ಕನ್ನಡಪ್ರಭ ವಾರ್ತೆ, ಔರಾದ್
ಔರಾದ್ (ಬಿ) ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಸಾಕಷ್ಟು ಪರಿಶ್ರಮ ವಹಿಸಿ ಜಲ ಜೀವನ್ ಮಿಷನ್ ಯೋಜನೆಯಡಿ ಸುಮಾರು 200 ಕೋಟಿ ರು. ಅನುದಾನ ತರಲಾಗಿದೆ. ಕೆಲಸ ಕಳಪೆಯಾಗಿ ಮಾಡುತ್ತಿದ್ದು ಕೂಡಲೇ ಸರಿಪಡಿಸಬೇಕು ಇಲ್ಲವಾದಲ್ಲಿ ಶಿಕ್ಷೆ ಎದುರಿಸಲು ಸಿದ್ಧರಿರಬೇಕು ಎಂದು ಮಾಜಿ ಸಚಿವ, ಔರಾದ್ (ಬಿ) ಶಾಸಕರಾದ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಎಚ್ಚರಿಸಿದರು.ಅವರು ಔರಾದ್ (ಬಿ) ತಾಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ನ.29ರಂದು ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೆಜೆಎಂ ಕಾಮಗಾರಿಯ ಬಗ್ಗೆ ಹಿಂದಿನಿಂದಲೂ ನಿರಂತರ ದೂರುಗಳು ಬರುತ್ತಿವೆ. ಕಾಮಗಾರಿ ನಡೆದ ಯಾವ ಗ್ರಾಮದಲ್ಲಿಯೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.ಹಾಳಾದ ರಸ್ತೆ ಸರಿಪಡಿಸದೇ ಬಿಟ್ಟಿರುವುದು, ನಳಗಳು ಮುರಿದು ಬಿದ್ದಿರುವುದು, ಚರಂಡಿಯಲ್ಲಿ ಪೈಪುಗಳನ್ನು ಬಿಟ್ಟಿರುವುದು, ಕಳಪೆ ಮಟ್ಟದ ಸಾಮಗ್ರಿಗಳನ್ನು ಬಳಸಿರುವುದು, ಬಾವಿ ಕೊರೆಯದಿರುವುದು ಹೀಗೆ ಹತ್ತು ಹಲವು ಸಮಸ್ಯೆಗಳಿವೆ. ಹಾಗಾಗಿ ಕಾಮಗಾರಿ ಪರಿಶೀಲಿಸದೇ ಅಧಿನಕ್ಕೆ ಪಡೆಯಬಾರದೆಂದು ತಿಳಿಸಿದರೂ ಕೆಲವು ಪಿಡಿಓಗಳು ಗುತ್ತಿಗೆದಾರರ ಆಮೀಷಕ್ಕೆ ಒಳಗಾಗಿ ಕಾಮಗಾರಿಯನ್ನು ಪಂಚಾಯತ್ ಅಧೀನಕ್ಕೆ ಪಡೆದಿದ್ದಾರೆ. ಮುಂದೆ ಸಂಬಂಧಿಸಿದ ಎಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿಸಿ, ಕಾಮಗಾರಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಜೆಪಿಎಸ್ ಆಧಾರಿತ ಭಾವಚಿತ್ರಗಳು ಲಭ್ಯ ವಿವೆ. ಮುಖ್ಯಮಂತ್ರಿಗಳು ಮತ್ತು ಪ್ರಧಾನಮಂತ್ರಿವರೆಗೆ ಮಾಹಿತಿ ಹೋಗಲಿದೆ. ಯೋಜನೆ ಅನುಷ್ಠಾನಗೊಂಡ ಕಡೆಗಳಲ್ಲಿ ಸುಮಾರು 30 ವರ್ಷದವರೆಗೆ ಕುಡಿಯುವ ನೀರಿನ ಯೋಜನೆಗೆ ಅನುದಾನ ಬರುವುದಿಲ್ಲ. ಕಾಮಗಾರಿ ಕಳಪೆಯಾಗಲು ಕಾರಣರಾದವರ ವಿರುದ್ಧ ಕ್ರಮವಾಗಬೇಕು. ಜನತೆಯ ಅತ್ಯವಶ್ಯಕತೆಗಳಲ್ಲಿ ಒಂದಾದ ಕುಡಿಯುವ ನೀರಿಗಾಗಿ ಧರಣಿ ಸತ್ಯಾಗ್ರಹ ಮಾಡುವುದಕ್ಕೂ ಸಿದ್ಧ ಎಂದು ಹೇಳಿದರು.ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ, ಆರೋಗ್ಯ, ರೇಷ್ಮೆ, ಅರಣ್ಯ, ಪಂಚಾಯತ ರಾಜ್ ಎಂಜಿನಿಯರಿಂಗ್, ಲೋಕೋಪಯೋಗಿ, ಜೆಸ್ಕಾಂ, ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.ತಾಪಂ ಆಡಳಿತಾಧಿಕಾರಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ. ಕೆ., ಔರಾದ್ (ಬಿ) ತಾಪಂ ಇಒ ಮಾಣಿಕರಾವ್ ಪಾಟೀಲ್, ಕಮಲನಗರ ತಹಸೀಲ್ದಾರ ಅಮಿತಕುಮಾರ ಕುಲಕರ್ಣಿ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.ಸರ್ಕಾರಿ ಶಾಲೆ ದನ ಕಟ್ಟಲು ಬಳಕೆ: ಶಾಸಕ ಆಕ್ರೋಶ
ಔರಾದ್ : ತಾಲೂಕಿನ ಭಂಡಾರಕಮಟಾದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸುಮಾರು ವರ್ಷಗಳಿಂದ ತಮ್ಮ ಖಾಸಗಿ ಟ್ರ್ಯಾಕ್ಟರ್ ಇಡುತ್ತಿದ್ದಾರೆ, ದನ ಕರುಗಳನ್ನು ಕಟ್ಟುತ್ತಿದ್ದಾರೆ. ಹೀಗಾದಲ್ಲಿ ಮಕ್ಕಳು ಹೇಗೆ ಶಿಕ್ಷಣ ಪಡೆಯಬೇಕು. ಇಷ್ಟಿದ್ದರೂ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಷ್ಟು ಬಾರಿ ಶಾಲೆಗೆ ಭೇಟಿ ನೀಡಿದ್ದೀರಿ ಎಂದು ಶಾಸಕ ಪ್ರಭು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರಿ ಶಾಲೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.ನೇಮಕಾತಿಯಲ್ಲಿ ಅಕ್ರಮ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕಾತಿಯಲ್ಲಿ ಬಹಳಷ್ಟು ಅಕ್ರಮವಾಗಿದೆ. ಅರ್ಜಿದಾರರಿಂದ ಲಕ್ಷಾಂತರ ಹಣವನ್ನು ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕಛೇರಿಯನ್ನು ಬ್ರೋಕರ್‌ಗಳ ಅಡ್ಡಾ ಮಾಡಿದ್ದೀರೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಯ ವಿರುದ್ದ ಆಕ್ರೋಶ ಹೊರಹಾಕಿದರು. ಈ ನೇಮಕಾತಿಯನ್ನು ರದ್ದುಪಡಿಸಿ ಪುನಃ ನಡೆಸಬೇಕೆಂದು ಸೂಚಿಸಿದರು.ಬಾವಲಗಾಂವ್, ನಂದಿ ಬಿಜಲಗಾಂವ್ ಸೇರಿದಂತೆ ಕೆಲವು ಸರ್ಕಾರಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಲ್ಲ. ಔರಾದ್ (ಬಿ) ಮತಕ್ಷೇತ್ರದ ಪ್ರತಿಯೊಂದು ಶಾಲೆಯಲ್ಲಿ ಕಡ್ಡಾಯವಾಗಿ ಕನ್ನಡ ಶಿಕ್ಷಕರನ್ನು ನಿಯೋಜಿಸಬೇಕು. ಸರ್ಕಾರಿ ಶಾಲೆಗಳ ಶಿಕ್ಷಕರು ಸರಿಯಾಗಿ ಶಾಲೆಗೆ ಹೋಗುತ್ತಿಲ್ಲ. ಸಮಯಕ್ಕಿಂತ ಮುಂಚಿತವಾಗಿ ಮನೆಗೆ ಹೋಗುತ್ತಿದ್ದಾರೆ. ಹೀಗಾದರೆ ಜನತೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಹೇಗೆ ಕಳುಹಿಸಲು ಸಾಧ್ಯ ಶಿಕ್ಷಣದ ಅಭಿವೃದ್ಧಿ ಆಗುವುದಾದರೂ ಹೇಗೆ ಎಂದು ಶಾಸಕ ಪ್ರಭು ಚವ್ಹಾಣ್ ಪ್ರಶ್ನಿಸಿದರು.ಔರಾದ್ ಕೆಡಿಪಿ ಸಭೆಯಲ್ಲಿ ‘ಕನ್ನಡಪ್ರಭ’ ಸದ್ದು !ಔರಾದ್: ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ‘ಕನ್ನಡಪ್ರಭ’ ದಿನ ಪತ್ರಿಕೆಯಲ್ಲಿ ಪ್ರಕವಾದ ವರದಿಗಳೇ ಜೋರಾಗಿ ಸದ್ದು ಮಾಡಿದವು.
ಶಾಸಕ ಪ್ರಭು ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಚವ್ಹಾಣ್ ಅವರು ‘ಕನ್ನಡಪ್ರಭ’ ಇತ್ತೀಚೆಗೆ ‘ಔರಾದ್‌ನಲ್ಲಿ ಹಳ್ಳ ಹಿಡಿದ ಜಲಜೀವನ ಮಿಷನ್’ ತಲೆ ಬರಹದಡಿಯಲ್ಲಿ ಪ್ರಕಟಿಸಿದ ವರದಿಯನ್ನು ಸಭೆಗೆ ತೋರಿಸುತ್ತಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.''''''''ಕನ್ನಡಪ್ರಭ'''''''' ದವರು ತಾಲೂಕಿನ ಕೌಡಗಾಂವ್ ಗ್ರಾಮದಲ್ಲಿ ಜಲ ಜೀವನಮಿಷನ್ ಯೋಜನೆ ಅಡಿಯಲ್ಲಿ ಒಂದೇ ಕಡೆ ಸಾಮೂಹಿಕವಾಗಿ ನಲ್ಲಿಗಳನ್ನು ಕೂಡಿಸಿ ಜನರಿಗೆ ಮನೆ ಮನೆಗೆ ನಳ ಕೊಟ್ಟಿದ್ದೇವೆ ಎಂದು ಹೇಳುವ ಅಧಿಕಾರಿಗಳ ಮುಖವಾಡ ಬಯಲು ಮಾಡಿದ್ದಾರೆ.ನಿಮಗೆ ಏನಾದ್ರು ಇದೆಯಾ...? ಪೇಪರ್‌ನಲ್ಲಿ ನಿಮ್ಮ ಅವತಾರ ಬಂದಿದೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಇ ಸುಭಾಷ ಧೂಳಗುಂಡೆ ಅವರ ಬೇವರಿಳಿಸಿದರು.
ಅಲ್ಲದೆ ''''''''ಔರಾದ್ ತಾಲೂಕು ಆಡಳಿತ ಜನತೆಯಿಂದ ದೂರ'''''''' ತಲೆ ಬರಹದಡಿಯಲ್ಲಿ ಪ್ರಕಟಿಸಲಾದ ಸುದ್ದಿಯನ್ನು ಪ್ರಸ್ತಾಪಿಸಿ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಜಿಲ್ಲಾ ಕೇಂದ್ರಕ್ಕೆ ಅಂಟಿಕೊಂಡಿರುವುದನ್ನು ಸಭೆ ಗಮನಕ್ಕೆ ತಂದರು. ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿಯೇ ವಾಸ್ತವ್ಯ ಮಾಡುವಂತೆ ಖಡಕ್ ಸೂಚನೆ ನೀಡಿದರು.