ಕನ್ನಡಪ್ರಭ ವಾರ್ತೆ ಮಡಿಕೇರಿ
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಈ ಹಿಂದಿನ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಅಭಿವೃದ್ಧಿ ಕಾರ್ಯಗಳ ಕುರಿತು ಬಹಿರಂಗ ಚರ್ಚೆ ನಡೆಸಲು ಕಾಂಗ್ರೆಸ್ಸಿಗರು ಸಮಯ ಮತ್ತು ಸ್ಥಳವನ್ನು ನಿಗದಿ ಮಾಡಿದರೆ ನಾವು ಚರ್ಚೆಗೆ ಸಿದ್ಧ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ತಿರುಗೇಟು ನೀಡಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕೇಂದ್ರ ಸರ್ಕಾರ ಮತ್ತು ಸಂಸದರನ್ನು ಟೀಕಿಸಿರುವುದು ಖಂಡನೀಯ, ಜನರ ಮುಂದೆ ವಾಸ್ತವಾಂಶವನ್ನು ಹೇಳಬೇಕಾಗಿದೆ. 2018ರಲ್ಲಿ ಜಿಲ್ಲೆಗೆ ರೈಲ್ವೆ ಯೋಜನೆ ತರುವುದಾಗಿ ಸಂಸದರು ಹೇಳಿದ್ದು ನಿಜ, ಯಾವುದೇ ರೈಲ್ವೆ ಯೋಜನೆಗೆ ಭೂ ಸ್ವಾಧೀನವನ್ನು ಹಾಗೂ ಶೇ.50 ಅನುದಾನ ರಾಜ್ಯ ಸರ್ಕಾರ ಮಾಡಿ ಕೊಡಬೇಕು 2013 ರಿಂದ 18ರವರೆಗೆ ಇದ್ದ ಸಿದ್ದರಾಮಯ್ಯನವರು ಉಚಿತವಾಗಿ ಭೂ ಸ್ವಾದೀನ ಹಾಗೂ ಶೇ.50 ಅನುದಾನ ನೀಡಲು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿದರು. ಆದರೂ 2018ರಲ್ಲಿ ಲೈನ್ ಎಸ್ಟಿಮೇಟ್ ಮಾಡಿದ್ದು 1954 ಕೋಟಿ ಯೋಜನೆ ಆಗಿತ್ತು ಆಗ ಪಿಯೂಷ್ ಗೋಯಲ್ ಅವರು ಮಂಡಿಸಿದ ರೈಲ್ವೆ ಬಜೆಟಿನಲ್ಲಿ ಘೋಷಣೆ ಆಗಿ (ಪಿಂಕ್ ಬುಕ್)ನಲ್ಲಿ ನಮೂದಾಗಿದೆ ಮತ್ತೆ ಈಗ ಡಿ.ಪಿ.ಆರ್. ಮಾಡಿಸಲಾಗಿದ್ದು, 3092 ಕೋಟಿಗಳಿಗೆ ಸಲ್ಲಿಸಲಾಗಿದೆ ಮಾಡಲಾಗಿದೆ ಎಂದರು.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ದಿ ಯೋಜನೆಗಳಿಂದ ಭಾರತ ವಿಶ್ವದ 5ನೇ ಅಭಿವೃದ್ಧಿ ಹೊಂದಿರುವ ದೇಶವಾಗಿದ್ದು, ಇತರ ಎಲ್ಲ ದೇಶಗಳಿಗೆ ಹೋಲಿಸಿದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಕೇಂದ್ರ ಸಚಿವರ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲದೆ ಇರುವುದು ಇವರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಡೀ ದೇಶದ ಎಲ್ಲಾ ಭಾಗಗಳಿಗೂ ಸಂವಿಧಾನದಲ್ಲಿ ಸಮಾನತೆ ಎಂಬಂತೆ ಕಾಶ್ಮೀರಕ್ಕೆ ಮಾತ್ರ ನೀಡಿದ್ದ ವಿಶೆಷ ಆರ್ಟಿಕಲ್ 370 ಯನ್ನು ರದ್ದು ಪಡಿಸಿ ಅಲ್ಲಿ ನಡೆಯುತ್ತಿದ್ದ ಭಯೋತ್ಪಾನೆಯನ್ನು ಮಟ್ಟ ಹಾಕಿರುವುದು ಬಿಜೆಪಿ ಸರ್ಕಾರದ ಸಾಧನೆ. ಇಡೀ ದೇಶದಲ್ಲಿ ಇಂದು ಕೋಮು ಸಂಘರ್ಷ ಕಡಿಮೆಯಾಗದ್ದು, ಎಲ್ಲರೂ ಸೌಹಾರ್ದತೆಯಿಂದ ಬಾಳುವಂತಾಗಿದೆ ಆಂತರಿಕ ಭಯೋತ್ಪಾದನೆಗೂ ಕಡಿವಾಣ ಹಾಕಲಾಗಿದೆ ಎಂದರು.ವಿರಾಜಪೇಟೆ ನಗರದ ಕುಡಿಯುವ ನೀರಿನ ಅಮೃತ್ ಯೋಜನೆಗೆ 58 ಕೋಟಿ ರೂ. ಅನುಮೋದನೆಯಗಿದ್ದು, ಈ ಯೋಜನೆಯು 2023ರ ಫೆಬ್ರವರಿ ತಿಂಗಳಿನಲ್ಲಿ ಆಗಿನ ಶಾಸಕ ಕೆ.ಜಿ.ಬೋಪಯ್ಯ ಪ್ರಯತ್ನದ ಫಲವಾಗಿ ಜಾರಿಗೆ ಬಂದಿದೆ. ಇದನ್ನು ಈಗಿನ ಶಾಸಕರು ನಾನು ತಂದಿರುವುದು ಎಂದು ಹೇಳಿಕೊಂಡಿರುವುದು ಹಾಸ್ಯಾಸ್ಪದ ಎಂದ ರವಿ ಕಾಳಪ್ಪ ಜಿಲ್ಲೆಯಲ್ಲಿ ಆಗಿರುವ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ರಸ್ತೆಗಳು, ಅನೇಕ ಹೆದ್ದಾರಿಗಳ ಅಭಿವೃದ್ಧಿ, ಚತುಷ್ಪಥ ರಸ್ತೆ ನಿರ್ಮಾಣ ಆರಂಭವಾಗಿರುವುದು ಸಂಸದ ಪ್ರತಾಪ್ ಸಿಂಹ ಅವರ ಕಾಲದಲ್ಲಿ. ಯಾವುದೇ ಯೋಜನೆಗಳ ಬಗ್ಗೆ ಚರ್ಚೆಗೆ ನಮ್ಮ ಸಂಸದರು, ಮಾಜಿ ಶಾಸಕರುಗಳು ತಯಾರಿದ್ದಾರೆ. ಕಾಂಗ್ರೆಸ್ ತಮ್ಮ ಶಾಸಕರುಗಳನ್ನು ಕರೆದು ವೇದಿಕೆ ಸಿದ್ಧಪಡಿಸಲಿ, ಚರ್ಚೆ ಮಾಡೋಣ ಎಂದು ಸವಾಲೆಸೆದರು.ಹಿಂದಿನ ಬಿಜೆಪಿ ಶಾಸಕರ ಅವಧಿಯಲ್ಲಿ ಜಿಲ್ಲೆಯಲ್ಲಾಗಿರುವ ಅನೇಕ ಯೋಜನೆಗಳ ಉದ್ಘಾಟನೆಯನ್ನು ಈಗಿನವರು ಮಾಡುತ್ತಿದ್ದಾರೆ. ಹಿಂದಿನ ಸರ್ಕಾರದ ಕಾಮಗಾರಿಗಳನ್ನು ನಮ್ಮದು ಎಂದು ಹೇಳಿಕೊಳ್ಳೋದಕ್ಕೆ ಇವರಿಗೆ ನಾಚಿಕೆ ಆಗಬೇಕು ಎಂದರು.ಇವರ ಉಚಿತ ಭಾಗ್ಯ ಯೋಜನೆಗಳು ಎಷ್ಟು ಜನರಿಗೆ ಯಾವ ರೀತಿ ತಲುಪಿಸುತ್ತಿದ್ದಾರೆ ಎಂಬುದನ್ನು ವಿಮರ್ಶೆ ಮಾಡಬೇಕಿದೆ. ಉಚಿತ ಅನ್ನ ಭಾಗ್ಯ ಯೋಜನೆ 5 ಕೆ.ಜಿ. ಅಕ್ಕಿ ಕೇಂದ್ರದಿಂದ ಬರುವಂತಹದ್ದು ಇವರ ಉಳಿದ10ಕೆ.ಜಿ.ಅಕ್ಕಿ ಎಲ್ಲಿ ಹೋಯಿತ್ತು. ಮಹಿಳೆಯರಿಗೆ ಉಚಿತ ಬಸ್ಟ್ ಪ್ರಯಾಣ ಇದರಿಂದ ಅನೇಕ ಶಾಲಾ ಕಾಲೇಜು ಮಕ್ಕಳಿಗೆ ಪ್ರಯಾಣಿಸಲು ಎಷ್ಟು ತೊಂದರೆಯಾಗಿದೆ. ಹಿರಿಯ ನಾಗರಿಕರಿಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಮಹಿಳೆಯರಿಗೆ ಸಾಕಾಗುವಷ್ಟು ಹೆಚ್ಚಿನ ಬಸ್ಟ್ ಸೌಲಭ್ಯ ನೀಡಿಲ್ಲ.ಉಚಿತ ವಿದ್ಯುತ್ 200ಯೂನಿಟ್ ನೀಡುವುದಾಗಿ ಭರವಸೆ ನೀಡಿ ಅವು ಯಾರಿಗೂ ತಲುಪುತ್ತಿಲ್ಲ ಬಿಲ್ ಪಾವತಿ ಮಾಡುವವರಿಗೆ ಈ ಹಿಂದಿಗಿಂತ 3 ಪಟ್ಟು ಹೆಚ್ಚಿಸಲಾಗಿದೆ. ಯುವ ನಿಧಿ ಯೋಜನೆ ಎಲ್ಲ ಹೋಯಿತು ಎಷ್ಟು ನಿರುದ್ಯೋಗಿಗಳಿಗೆ ನೀವು ಹಣವನ್ನು ನೀಡಿರುತ್ತಿರಿ ಇದೆಲ್ಲ ಕೇವಲ ಭರವಸೆಗಳಾಗಿಯೆ ಉಳಿದಿದೆ ಎಂದು ಆರೋಪಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಸುನೀಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಭೀಮಯ್ಯ, ಕುಲ್ಲೊರಿಕೊಪ್ಪ ಮಾದಪ್ಪ, ವಕ್ತಾರ ಮಹೇಶ್ ಜೈನಿ ಹಾಗೂ ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.