ಪಂಚಮಸಾಲಿ ಬೇಡಿಕೆಗಳಿಗೆ ಸ್ಪಂದಿಸಲು ಸಿದ್ಧ: ಸಿಎಂ

KannadaprabhaNewsNetwork |  
Published : Apr 08, 2026, 03:00 AM IST
ಲಿಂಗಾಯತ ಪಂಚಮಸಾಲಿ ಸಮುದಾಯದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮುದಾಯದ ಮುಖಂಡರು ಸನ್ಮಾನಿಸಿದರು. | Kannada Prabha

ಸಾರಾಂಶ

ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಪಂಚಮಸಾಲಿ ಸಮುದಾಯದ ನಾಯಕಿಯರಿಗೆ ಟಿಕೆಟ್ ನೀಡುವುದರ ಮೂಲಕ ಈ ಸಮುದಾಯಕ್ಕೆ ಆದ್ಯತೆ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಪಂಚಮಸಾಲಿ ಸಮುದಾಯದ ನಾಯಕಿಯರಿಗೆ ಟಿಕೆಟ್ ನೀಡುವುದರ ಮೂಲಕ ಈ ಸಮುದಾಯಕ್ಕೆ ಆದ್ಯತೆ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ನಗರ ಹೊರವಲಯದ ರೆಸಾರ್ಟ್‌ನಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಎರಡು ಲೋಕಸಭಾ ಚುನಾವಣೆಗಳಲ್ಲಿ ವೀಣಾ ಕಾಶಪ್ಪನವರ, ಸಂಯುಕ್ತ ಪಾಟೀಲ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರಿಗೆ ಟಿಕೆಟ್ ಕೊಡಿಸುವಲ್ಲಿ ನಾನೂ ಶ್ರಮಿಸಿದ್ದೇನೆ ಎಂದರು.

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನಾಗಿ ಘೋಷಿಸಿದಲ್ಲದೆ, ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಅಳವಡಿಸಲು ಕ್ರಮ ಕೈಗೊಂಡಿದ್ದೇನೆ. ರಾಣಿ ಚನ್ನಮ್ಮ ಜಯಂತಿ ಆಚರಣೆಗೆ ಆದೇಶಿಸಿದ್ದು ಸಹ ನಾನೇ. ಬಿಜೆಪಿ ಅವರಿಂದ ಇದು ಯಾಕೆ ಸಾಧ್ಯವಾಗಲಿಲ್ಲ ಎಂಬುದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಸಮುದಾಯದ ಎಲ್ಲ ವಿಷಯಗಳಿಗೆ ಸ್ಪಂದಿಸಲು ನಾವು ಸಿದ್ಧರಿದ್ದೇವೆ. ಉಪಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಬೇಕು, ಉಮೇಶ ಮೇಟಿ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಮಾಜದ ಬಂಧುಗಳು ಪಕ್ಷಕ್ಕೆ ನಿರಂತರ ಬೆಂಬಲ ನೀಡುತ್ತಿದ್ದು, ಪ್ರಸಕ್ತ ಚುನಾವಣೆಯಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ ಮೇಟಿ ಅವರನ್ನು ಬೆಂಬಲಿಸಬೇಕು ಎಂದು ಕೋರಿದರು. ದಿ.ಎಚ್.ವೈ.ಮೇಟಿ ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಅಭಿವೃದ್ಧಿ ಬಗ್ಗೆ ಅವರು ಇನ್ನೂ ಸಾಕಷ್ಟು ಕನಸು ಕಂಡಿದ್ದರು. ಆ ಕನಸುಗಳು ಸಾಕಾರಗೊಳ್ಳಲು ಮತ್ತೊಮ್ಮೆ ಕಾಂಗ್ರೆಸ್‌ ಗೆ ಮತ ನೀಡಬೇಕು. ನಿಮ್ಮ ಸಮಾಜದ ಎಲ್ಲಾ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಸಚಿವ ಶಿವಾನಂದ ಪಾಟೀಲ, ಶಾಸಕರಾದ ವಿಜಯಾನಂದ ಕಾಶಪ್ಪನವರ, ವಿನಯ ಕುಲಕರ್ಣಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.ಸಮಾಜದ ಪರವಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಸಮಾಜದ ಎಲ್ಲ ಬಂಧುಗಳು ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಎಲ್ಲ ಭರವಸೆ ಈಡೇರಿಸಲಿದೆ ಎಂಬ ವಿಶ್ವಾಸವಿದೆ .ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸೋಣ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವನ ಬುದ್ಧಿವಂತಿಕೆ ಸರಿಗಟ್ಟಲು ಎ.ಐ.ಗೆ ಸಾಧ್ಯವಿಲ್ಲ: ಶ್ರೀ
ಉಪಕದನದ ಬಹಿರಂಗ ಪ್ರಚಾರ ಅಂತ್ಯ