ದೊಡ್ಡಬಳ್ಳಾಪುರ: ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ ಎಂದು ಆರಕ್ಷಕ ನಿರೀಕ್ಷಕರಾದ ಎನ್.ಶೋಭಾ ತಿಳಿಸಿದರು.
ಸಾಮಾಜಿಕ ಬದ್ದತೆ ಹಾಗೂ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಮಹಿಳೆಯರ ಪಾತ್ರ ಹೆಚ್ಚಾಗಿರುತ್ತದೆ. ಕೌಟುಂಬಿಕ ಕಲಹದಲ್ಲಿ ಹೆಚ್ಚು ದೌರ್ಜನ್ಯಕ್ಕೊಳಗಾಗುತ್ತಿರುವುದು ಮಹಿಳೆಯರೇ ಆಗಿದ್ದಾರೆ. ಆದ್ದರಿಂದ ನಾವು ಅವರಿಗೆ ಉತ್ತಮ ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲಾ ರಂಗದಲ್ಲೂ ಮುನ್ನೆಲೆಗೆ ಬರುವಂತ ಯೋಜನೆ ರೂಪಿಸಬೇಕಾಗಿದೆ ಎಂದರು.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರೇಮ್‌ಕುಮಾರ್ ಮಾತನಾಡಿ, ಸಂವಿಧಾನದಲ್ಲಿ ಪ್ರತಿಯೊಬ್ಬ ಮಹಿಳೆ ಪುರುಷರಿಗೆ ಸಮಾನವಾದ ಅವಕಾಶಗಳಿದ್ದರೂ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ಮಹಿಳೆಯರೇ ಎಂದು ಹೇಳಬಹುದು. ಆ ನಿಟ್ಟಿನಲ್ಲಿ ನಾವೆಲ್ಲರೂ ಸಮಾಜಮುಖಿ ಕೆಲಸದಲ್ಲಿ ಅವರಿಗೆ ಅವಕಾಶ ನೀಡಿ ಬೆಳಸುವ ಹೊಣೆಗಾರಿಕೆ ನಿಭಾಯಿಸಬೇಕು ಎಂದರು.ಅಭಿನೇತ್ರಿ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ರೇವತಿ ಅನಂತರಾಮ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಸಾಧಕರು, ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕೋಲಾಟ, ಭರತನಾಟ್ಯ, ಜಾನಪದ ನೃತ್ಯ, ಭಜನೆ, ಸಾಮೂಹಿಕ ನೃತ್ಯ ಕಾರ್ಯಕ್ರಮಗಳು ನಡೆದವು.
ದೊಡ್ಡಬಳ್ಳಾಪುರದ ಅಭಿನೇತ್ರಿ ಸಾಂಸ್ಕೃತಿಕ ಸಂಘದಿಂದ ಮಹಿಳಾ ಸಂಭ್ರಮ ಕಾರ್ಯಕ್ರಮ ಕನ್ನಡ ಜಾಗೃತ ಭವನದಲ್ಲಿ ನಡೆಯಿತು.