ನಾಡಗೀತೆಗೆ ಬೌದ್ಧ ಪದ ಸೇರ್ಪಡೆಗೆ ಶಿಫಾರಸು

KannadaprabhaNewsNetwork |  
Published : Jul 15, 2026, 02:00 AM IST
ಭುವನೇಶ್ವರಿ | Kannada Prabha

ಸಾರಾಂಶ

ನಾಡಗೀತೆಯಲ್ಲಿ ಇರುವ ‘ಪಾರಸಿಕ ಜೈನರುದ್ಯಾನ’ ಎಂಬ ಸಾಲನ್ನು ಪರಿಷ್ಕರಿಸಿ ‘ಬೌದ್ಧ’ ಪದವನ್ನೂ ಒಳಗೊಂಡಂತೆ ‘ಪಾರಸಿಕ ಜೈನ ಬೌದ್ಧರುದ್ಯಾನ’ ಎಂದು ಮಾರ್ಪಾಡು ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಒಳಗೊಂಡ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ಸರ್ವಾನುಮತದಿಂದ ಶಿಫಾರಸು ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಡಗೀತೆಯಲ್ಲಿ ಇರುವ ‘ಪಾರಸಿಕ ಜೈನರುದ್ಯಾನ’ ಎಂಬ ಸಾಲನ್ನು ಪರಿಷ್ಕರಿಸಿ ‘ಬೌದ್ಧ’ ಪದವನ್ನೂ ಒಳಗೊಂಡಂತೆ ‘ಪಾರಸಿಕ ಜೈನ ಬೌದ್ಧರುದ್ಯಾನ’ ಎಂದು ಮಾರ್ಪಾಡು ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಒಳಗೊಂಡ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ಸರ್ವಾನುಮತದಿಂದ ಶಿಫಾರಸು ಮಾಡಿದೆ.ರಾಷ್ಟ್ರಕವಿ ಕುವೆಂಪು ಅವರು 1924ರಲ್ಲಿ ಬರೆದಿದ್ದ ನಾಡಗೀತೆಯ ಮೊದಲ ಕರಡು ಪ್ರತಿಯಲ್ಲಿ ‘ಬೌದ್ಧರುದ್ಯಾನ’ ಎಂಬ ಪದವಿತ್ತು. ಆದರೆ, 1930ರಲ್ಲಿ ಅವರ ‘ಕೊಳಲು’ ಕವನ ಸಂಕಲನದಲ್ಲಿ ಈ ಹಾಡು ಪ್ರಕಟವಾದಾಗ ಅದು ‘ಜೈನರುದ್ಯಾನ’ ಎಂದಾಗಿತ್ತು. ಬೌದ್ಧ ಧರ್ಮಕ್ಕೆ ಇರುವ ಐತಿಹಾಸಿಕ ಮಹತ್ವವನ್ನು ಪರಿಗಣಿಸಿ, ನಾಡಗೀತೆಯಲ್ಲಿ ಮತ್ತೆ ಬೌದ್ಧ ಪದವನ್ನು ಸೇರಿಸಬೇಕು ಎಂದು ಕೋರಿ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರು 2025ರ ನವೆಂಬರ್‌ನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.

ಈ ಪತ್ರದ ಹಿನ್ನೆಲೆಯಲ್ಲಿ ಅಂದಿನ ಸಿಎಂರ ಸೂಚನೆಯಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 8 ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇದರ ಪದನಿಮಿತ್ತ ಅಧ್ಯಕ್ಷರಾಗಿದ್ದು, ಸಾಹಿತಿಗಳಾದ ಹಂಪ ನಾಗರಾಜಯ್ಯ, ಕುವೆಂಪು ಅವರ ಅಳಿಯ ಡಾ. ಕೆ. ಚಿದಾನಂದ, ಎಸ್.ಜಿ. ಸಿದ್ದರಾಮಯ್ಯ, ಆಶಾ ದೇವಿ, ದ್ವಾರಕಾನಾಥ್ ಚೊಕ್ಕ, ಮೂಡ್ನಾಕೂಡು ಚಿನ್ನಸ್ವಾಮಿ, ಕಾಳೇಗೌಡ ನಾಗವಾರ ಹಾಗೂ ಬರಗೂರು ರಾಮಚಂದ್ರಪ್ಪ ಅವರು ಸಮಿತಿಯ ಸದಸ್ಯರಾಗಿದ್ದರು.

ಬರಗೂರು ರಾಮಚಂದ್ರಪ್ಪ ಹೊರತುಪಡಿಸಿದಂತೆ ಉಳಿದ ಎಲ್ಲರೂ ಸಭೆ ಸೇರಿ ಸುದೀರ್ಘವಾಗಿ ಚರ್ಚೆ ನಡೆಸಿ ಬೌದ್ಧರುದ್ಯಾನ ಪದ ಸೇರ್ಪಡೆ ಶಿಫಾರಸು ಮಾಡುವ ತೀರ್ಮಾನ ಕೈಗೊಂಡಿದ್ದರು.ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕುವೆಂಪು ರಚಿತ ಗೀತೆಯ ಮೊದಲ ಕರಡಿನಲ್ಲಿ ಬೌದ್ಧ ಪದವನ್ನು ಬಳಸಿದ್ದರಿಂದ ಹಾಗೂ ತಮ್ಮ ಇತರೆ ಸಾಹಿತ್ಯದಲ್ಲಿ ಬುದ್ಧನ ಕುರಿತು ಗೌರವ ವ್ಯಕ್ತಪಡಿಸಿರುವುದರಿಂದ, ಈ ಪದ ಸೇರ್ಪಡೆಯು ಅವರ ಆಶಯಗಳಿಗೆ ವಿರುದ್ಧವಾಗಿಲ್ಲ. ಹೊಸ ಪದದ ಸೇರ್ಪಡೆಯಿಂದ ಹಾಡಿನ ಉದ್ದ ಹೆಚ್ಚಾಗುವುದಿಲ್ಲ ಎಂಬುದನ್ನು ಸಮಿತಿಯ ಸಭೆಯಲ್ಲಿ ಖಚಿತಪಡಿಸಿಕೊಳ್ಳಲಾಗಿದೆ ಎಂದರು.

‘ಬೌದ್ಧ’ ಪದವನ್ನು ಸೇರಿಸುವುದರಿಂದ ನಾಡಗೀತೆಯ ಮೂಲ ಲಯಕ್ಕೆ ಯಾವುದೇ ಭಂಗ ಬರುವುದಿಲ್ಲ ಎಂಬುದನ್ನು ಕೂಡ ಸಮಿತಿ ಮನಗಂಡಿದೆ. ಈ ಎಲ್ಲಾ ಅಂಶಗಳನ್ನು ಒಳಗೊಂಡ ಸಭೆಯ ನಡಾವಳಿಗಳನ್ನು ಸಿದ್ಧಪಡಿಸಿ, ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಕೆ ಮಾಡಲಾಗಿದೆ. ಈ ಶಿಫಾರಸಿನ ಕುರಿತು ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಕೆರೆ ಹೊಳೆತ್ತುವ ಕಾಮಗಾರಿ ಭೂಮಿ ಪೂಜೆ
ನಾಳೆ ರೈತ ಜಾಗೃತ ಸಮಾವೇಶ: ಡಾ. ವಾಸುದೇವ ಮೇಟಿ