ವಸಂತಕುಮಾರ್ ಕತಗಾಲ
ಕಾರವಾರ:ಉತ್ತರ ಕನ್ನಡ (ಕೆನರಾ) ಲೋಕಸಭಾ ಕ್ಷೇತ್ರ ಇದುವರೆಗೆ ಹಲವು ಅಚ್ಚರಿಯ ಫಲಿತಾಂಶಗಳನ್ನು ನೀಡಿದೆ. ಘಟಾನುಘಟಿಗಳು ಸೋತಿದ್ದಾರೆ. ರಾಜಕೀಯಕ್ಕೆ ಹಠಾತ್ತಾಗಿ ಬಂದವರು ಗೆಲುವಿನ ಇತಿಹಾಸ ನಿರ್ಮಿಸಿದ್ದಾರೆ. ಪ್ರಸಿದ್ಧ ಸಾಹಿತಿ ಶಿವರಾಮ ಕಾರಂತ, ಹೆಸರಾಂತ ಚಿತ್ರನಟ ಉತ್ತರ ಕನ್ನಡ ಮೂಲದ ಅನಂತನಾಗ, ಚುಟುಕು ಬ್ರಹ್ಮ ದಿನಕರ ದೇಸಾಯಿ, ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ, ಮಾಜಿ ರಾಜ್ಯಪಾಲೆ, ಸಚಿವೆ ಮಾರ್ಗರೆಟ್ ಆಳ್ವ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಇವರೆಲ್ಲ ಹಿಂದಿನ ಕೆನರಾ ಇಂದಿನ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದ ಘಟಾನುಘಟಿಗಳು.ಅಚ್ಚರಿಯ ಸಂಗತಿ ಎಂದರೆ ಬಿಜೆಪಿಯ ಅನಂತಕುಮಾರ ಹೆಗಡೆ ಹಾಗೂ ಕಾಂಗ್ರೆಸ್‌ನ ದೇವರಾಯ ನಾಯ್ಕ ನಿರಾಯಾಸವಾಗಿ ಗೆದ್ದು ಬಂದಿದ್ದಾರೆ. ಪ್ರಬಲ ಅಭ್ಯರ್ಥಿಯ ವಿರುದ್ಧ ಸೆಣಸಿ ಅವರನ್ನು ಸೋಲಿಸಿದ ಹಿರಿಮೆ ಇವರದ್ದು.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ, ಯಲ್ಲಾಪುರ, ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗೂ ಖಾನಾಪುರ ಈ ಎಂಟು ತಾಲೂಕುಗಳನ್ನು ಹೊಂದಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶಗಳು ಬಂದಿದ್ದೇ ಹೆಚ್ಚು.1957 ಹಾಗೂ 62ರಲ್ಲಿ ಕಾಂಗ್ರೆಸ್ ನ ಜೋಕಿಮ್ ಆಳ್ವ ಆಯ್ಕೆಯಾದರು. 1967ರಲ್ಲಿ ದಿನಕರ ದೇಸಾಯಿ ಗೆದ್ದರೆ, 1971ರಲ್ಲಿ ಬಿ.ವಿ. ನಾಯಕ ದಿನಕರ ದೇಸಾಯಿ ಅವರನ್ನು ಸೋಲಿಸಿ ಆಯ್ಕೆಯಾದರು. 1977ರಲ್ಲಿ ಕಾಂಗ್ರೆಸ್‌ನ ಬಿ.ಪಿ. ಕದಂ ರಾಮಕೃಷ್ಣ ಹೆಗಡೆ ಅವರನ್ನು ಮಣಿಸಿದರು. ನಂತರ 1980ರಿಂದ ಕಾಂಗ್ರೆಸ್‌ನ ದೇವರಾಯ ನಾಯ್ಕ ಯುಗ ಆರಂಭವಾಯಿತು. 1980ರಲ್ಲಿ ಆರ್.ವಿ. ದೇಶಪಾಂಡೆ ಅವರನ್ನು ಪರಾಭವಗೊಳಿಸಿದರು. 1984ರಲ್ಲಿ ಪುನರಾಯ್ಕೆಯಾದರು. 1989ರಲ್ಲಿ ಶಿವರಾಮ ಕಾರಂತ, ಅನಂತನಾಗ ಅವರಂತಹ ಘಟಾನುಘಟಿಗಳಿಗೆ ದೇವರಾಯ ನಾಯ್ಕ ಸೋಲಿನ ರುಚಿ ತೋರಿಸಿದರು. 1991ರಲ್ಲಿ ದೇಶಪಾಂಡೆ ಅವರನ್ನು ಪರಾಭವಗೊಳಿಸಿದರು. ಒಟ್ಟೂ ನಾಲ್ಕು ಬಾರಿ ದೇವರಾಯ ನಾಯ್ಕ ಗೆಲುವು ಸಾಧಿಸಿದರು.
1996ರಿಂದ ಬಿಜೆಪಿಯ ಅನಂತಕುಮಾರ ಹೆಗಡೆ ಪರ್ವ ಶುರುವಾಯಿತು. ಅವರು 1996ರಲ್ಲಿ ಮೊದಲ ಬಾರಿಗೆ ಗೆದ್ದರು. 1998 ರಲ್ಲಿ ಹೆಗಡೆ ಮಾರ್ಗರೆಟ್ ಆಳ್ವ ಅವರನ್ನು ಸೋಲಿಸಿದರು. 1999ರಲ್ಲಿ ಮಾತ್ರ ಅನಂತಕುಮಾರ ಹೆಗಡೆ ಮಾರ್ಗರೆಟ್ ಆಳ್ವ ಅವರಿಂದ ಪರಾಭವಗೊಂಡರು.ನಂತರ 2004, 2009, 2014, 2019ರಲ್ಲಿ ನಡೆದ ಎಲ್ಲ ನಾಲ್ಕು ಚುನಾವಣೆಗಳಲ್ಲೂ ಅನಂತಕುಮಾರ ಹೆಗಡೆ ಗೆದ್ದು ಒಟ್ಟೂ ಆರು ಬಾರಿ ಗೆದ್ದು ಅತಿ ಹೆಚ್ಚು ಗೆಲುವಿನ ಇತಿಹಾಸ ನಿರ್ಮಿಸಿದರು. ಈ ಬಾರಿ ಬಿಜೆಪಿಯಿಂದ ಅವರಿಗೆ ಟಿಕೆಟ್ ಸಿಗುವ ಬಗ್ಗೆ ಖಚಿತತೆ ಇಲ್ಲ. ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೈತ್ರಿ ಆಗಿರುವುದರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ನಡೆಯಲಿದೆ. ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ದೊರೆಯಲಿದೆ.