಅದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಎಲ್ಲರಿಗೂ ಮೇಸೆಜ್‌ ಮೂಲಕ ಕಳುಹಿಸಿ ವಿನಿಮಯ ಮಾಡಿಕೊಳ್ಳುತ್ತಿದ್ದೆ. ನಾನು ಓದಿದ ಎಲ್ಲಾ ವಿಷಯವನ್ನು ಅದರಲ್ಲಿ ಹಾಕುತ್ತಿದ್ದೆ. ಅದು ನನಗೆ ತುಂಬಾ ಕಾನ್ಪೀಡೆನ್ಸ್‌ ಕೊಟ್ಟಿತ್ತು. ನಾನು ಓದುವ ಜೊತೆಗೆ "ಎಂಜಿ ಕನಸು " ಅಂತ ಓದುಗ ಬಳಗವನ್ನು ಕಟ್ಟಿಕೊಂಡೆ. ಕೆಎಎಸ್‌ ಅಧಿಕಾರಿಯಾದ ಶಂಕರ್‌ ಬೆಳ್ಳುಬ್ಬಿ ಅವರು "ಎಸ್‌. ಆರ್‌. ವರ್ಲ್ಡ್ " ಅಂತ ಟ್ವೀಟರ್‌ ಚಾನೆಲ್‌ ಮಾಡಿದ್ದರು. ಅದು ಕೂಡ ನಮಗೆ ಅನುಕೂಲವಾಯಿತು. ಸ್ನೇಹಿತ ಕನಕ ಗೊಂಡಬಾಳ, ಕೊಪ್ಪಳದಲ್ಲಿ ಮಾರ್ಗದರ್ಶಿ ಸ್ಟಡಿ ಸರ್ಕಲ್‌ ಕೋಚಿಂಗ್‌ ಸೆಂಟರ್‌ ನಡೆಸುತ್ತಿರುವ ಶರಣಯ್ಯ ಅಬ್ಬಿಗೇರಮಠ ಅವರ ಮಾರ್ಗದರ್ಶನ ಕೂಡ ನನಗೆ ಸಹಾಯವಾಯಿತು. 5. ಕೆಎಎಸ್ ಪರೀಕ್ಷೆಗೆ ಸ್ವತಃ ತಯಾರಿ ಮಾಡಿಕೊಂಡರೆ ಪಾಸ್ ಆಗಬಹುದಾ ಅಥವಾ ಕೋಚಿಂಗ್ ಪಡೆಯುವ ಅಗತ್ಯ ಇದೆನಾ?

ಅವರವರ ಸ್ವಯಂ ನೈಪುಣ್ಯತೆ ಮೇಲೆ ಕೋಚಿಂಗ್‌ಗೆ ನಿರ್ಧಾರ ಮಾಡಬೇಕಾಗುತ್ತದೆ. ಕೆಲವೊಬ್ಬರು ಕೋಚಿಂಗ್‌ ತೆಗೆದುಕೊಂಡರೆ ಪಾಸ್‌ ಆಗುತ್ತೇವೆ ಎಂದುಕೊಂಡಿರುತ್ತಾರೆ. ಆ ರೀತಿ ಏನೂ ಇಲ್ಲ. ದಿನಕ್ಕೆ ಕನಿಷ್ಠ 8ರಿಂದ 9 ಗಂಟೆ ಓದಬೇಕು. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತಹ ಸಿಲೆಬಸ್‌ ನೋಡಿಕೊಳ್ಳಬೇಕು. ಅದರ ಪ್ರಕಾರ ಓದಿದರೆ ಯಾವುದೇ ಕೋಚಿಂಗ್‌ ಬೇಕಾಗುವುದಿಲ್ಲ. ಗ್ರೂಪ್‌ ಸ್ಟಡಿ ಮಾಡಿದರೆ ಬಹಳ ಅನುಕೂಲವಾಗುತ್ತದೆ. ಅಲ್ಲದೆ ಗ್ರೂಪ್‌ ಸ್ಟಡಿ ಮಾಡುವಾಗ ಸಮರ್ಪಣಾ ಮನೋಭಾವ ಇರಬೇಕು. ನಾನು ಓದುವಾಗ ಮೊಬೈಲ್‌ ಬಳಸುತ್ತಿರಲಿಲ್ಲ. ಆಗ ಎಷ್ಟೋ ಸಾರಿ ನಾನು ಸೂರ್ಯನನ್ನೇ ನೋಡಿಲ್ಲ. ಬೆಳಿಗ್ಗೆ 6 ಗಂಟೆಗೆ ಒಂದು ಸೆಲೆಬಸ್‌ ಹಿಡಿದುಕೊಂಡು ಓದಲು ಕುಳಿತರೆ ಅದು ಪೂರ್ಣಗೊಳ್ಳುವರೆಗೂ ಬಿಡುತ್ತಿರಲಿಲ್ಲ. ಹಲವು ಪ್ರಸಿದ್ಧ ಲೇಖಕರು ಬರೆದ ಸ್ಪರ್ಧಾತ್ಮಕ ಪುಸ್ತಕಗಳನ್ನು ಓದುತ್ತಿದ್ದೆ. ಹಳೆ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುತ್ತಿದ್ದೆ. ಆಗ ಸ್ಪರ್ಧಾಸ್ಫೂರ್ತಿ, ಸ್ಪರ್ಧಾ ವಿಜೇತ ಮ್ಯಾಗಜೀನ್‌ಗಳು ನನಗೆ ಬಹಳ ಅನುಕೂಲ ಆಗುತ್ತಿದ್ದವು. ಅಲ್ಲದೆ ದಿನಪತ್ರಿಕೆಗಳನ್ನು ಕೂಡ ಓದುತ್ತಿದ್ದೆ. 6. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ವೈಫಲ್ಯವನ್ನು ಹೇಗೆ ಎದುರಿಸಬೇಕು?

ಸ್ಪರ್ಧಾತ್ಮಕ ಪರೀಕ್ಷೆ ಎಂದಾಕ್ಷಣ ವಿದ್ಯಾರ್ಥಿಗಳು, ಅಭ್ಯರ್ಥಿಗಳು ಹೆದುರುತ್ತಾರೆ. ಪ್ರಸ್ತುತ ದಿನಗಳಲ್ಲಿ ಓದುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಅತೀ ಹೆಚ್ಚು ಬಳಸುತ್ತಿದ್ದಾರೆ. ಇದರಿಂದ ದೂರ ಇರಬೇಕು. ಮನೆಯ ಪರಿಸ್ಥಿತಿ ಹಾಗೂ ತಂದೆ-ತಾಯಿ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು. ಓದಿನೆಡೆಗೆ ಹೆಚ್ಚು ಒತ್ತು ಕೊಡಬೇಕು. ಸಿಲೆಬಸ್‌ ಬಿಟ್ಟು ಬೇರೆ ಏನೂ ಓದಬಾರದು. ಬೇರೆ ಏನೂ ಓದಿದರೂ ಅದು ಸಫಲತೆ ಕೊಡುವುದಿಲ್ಲ. ವಿಫಲತೆ ಕೊಡುತ್ತದೆ. ಕೆಎಎಸ್‌ಗೆ ಪ್ರಯತ್ನ ಮಾಡುತ್ತಿದ್ದೀರಿ ಎಂದರೆ ಕೆಎಎಸ್‌ಗೆ ಸಂಬಂಧಿಸಿದ ಎಲ್ಲಾ ಸಿಲೆಬಸ್‌ ತೆಗೆದುಕೊಳ್ಳಬೇಕು. ಹಳೆ ಪ್ರಶ್ನೆ ಪತ್ರಿಕೆಗಳನ್ನು ಓದಿಕೊಳ್ಳಬೇಕು. ಸಿಲೆಬಸ್‌ನಲ್ಲಿರುವ ಎಲ್ಲಾ ಅಂಶಗಳು ಮನದಟ್ಟಾದ ಮೇಲೇಯೇ ಮುಂದೆ ಹೋಗಬೇಕು. ಇತ್ತೀಚಿನ ದಿನಗಳಲ್ಲಿ ಯುವಕರು ಬಣ್ಣದ ಪುಸ್ತಕಗಳಿಗೆ ಮಾರು ಹೋಗುತ್ತಿದ್ದಾರೆ ಅದು ತಪ್ಪು. ಯಾವುದೋ ಎರಡು ಮ್ಯಾಗಜೀನ್ ಓದಿದಾಕ್ಷಣ ಕೆಎಎಸ್‌, ಪಿಎಸ್‌ಐ, ಪೇದೆ ಆಗುತ್ತೇನೆ ಅನ್ನುವುದು ಉತ್ಪ್ರೇಕ್ಷೆತನ, ಅದು ಆಗುವುದಿಲ್ಲ. ಓದು ಅನ್ನುವುದು ನಿರಂತವಾಗಿದ್ದಾಗ ಮಾತ್ರ ಎಲ್ಲಾ ಪುಸ್ತಕಗಳ ಸಹಕಾರಿಯಾಗುತ್ತವೆ, 7. ಕೆಎಎಸ್ ತಯಾರಿಗೆ ಯೂಟ್ಯೂಬ್, ಪರೀಕ್ಷಾ ಸರಣಿಗಳು, ವೇದಿಕೆಗಳಂತಹ ಆನ್‌ಲೈನ್ ಸಂಪನ್ಮೂಲಗಳು ಸಹಾಯಕವಾಗುತ್ತವೆಯೇ?

ಯೂಟ್ಯೂಬ್, ಟೆಲಿಗ್ರಾಂಗಳನ್ನು ಅಗತ್ಯತೆಗಳಿಗೆ ತಕ್ಕಂತೆ ಮಾತ್ರ ಬಳಕೆ ಮಾಡಬೇಕು. ನಾವು ಓದುವ ಸಮಯದಲ್ಲಿ ಸಂಪನ್ಮೂಲ ವ್ಯಕ್ತಿಗಳು ಸಿಗುವುದೇ ತೀರಾ ಕಷ್ಟವಾಗಿತ್ತು. ನಾವು ಓದುವಾಗ ಹೊಸ ಪಠ್ಯಕ್ರಮ ಬಂದಿತ್ತು. ಆಗ ಆಯಾ ಪಠ್ಯಕ್ರಮದಲ್ಲಿ ಪರಿಣಿತಿ ಹೊಂದಿದ ಉಪನ್ಯಾಸಕರು ಸಿಗುತ್ತಿರಲಿಲ್ಲ. ಈಗ ಆ ರೀತಿ ಅಲ್ಲ. ನಮ್ಮ ಬೆರಳು ತುದಿಯಲ್ಲಿ ಎಲ್ಲರೂ ಸಿಗುತ್ತಾರೆ. ಉದಾಹರಣೆಗೆ ಮನೋವಿಜ್ಞಾನದ ಬಗ್ಗೆ ಗೂಗಲ್‌ನಲ್ಲಿ ಹುಡುಕಿದರೆ ಅದು ಭಾಷಾಂತರ ಮಾಡಿ ಕೊಡುತ್ತೆ. ಅದು ಸ್ವಲ್ಪ ಮಟ್ಟಿಗೆ ಸಹಕಾರಿಯಾಗುತ್ತೆ. ಆದರೆ ಅದಕ್ಕೆ ಅವಲಂಬಿತರಾಗಬಾರದು. ಸ್ಕ್ರೀನ್‌ ಟೈಮ್‌ನ್ನು (ಮೊಬೈಲ್‌ನಲ್ಲಿ ಓದುವುದು) ತೀರಾ ಕಡಿಮೆ ಮಾಡಬೇಕು. ಪುಸ್ತಕ ಓದುವುದನ್ನು ರೂಢಿಸಿಕೊಳ್ಳಬೇಕು.

8. ಕೆಎಎಸ್ ಪರೀಕ್ಷೆಗಳಲ್ಲಿ ಸಾಮಾನ್ಯವಾಸಗಿ ಯಾವ ವಿಷಯಗಳನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಗಳು ಈ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು?

ಕೆಎಎಸ್‌ನಲ್ಲಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ಸಂದರ್ಶನ ಸೇರಿದಂತೆ ಮೂರು ಹಂತಗಳಿರುತ್ತವೆ. ನಾನು ಕೆಎಎಸ್ ಪರೀಕ್ಷೆಗೆ ಬರೆಯುವಾಗ ಐಚ್ಛಿಕ ವಿಷಯ ಇತ್ತು. ಆದರೆ ಈಗ ಇಲ್ಲ. ಪೂರ್ವಭಾವಿ ಪರೀಕ್ಷೆಯಲ್ಲಿ ಪೇಪರ್‌-1 ಮತ್ತು ಪೇಪರ್‌-2 ಅಂತ ಎರಡು ಪತ್ರಿಕೆಗಳಿರುತ್ತವೆ. ಈ ಎರಡೂ ಪತ್ರಿಕೆಗಳು ತಲಾ 200 ಅಂಕಗಳಿದ್ದು, ವಿವಿಧ ಪಠ್ಯಕ್ರಮ ಅನುಸರಿಸಬೇಕು. ಪೇಪರ್‌-1 ಸಾಮಾನ್ಯ ಜ್ಞಾನ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಷಯಗಳನ್ನು ಒಳಗೊಂಡಿರುತ್ತದೆ. ಪೇಪರ್‌-2 ರಾಜ್ಯದ ವಿಷಯಗಳನ್ನು ಒಳಗೊಂಡು ಜಿಲ್ಲಾ ಮಟ್ಟ, ಮನೋವಿಜ್ಞಾನ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿರುತ್ತವೆ. ಇವುಗಳನ್ನು ನಾವು ಕ್ರೊಡೀಕರಣ ಮಾಡಿಕೊಂಡು ಓದಿಕೊಳ್ಳಬೇಕು. ಇನ್ನೂ ಮುಖ್ಯ ಪರೀಕ್ಷೆಯಲ್ಲಿ 4 ಪತ್ರಿಕೆಗಳಿವೆ. ಇವುಗಳಲ್ಲಿ ಉತ್ತೀರ್ಣರಾದರೆ ಸಂದರ್ಶನ ಹಂತ ಇದೆ ಅದರಲ್ಲಿಯೂ ಪಾಸ್‌ ಆದರೆ ನೀವು ಕೆಎಎಸ್‌ ಅಧಿಕಾರಿ ಆಗುತ್ತೀರಿ. 9. ಸಂದರ್ಶನಕ್ಕೆ ಯಾವ ರೀತಿ ತಯಾರಿ ಆಗಬೇಕು?

ಸಂದರ್ಶನ ವ್ಯಕ್ತಿಯ ಭಿನ್ನತೆಯ ಮೇಲೆ ಅಡಗಿದೆ. ವ್ಯಕ್ತಿ ಯಾವ ಹಿನ್ನೆಲೆಯಿಂದ ಬಂದಿದ್ದಾರೆ. ಆ ವ್ಯಕ್ತಿಯ ಸ್ಥಳದ ಸ್ವರೂಪವೇನು. ಆ ವ್ಯಕ್ತಿಯಲ್ಲಿರುವ ನೈಪುಣ್ಯತೆ ಏನು. ಏಕೆ ನಾಗರೀಕ ಸೇವೆಗೆ ಬರಲು ಪ್ರಯತ್ನ ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ. ಪ್ರಚಲಿತ ಘಟನೆ ಬಗ್ಗೆ ಕೇಳುತ್ತಾರೆ. ಸಂದರ್ಶನ ಅಂದಾಕ್ಷಣ ಎಂದೆಗುಂದದೆ ಉತ್ತರ ಕೊಡದೇ ಕುಳಿತುಕೊಳ್ಳಬಾರದು. ನಮ್ಮ ಸುತ್ತಮುತ್ತಲಿನವರ ಜೊತೆ ಹೇಗೆ ಮಾತನಾಡುತ್ತೇವೆಯೋ ಹಾಗಯೇ ಸಂದರ್ಶಕರ ಜೊತೆ ಮಾತನಾಡಿ ಉತ್ತರ ಕೊಡಬೇಕು. ವಾಕ್‌ ಚಾತುರ್ಯ ಇದ್ದರೆ ಹೆಚ್ಚು ಅಂಕ ಗಳಿಸಲು ಸಾಧ್ಯಗುತ್ತದೆ.10. ಕೆಲವರು ಕೆಲಸ ಮಾಡುತ್ತಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ಮಾಡುತ್ತಿದ್ದರೆ ಅವರು ಕೆಲಸಕ್ಕೂ, ಓದಿಗೂ ಹೇಗೆ ಸಮಯವನ್ನು ಕೊಡಬೇಕು?

ನಾನು ಇಲ್ಲಿಯವರೆಗೂ 10 ಸರ್ಕಾರಿ ನೌಕರಿ ಪಡೆದಿದ್ದೇನೆ. ಇವೆಲ್ಲವನ್ನೂ ನಾನು ಕೆಲಸ ಮಾಡುತ್ತಾ ಕಠಿಣ ಅಭ್ಯಾಸ ಮಾಡಿ ತೆಗೆದುಕೊಂಡಿದ್ದೇನೆ. ಕೆಲಸಕ್ಕಾಗಿ ಕನಿಷ್ಠ 8 ರಿಂದ 10 ಗಂಟೆ ಮೀಸಲಿಡುತ್ತೇವೆ. ಉಳಿದ 14 ಗಂಟೆಯಲ್ಲಿ 6 ಗಂಟೆ ಹೊರತುಪಡಿಸಿ ಬೆಳಿಗ್ಗೆ 3 ಗಂಟೆ ಸಂಜೆ 2 ಗಂಟೆ, ರಾತ್ರಿ 3 ಗಂಟೆ ಓದಿಕೊಳ್ಳಬೇಕು. ನೀವು ಬೆಳಿಗ್ಗೆ 10 ಗಂಟೆಗೆ ಆಫೀಸ್‌ಗೆ ಹೋಗುತ್ತೀರಿ ಎಂದಾದರೆ ಬೆಳಿಗ್ಗೆ 6ರಿಂದ 9 ಗಂಟೆವರೆಗೆ ಓದಬೇಕು. ನಂತರ ಸಂಜೆ 6ರಿಂದ 11ಗಂಟೆವರೆಗೆ ಓದಬೇಕು, ಅಂದಾಗ ಮಾತ್ರ ಪರೀಕ್ಷೆಗಳಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ.

PREV

Recommended Stories

83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!