ಕುವೆಂಪು ಸಾಹಿತ್ಯವನ್ನು ಓದಿಸುವ ಮಹತ್ಕಾರ್ಯ ಆಗಬೇಕು: ಸಾಹಿತಿ ಟಿ.ಸತೀಶ್ ಜವರೇಗೌಡ

KannadaprabhaNewsNetwork |  
Published : Dec 12, 2025, 01:45 AM IST
11ಕೆಎಂಎನ್ ಡಿ18 | Kannada Prabha

ಸಾರಾಂಶ

ಕನ್ನಡ ಸಾಹಿತ್ಯದ ಮಹಾ ಸಾಗರದ ಪ್ರತಿರೂಪದಂತಿರುವ ಕುವೆಂಪು, ತಮ್ಮ ಸಾಹಿತ್ಯದ ಮೂಲಕ ಭಾರತದ ಬಹುತ್ವದ ದನಿಗೆ ವೈಚಾರಿಕತೆ, ಸೌಹಾರ್ದತೆ, ವಿಶ್ವಮಾನವತೆಯ ಬನಿಯನ್ನು ತುಂಬಿದ್ದರಿಂದ ಈ ನೆಲದಲ್ಲಿ ಇನ್ನೂ ಜೀವಪರತೆಯ ಒಲವು-ನಿಲುವು ಉಸಿರಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕುವೆಂಪು ಸಾಹಿತ್ಯದಲ್ಲಿ ವರ್ತಮಾನದ ಹಲವು ತಲ್ಲಣಗಳಿಗೆ ಸಿದ್ಧೌಷಧವಿದೆ. ಹೊಸ ತಲೆಮಾರಿನ ವಿದ್ಯಾರ್ಥಿ ಯುವಜನರಿಗೆ ರಾಷ್ಟ್ರಕವಿಗಳ ಸಾಹಿತ್ಯವನ್ನು ಓದಿಸುವ ಮಹತ್ಕಾರ್ಯ ಆಗಬೇಕಿದೆ ಎಂದು ಸಾಹಿತಿ ಟಿ. ಸತೀಶ್ ಜವರೇಗೌಡ ಹೇಳಿದರು.

ರಿಚಯ ಪ್ರಕಾಶನದಿಂದ ಇಲ್ಲಿನ ಸುಭಾಷ್ ನಗರದ ಶಿವನಂಜಪ್ಪ ಉದ್ಯಾನವನದಲ್ಲಿ ಓದಿನ ಹಾದಿಯ 6ನೇ ಸಂಚಿಕೆ ಮಾಲೆಯಡಿ ನಡೆದ ನೆನಪಿನ ದೋಣಿಯಲ್ಲಿ ಕುವೆಂಪು ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯದ ಬಹುಮುಖಿ ಪ್ರಕಾರದಲ್ಲಿ ಕೃಷಿ ಮಾಡಿರುವ ಕುವೆಂಪು ದರ್ಶನವೆಂದರೆ ಪ್ರಕೃತಿ, ಆಧ್ಯಾತ್ಮ, ಜೀವನಾನುಭವ, ವೈಚಾರಿಕತೆಯ ದರ್ಶನವೇ ಆಗಿದೆ ಎಂದರು.

ಕನ್ನಡ ಸಾಹಿತ್ಯದ ಮಹಾ ಸಾಗರದ ಪ್ರತಿರೂಪದಂತಿರುವ ಕುವೆಂಪು, ತಮ್ಮ ಸಾಹಿತ್ಯದ ಮೂಲಕ ಭಾರತದ ಬಹುತ್ವದ ದನಿಗೆ ವೈಚಾರಿಕತೆ, ಸೌಹಾರ್ದತೆ, ವಿಶ್ವಮಾನವತೆಯ ಬನಿಯನ್ನು ತುಂಬಿದ್ದರಿಂದ ಈ ನೆಲದಲ್ಲಿ ಇನ್ನೂ ಜೀವಪರತೆಯ ಒಲವು-ನಿಲುವು ಉಸಿರಾಡುತ್ತಿದೆ ಎಂದರು.

ಕುವೆಂಪು ಎಂದರೆ ಚಳವಳಿ. ಅವರು ಕನ್ನಡ ನೆಲದಲ್ಲಿ ನಡೆದ ಹಲವು ಚಳವಳಿಗಳಿಗೆ ತಾಯ್ತನ ಕೊಟ್ಟುವರು. ಸ್ವಾತಂತ್ರ್ಯ ನಂತರ ನಡೆದ ಕರ್ನಾಟಕ ಏಕೀಕರಣ, ಕನ್ನಡ ಭಾಷಾ, ಜಾತಿ ವಿನಾಶ, ರೈತ, ದಲಿತ, ಬೂಸಾ ಹಾಗೂ ವೈಚಾರಿಕ ಚಳವಳಿಗಳಿಗೆ ಕಸುವು ತುಂಬಿದವರು. ಇಂದಿಗೂ ಈ ಎಲ್ಲಾ ಚಳವಳಿಗಳ ಕಾವು ಆರದಂತೆ ಕಾಯುತ್ತಿರುವುದು ಕುವೆಂಪು ಅವರ ಸಾಹಿತ್ಯ ಮಾತ್ರ ಎಂದು ಪ್ರತಿಪಾದಿಸಿದರು.

ಜನ ಸಮುದಾಯದಲ್ಲಿ ವೈಚಾರಿಕ ದೃಷ್ಟಿ, ವೈಜ್ಞಾನಿಕ ಮನೋಭಾವ, ವಿಶ್ವಮಾನವ ಪ್ರಜ್ಞೆ ಎಚ್ಚರವಾಗಿಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಜೀವಾನುಭವದ ಸಾಂದ್ರತೆಯೊಂದಿಗೆ ವಿಶ್ವಾತ್ಮಕ ದೃಷ್ಟಿಕೋನವನ್ನು ಸೃಜನಶೀಲತೆಯ ದಟ್ಟವಾದ ಸ್ಪರ್ಶವನ್ನು ಹೊಂದಿರುವ ಕುವೆಂಪು ಸಾಹಿತ್ಯವನ್ನು ಪ್ರಚಾರ ಮಾಡಬೇಕಿದೆ. ಆಗ ಮಾತ್ರ ಅರಿವಿನ ದೀವಿಗೆ ಬೆಳಗಿ, ಈ ನೆಲದಲ್ಲಿ ಸೌಹಾರ್ದತೆಯು ನೆಲೆಸಲು ಸಾಧ್ಯವಾಗುತ್ತದೆ ಎಂದರು.

ಪ್ರಗತಿಪರ ಚಿಂತಕ ಮುಕುಂದ ಹಾಲಹಳ್ಳಿ ಮಾತನಾಡಿ, ಸಮಾಜದಲ್ಲಿ ಪುಸ್ತಕ ಓದುವ ಹವ್ಯಾಸದ ಕ್ರಾಂತಿಯಾಗಬೇಕಿದೆ. ಹಿರಿಯರು ತಮ್ಮ ಮಕ್ಕಳನ್ನು ಮೊಬೈಲಿನಿಂದ ದೂರವಿರುವಂತೆ ಮಾಡಬೇಕು. ಅವರನ್ನು ಪುಸ್ತಕ ಓದುವ ಕಡೆಗೆ ಹಚ್ಚಬೇಕು. ಎಲ್ಲರೂ ಓದಿನ ಹಾದಿಯಲ್ಲಿ ಸಾಗಿದಾಗ ಮನಸ್ಸು ಪರಿವರ್ತನೆಯಾಗುತ್ತದೆ ಎಂದರು.

ವಕೀಲ ಜೀರಹಳ್ಳಿ ರಮೇಶ್ ಗೌಡ ಕುವೆಂಪು ನೆನಪನ ದೋಣಿಯಲ್ಲಿ ಆತ್ಮಕಥೆಯ ಆಯ್ದ ಭಾಗಗಳನ್ನು ಓದಿದರು. ಉಪನ್ಯಾಸಕಿ ಆಶಾ ಹನಿಯಂಬಾಡಿ ಕುವೆಂಪು ವಿರಚಿತ ಕವಿತೆ ವಾಚಿಸಿದರು. ಗಾಯಕರಾದ ಗಾಮನಹಳ್ಳಿ ಸ್ವಾಮಿ, ಡೇವಿಡ್ ಪ್ರತಿಭಾಂಜಲಿ, ಎಚ್.ಎನ್. ದೇವರಾಜ್, ವಿಕಾಸ್, ವೈರಮುಡಿ ಗೀತಗಾಯನ ನಡೆಸಿಕೊಟ್ಟರು. ಪರಿಚಯ ಪ್ರಕಾಶನದ ಎಂ.ಎನ್. ಶಿವಕುಮಾರ್, ಚಿತ್ರಕೂಟದ ಅರವಿಂದ ಪ್ರಭು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್, ಸಿವಿಲ್ ಎಂಜಿನಿಯರಿಂಗ್ ಕೋರ್ಸ್ ಪ್ರಾರಂಭ
ರೈತರು, ಕಾರ್ಮಿಕರು ಮತ್ತು ಕೂಲಿಕಾರರ ವಿರೋಧಿ ನೀತಿ: ಮಂಜುಳಾ