ಭಾವೈಕ್ಯತೆಗೆ ಸಾಕ್ಷಿ । 5 ದಶಕಗಳಿಂದ ಕಾರಟಗಿಯಲ್ಲಿ ನಡೆಯುತ್ತಿರುವ ಶರಣಬಸವೇಶ್ವರ ಚರಿತಾಮೃತ ಪುರಾಣ
ಕನ್ನಡಪ್ರಭ ವಾರ್ತೆ ಕಾರಟಗಿ
ಪ್ರತಿ ವರ್ಷ ದೇವಸ್ಥಾನದಲ್ಲಿ ಶ್ರಾವಣಮಾಸದ ನಿಮಿತ್ತ ೪೫ ದಿನಗಳ ಕಾಲ ಶರಣಬಸವೇಶ್ವರ ಚರಿತಾಮೃತ ಪುರಾಣ ಪ್ರವಚನ ನಡೆಯುತ್ತದೆ. ಪುರಾಣ ಮಂಗಲ ಮಹೋತ್ಸವ ಮತ್ತು ಜೋಡು ರಥೋತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ಮುಸ್ಲಿಂ ಸಮುದಾಯದವರು ಹೊರಗಡೆಯಿಂದ ಉತ್ಸವಗಳಿಗೆ ಸಹಕಾರ ನೀಡುತ್ತಾ ಬಂದಿದ್ದರು. ಗಂಗೆ ಸ್ಥಳಕ್ಕೆ ಹೋಗಿ ಬರುವ ಬೃಹತ್ ಪಲ್ಲಕ್ಕಿ ಉತ್ಸವದ ವೇಳೆ ಮುಸ್ಲಿಂ ಸಮುದಾಯದವರು ಪಲ್ಲಕಿ, ಕುಂಭ, ಕಳಸ ಹೊತ್ತ ಮಹಿಳೆಯರಿಗೆ, ಡೊಳ್ಳು, ತಾಷೆ ಕುಣಿತದ ಕಲಾವಿದರಿಗೆ ದಾರಿಯೂದ್ದಕ್ಕೂ ಕುಡಿವ ನೀರು, ಪಾನಕದ ಸೇವೆ ಮಾಡುತ್ತಿದ್ದರು. ಆದರೆ ಮುಸ್ಲಿಂರ್‍ಯಾರೂ ಸಹ ದೇವಸ್ಥಾನದೊಳಗೆ, ಪುರಾಣ ಪ್ರವಚನ ಕೇಳುವುದಕ್ಕೆ ದೇವಸ್ಥಾನ ಪ್ರವೇಶ ಮಾಡಿರಲಿಲ್ಲ.
ನಂತರ ಮುಸ್ಲಿಂ ಸಮಾಜದವರು ಪುರಾಣ ಕಟ್ಟೆಯನ್ನು ಏರಿ ಮೊದಲಿಗೆ ಕುರಾನ ಪಠಣ ಮಾಡಿದರು. ಇದಕ್ಕೆ ನೆರೆದಿದ್ದ ನೂರಾರು ಜನರು ಸಾಕ್ಷಿಯಾದರು. ಕಾರಟಗಿ ಇತಿಹಾಸದಲ್ಲಿಯೇ ಮೊದಲ ಬಾರಿ ಇಂಥ ಅಪರೂಪದ ಕ್ಷಣವನ್ನು ಕಣ್ಣಾರೆ ಕಂಡು ಎಲ್ಲರೂ ಭಾವೈಕ್ಯತೆ ಸಾರಿದರು. ಪುರಾಣ ಪ್ರವಚನಕಾರ ವೇ.ಮೂ. ಪಂಡಿತ ಸಿದ್ದೇಶ್ವರ ಶಾಸ್ತಿ, ಸಂಗೀತಕಾರ ಮನೋಹರ್ ಪಿ.ಹಿರೇಮಠ, ಚಂದ್ರಯ್ಯಸ್ವಾಮಿ ಹಿರೇಮಠ ಮತ್ತು ಪುರಾಣ ಸಮಿತಿ ಮುಖ್ಯಸ್ಥ ಕುಳಗಿ ಗುಂಡಪ್ಪ, ವೇ.ಮರಳಸಿದ್ದಯ್ಯಸ್ವಾಮಿ ಅವರಿಗೆ ಸನ್ಮಾನಿಸಿದರು.
ಶ್ರೀ ಶರಣಬಸವೇಶ್ವರರು ಗುಲಬರ್ಗಾದ ಖಾಜಾ ಬಂದೇನವಾಜ್ ದರ್ಗಾಕ್ಕೆ ಭೇಟಿ ನೀಡಿದ ವೇಳೆ ಅಲ್ಲಿದ್ದ ಮುಸ್ಲಿಂ ಸಮಾಜದವರೆಲ್ಲ ಸೇರಿ ದರ್ಗಾ ಪ್ರವೇಶಕ್ಕೆ ನಿರಾಕರಿಸಿ ಅವರನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಎಲ್ಲರೂ ಗಂಧ ಪೂಜೆಯಲ್ಲಿ ಪಾಲ್ಗೊಂಡರು. ಈ ವೇಳೆ ದರ್ಗಾದಲ್ಲಿ ಶ್ರೀಶರಣಬಸಪ್ಪ ಪ್ರತ್ಯಕ್ಷವಾಗಿ ಇಲ್ಲಿ ಗಂಧ ಲೇಪನ ಮಾಡಿ, ಅಲ್ಲಿ ಗಂಧ ಲೇಪನ ಮಾಡಿ ಎಂದರಂತೆ. ಆಗ ಅಲ್ಲಿದ್ದ ಎಲ್ಲರೂ ಎಚ್ಚೆತ್ತುಕೊಂಡು ಪವಾಡಪುರುಷ ಶರಣಬಸಪ್ಪನವರೊಂದಿಗೆ ನಡೆದುಕೊಂಡ ರೀತಿಗೆ ಕ್ಷಮಾಪಣೆ ಕೇಳಿ ಅವರಿಂದ ಪೂಜೆ ಮಾಡಿಸಿ ಭಾವೈಕ್ಯತೆ ಮೆರೆದರಂತೆ. ಅಂದಿನಿಂದ ಇಂದಿನವರೆಗೂ ದರ್ಗಾಕ್ಕೆ ಹಿಂದೂ-ಮುಸ್ಲಿಂ ಸಮುದಾಯದವರು ಒಂದಾಗಿ ಭೇಟಿ ನೀಡಿ ದರ್ಶನ ಮಾಡುವ ಪ್ರತೀತಿ ಇದೆ ಎಂದು ಪುರಾಣದ ಸನ್ನಿವೇಶವನ್ನು ಪುರಾಣ ಪ್ರವಚನಕಾರ ಪಂಡಿತ್ ಸಿದ್ದೇಶ್ವರ ಶಾಸ್ತಿ ಪ್ರಸ್ತುತ ಪಡಿಸಿದರು.