ರೈತ ಹೋರಾಟಗಾರರ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆಗೆ ಹುನ್ನಾರ

KannadaprabhaNewsNetwork |  
Published : May 15, 2026, 01:15 AM IST
14ಕೆಆರ್ ಎಂಎನ್ 8.ಜೆಪಿಜಿರೈತ ಮುಖಂಡ ಎಚ್.ಸಿ.ರಾಜಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಬಿಡದಿ ಟೌನ್ ಶಿಪ್ )ಗೆ ನಾವು ನಮ್ಮ ಭೂಮಿ ನೀಡಲು ಸಿದ್ದರಾಗಿದ್ದೇವೆ. ಇದು ನಮ್ಮ ಭೂಮಿ, ನಮ್ಮ ಹಕ್ಕು, ಸರ್ಕಾರ ನಿಗಧಿಪಡಿಸಿರುವ ಪರಿಹಾರಕ್ಕೆ ಪ್ಪಿ ಭೂಮಿ ಕೊಡುತ್ತಿದ್ದೇವೆ. ಆದರೆ, ಕೆಲವರು ಯೋಜನೆ ಬಗ್ಗೆ ರೈತರಿಗೆ ಸುಳ್ಳು ಮಾಹಿತಿ ನೀಡಿ ರಿಯಲ್ ಎಸ್ಟೇಟ್ ದಂಧೆ ಮಾಡಲು ಹುನ್ನಾರ ನಡೆಸುತ್ತಿದ್ದಾರೆ ಎಂದು ರೈತ ಮುಖಂಡ ಎಚ್.ಸಿ.ರಾಜಣ್ಣ ಆರೋಪಿಸಿದರು

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ (ಬಿಡದಿ ಟೌನ್ ಶಿಪ್ )ಗೆ ನಾವು ನಮ್ಮ ಭೂಮಿ ನೀಡಲು ಸಿದ್ದರಾಗಿದ್ದೇವೆ. ಇದು ನಮ್ಮ ಭೂಮಿ, ನಮ್ಮ ಹಕ್ಕು, ಸರ್ಕಾರ ನಿಗಧಿಪಡಿಸಿರುವ ಪರಿಹಾರಕ್ಕೆ ಪ್ಪಿ ಭೂಮಿ ಕೊಡುತ್ತಿದ್ದೇವೆ. ಆದರೆ, ಕೆಲವರು ಯೋಜನೆ ಬಗ್ಗೆ ರೈತರಿಗೆ ಸುಳ್ಳು ಮಾಹಿತಿ ನೀಡಿ ರಿಯಲ್ ಎಸ್ಟೇಟ್ ದಂಧೆ ಮಾಡಲು ಹುನ್ನಾರ ನಡೆಸುತ್ತಿದ್ದಾರೆ ಎಂದು ರೈತ ಮುಖಂಡ ಎಚ್.ಸಿ.ರಾಜಣ್ಣ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆ ಜಾರಿಗೆ ಅನುಮೋದನೆ ನೀಡಿದೆ. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಚಳವಳಿಯ ಹೆಸರಿನಲ್ಲಿ ಹಳ್ಳಿಗಳಿಗೆ ಹೋಗಿ ಅಮಾಯಕ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ಇದನ್ನು ನಿಲ್ಲಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈಗಾಗಲೇ ಯೋಜನೆ ಅನುಷ್ಠಾನ ಅಂತಿಮ ಘಟ್ಟಕ್ಕೆ ಬಂದಿದೆ. ಸಚಿವ ಸಂಪುಟದಲ್ಲಿ ಅನುಮೋದನೆಯಾಗಿ ಜಿಲ್ಲಾಧಿಕಾರಿ ಅಂತಿಮ ಅಧಿಸೂಚನೆ ಹೊರಡಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಇಷ್ಟಾದರೂ ರೈತರ ಮುಖವಾಡ ಧರಿಸಿರುವ ಪಟ್ಟಭದ್ರರು, ರೈತರ ಮನೆಗೆ ತೆರಳಿ ಭೂಮಿ ಕೊಡಬೇಡಿ, ನಿಮಗೆ ನಿಗಧಿಪಡಿಸಿದಷ್ಟು ಪರಿಹಾರ ಹಣ ಬರುವುದಿಲ್ಲ, ಈ ಯೋಜನೆ ಅನುಷ್ಠಾನವಾಗುವುದಿಲ್ಲ, ನಿಮ್ಮನ್ನು ಒಕ್ಕಲೆಬ್ಬಿಸುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಭಾಗದಲ್ಲಿ ಸಣ್ಣ ಮತ್ತು ದೊಡ್ಡ ರೈತರೆಲ್ಲರೂ ಇದ್ದಾರೆ. ನಮಗೆ ನಮ್ಮ ಮಕ್ಕಳ ಭವಿಷ್ಯ ಮುಖ್ಯ, ಭವಿಷ್ಯದಲ್ಲಿ ಉತ್ತಮ ನಗರ ನಿರ್ಮಾಣವಾಗುವ ಜೊತೆಗೆ ಸೌಲಭ್ಯಗಳಿಂದ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ. ಹಾಗಾಗಿಯೇ ನಾವು ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಿದ್ದೇವೆ. ಶೀಘ್ರವಾಗಿ ಯೋಜನೆ ಅನುಷ್ಠಾನಗೊಳಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ ಎಂದು ರಾಜಣ್ಣ ಹೇಳಿದರು.

ನೊಂದ ರೈತರ ನೆರವಿಗೆ ಯಾರೂ ಬಂದಿಲ್ಲ:

ಬೈರಮಂಗಲ ಸೊಸೈಟಿ ಮಾಜಿ ಅಧ್ಯಕ್ಷ ಎಚ್.ಎಸ್.ಸಿದ್ದರಾಜು ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಈ ಭಾಗದ ರೈತರು ಅನುಭವಿಸುತ್ತಿರುವ ಯಾತನೆ ನಮಗೆ ಮಾತ್ರ ಗೊತ್ತಿದೆ. ರೆಡ್‌ಜೋನ್ ಮಾಡಿದ್ದರಿಂದ ಅತ್ತ ಮಾರಾಟ ಮಾಡಲೂ ಆಗದೆ, ಇತ್ತ ಉತ್ತಮ ಭವಿಷ್ಯ ಕಂಡುಕೊಳ್ಳಲೂ ಆಗದೆ ತೊಂದರೆ ಅನುಭವಿಸುತ್ತಿದ್ದೇವೆ. ಇಲ್ಲಿವರೆಗೆ ಯಾರೂ ನೊಂದ ರೈತರ ನೆರವಿಗೆ ಬಂದಿಲ್ಲ ಎಂದು ಟೀಕಿಸಿದರು.

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಇದು ನನ್ನ ಕನಸಿನ ಕೂಸು ಅನುಷ್ಠಾನ ಮಾಡುತ್ತೇನೆ ಎಂದು ಹೇಳಿಕೊಂಡು ಸುಮ್ಮನಾದರು. ಈಗಿನ ಸರ್ಕಾರ ಹೆಚ್ಚಿನ ಪರಿಹಾರ ನೀಡಿ ಭೂ ಸ್ವಾಧೀನಕ್ಕೆ ಮುಂದಾಗಿದೆ. ಆದರೆ, ಕೆಲ ರಿಯಲ್ ಎಸ್ಟೇಟ್ ಮಂದಿ ರೈತರ ನೆಮ್ಮದಿ ಕಸಿದು ತಮ್ಮ ಲಾಭಕ್ಕಾಗಿ ಜಮೀನು ಲಪಟಾಯಿಸುವ ತಂತ್ರ ಹೆಣೆಯುತ್ತಿದ್ದಾರೆ. ಇದಕ್ಕೆ ರೈತರು ಕಿವಿಗೊಡಬಾರದು ಎಂದರು.

ಯೋಜನೆಯ ಅನುಷ್ಠಾನಕ್ಕೆ ಬಹುತೇಕ ರೈತರ ಸಹಮತ ಇದೆ. ಆದರೆ, ಕೆಲವರು ಮಾತ್ರ ಅವರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸರ್ಕಾರವೇ ನಮಗೆ ಕೇಳಿದಷ್ಟು ಪರಿಹಾರ ನೀಡುವ ಭರವಸೆ ನೀಡುತ್ತಿರುವಾಗ ಪ್ರತಿಭಟನೆ ಏತಕ್ಕೆ ಬೇಕು ಎಂದು ಸಿದ್ದರಾಜು ಪ್ರಶ್ನಿಸಿದರು.

ದಲಿತರ ಪಾಲಿಗೆ ಭಾಗ್ಯದ ಬಾಗಿಲು ತೆರೆದಂತೆ :

ದಲಿತ ಮುಖಂಡ ಶೇಖರ್ ಮಾತನಾಡಿ, ಟೌನ್‌ಶಿಪ್ ಯೋಜನೆ ಜಾರಿಯಿಂದ ದಲಿತರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ದಲಿತರು ಹೆಚ್ಚಾಗಿ ಸಣ್ಣ ರೈತರೇ ಆಗಿದ್ದು, ಸರ್ಕಾರ ಭೂಸ್ವಾಧೀನ ಮಾಡಿಕೊಂಡು ಯೋಜನೆ ಅನುಷ್ಠಾನಗೊಳಿಸಿದರೆ ದಲಿತರ ಪಾಲಿಗೆ ಭಾಗ್ಯದ ಬಾಗಿಲು ತೆರೆದಂತಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಿವರಾಮು, ಗುರುಸ್ವಾಮಿ, ನಾಗೇಶ್, ನರಸಿಂಹಮೂರ್ತಿ, ಮಂಜುನಾಥ್, ಲಕ್ಷ್ಮಿ ನಾರಾಯಣರೆಡ್ಡಿ, ಶ್ರೀನಿವಾಸ್, ನಂದೀಶ್, ನಾಗರಾಜು, ಭರತ್, ಶೇಖರ್, ಶಿವಕುಮಾರ್ ಮತ್ತಿತರರು ಹಾಜರಿದ್ದರು.

ಕೋಟ್ ................

ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ನಡೆಯುತ್ತಿರುವ ರೈತರ ಚಳವಳಿ ಮುಂದಾಳತ್ವ ವಹಿಸಿರುವ ರೈತ ಮುಖಂಡ ಪ್ರಕಾಶ್ ತಾವು ಹಿಂಬಾಗಿಲಿನಿಂದ ಯಾರ‍್ಯಾರನ್ನು ಸಂಪರ್ಕಿಸುತ್ತಿದ್ದಾರೆ ಎಂಬುದು ಗೊತ್ತಿದೆ. ಬೆಳಿಗ್ಗೆ ರೈತರ ಜೊತೆ ಪ್ರತಿಭಟನೆಯಲ್ಲಿದ್ದು, ರಾತ್ರಿ ಹಿಂಬಾಲಕರ ಮೂಲಕ ಉಪಮುಖ್ಯಮಂತ್ರಿ, ಮಾಜಿ ಸಂಸದರು ಹಾಗೂ ಶಾಸಕರನ್ನು ಸಂಪರ್ಕಿಸಿ ನಾನು ನಿಮ್ಮ ಜೊತೆ ಇರುತ್ತೇನೆ ಎನ್ನುತ್ತಾರೆ, ಇಂತವರನ್ನು ರೈತರು ನಂಬಬಾರದು.

- ಶೇಖರ್, ದಲಿತ ಮುಖಂಡರು

ಕೋಟ್ ............

ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆಗೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ತ್ವರಿತಗತಿಯಲ್ಲಿ ಪರಿಹಾರ ನೀಡಬೇಕು. ಸರ್ಕಾರ ಭೂಮಿ ಅಡಮಾನವನ್ನಾದರೂ ಇಡಲಿ ಅಥವಾ ಯಾರಿಗಾದರೂ ಮಾರಾಟ ಮಾಡಲಿ ಚಿಂತೆ ಇಲ್ಲ. ನಮ್ಮ ಭೂಮಿಗೆ ನಿಗದಿ ಮಾಡಿರುವ ಹಣ ನಮಗೆ ಕೊಟ್ಟರೆ ಸಾಕು.

-ಎಚ್.ಎಸ್.ಸಿದ್ದರಾಜು, ಮಾಜಿ ಅಧ್ಯಕ್ಷರು, ಬೈರಮಂಗಲ ಸೊಸೈಟಿ

ಕೋಟ್ ........

ಬಿಡದಿ ಟೌನ್ ಶಿಪ್ ಯೋಜನೆಗಾಗಿ ಪ್ರಾರಂಭಿಸಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ತುರ್ತಾಗಿ ಕೈಗೊಂಡು ಪರಿಹಾರ ಹಣ ಮತ್ತು ಅಭಿವೃದ್ಧಿ ಪಡಿಸಿದ ನಿವೇಶನ ನೀಡಬೇಕು. ಜಿಲ್ಲಾಧಿಕಾರಿಗಳು ನಿಗದಿ ಮಾಡಿರುವ ಭೂ ಪರಿಹಾರ ಮೊತ್ತಕ್ಕೆ ನಮ್ಮೆಲ್ಲರ ಒಪ್ಪಿಗೆ ಇದೆ. ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ನಾವು ಪ್ರತಿಭಟನೆ ಹಾದಿ ಹಿಡಿಯುತ್ತೇವೆ.

- ಎಚ್.ಸಿ.ರಾಜಣ್ಣ, ರೈತ ಮುಖಂಡರು

14ಕೆಆರ್ ಎಂಎನ್ 8.ಜೆಪಿಜಿ

ರೈತ ಮುಖಂಡ ಎಚ್.ಸಿ.ರಾಜಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

4.50 ಲಕ್ಷ ಸಾಲಕ್ಕೆ 6 ಎಕರೆ ಭೂಮಿ ಹರಾಜು ಹಾಕಿದ ಬ್ಯಾಂಕ್‌
ಚೆಕ್‌ ಡ್ಯಾಂ ನಿರ್ಮಾಣಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಚಾಲನೆ