ಕನ್ನಡಪ್ರಭ ವಾರ್ತೆ ಹೊಸದುರ್ಗ
ತಂತ್ರಜ್ಞಾನ ಎಂಬುದು ಕೇವಲ ಪಟ್ಟಣಿಗರ ಸ್ವತ್ತಲ್ಲ ಗ್ರಾಮೀಣ ಭಾಗದಲ್ಲೂ ಅದನ್ನು ಸಮರ್ಥವಾಗಿ ಬಳಸಬಲ್ಲ ಪ್ರತಿಭೆಗಳಿವೆ ಎಂಬುದನ್ನು ತಾಲೂಕಿನ ಗೂಳಿಹಟ್ಟಿ ಗ್ರಾಮದ ಶಶಿಕಲಾ ಕೃಷ್ಣಮೂರ್ತಿ ದಂಪತಿಯ ಸುಪುತ್ರ ಜಿ.ಕೆ.ಯುವರಾಜ್ ಎಂಬ ವಿದ್ಯಾರ್ಥಿಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬ್ಯಾಸೆಂಟ್ ಉದ್ಯಾನವನದಲ್ಲಿ 8 ದಿನಗಳ ಕಾಲ ನಡೆದ ವಿಶ್ವ ದಾಖಲೆಯ ರಾಜ್ಯ ಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿಯಲ್ಲಿ ಭಾಗವಹಿಸಿ ಪ್ರತಿಷ್ಠಿತ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯ ಬುಕ್ ಆಫ್ ರೆಕಾರ್ಡ್ಸ್ ಸ್ಥಾನ ಪಡೆದು ದಾಖಲೆ ಬರೆದು ಹೊಸದುರ್ಗದ ಕೀರ್ತಿ ಹೆಚ್ಚಿಸಿದ್ದಾನೆ.ಬಹಳಷ್ಟು ಮಕ್ಕಳಿಗೆ ನಾನು ವಿಜ್ಞಾನಿಯಾಗಿ ಹೊಸ ಹೊಸ ಆವಿಷ್ಕಾರ ಮಾಡಬೇಕೆಂಬ ಕನಸಿರುತ್ತದೆ. ಆದರೆ, ಗುಣಮಟ್ಟದ ಶಿಕ್ಷಣ, ಆರ್ಥಿಕ ಸಮಸ್ಯೆ, ಸೌಕರ್ಯಗಳ ಕೊರತೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ವಿಜ್ಞಾನದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳು ವಂಚಿತರಾಗದೆ ಉತ್ತಮ ಶಿಕ್ಷಣ ಪಡೆದು ವಿಜ್ಞಾನಿ ಆಗಬೇಕೆಂಬ ಆಶಯದೊಂದಿಗೆ ಹುಲಿಕಲ್ ನಟರಾಜ್ ಸಹಯೋಗದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನಾನು ವಿಜ್ಞಾನಿ ಎಂಬ 8 ದಿನಗಳ ತರಬೇತಿ ಶಿಬಿರವನ್ನು ಹಮ್ಮಿಕೊಂಡಿತ್ತು. ಈ ಶಿಬಿರ ಅ.1ರಂದು ಆರಂಭವಾಗಿ 9ರಂದು ಯಶಸ್ವಿಯ ತೆರೆ ಕಂಡಿತು. ಆರ್ಯಭಟ ಕರ್ನಾಟಕ, ಭಾರತ್ ಡೊಮ್ ಕರ್ನಾಟಕ, ಇಸ್ರೋ ಭಾರತ ಸರ್ಕಾರ, ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್, 317 ಎಫ್, ಭಾರತ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ, ಭಾರತ ಸೇವಾ ದಳ ಕರ್ನಾಟಕ, ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆ ಮತ್ತು ಕಲೆಗಳ ಪ್ರಗತಿ ಸಂಸ್ಥೆ ಇವರ ಆಶ್ರಯದಲ್ಲಿ ನಡೆದ ನಾನು ವಿಜ್ಞಾನಿ -2025 ಎಂಬ ತರಬೇತಿ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 160 ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಿದ್ದು ಈ ಶಿಬಿರ ಅನೇಕ ದಾಖಲೆಗಳಿಗೆ ಸಾಕ್ಷಿಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಯುವರಾಜ್ ಎಂಬ ವಿದ್ಯಾರ್ಥಿ ವಿಶ್ವ ದಾಖಲೆಯ ರಾಜ್ಯಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿಯಲ್ಲಿ ಭಾಗವಹಿಸಿ, ಪ್ರತಿಷ್ಠಿತ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದು, ನಿಮ್ಮ ಪರಿಶ್ರಮ, ಸೃಜನಶೀಲತೆ ಮತ್ತು ವೈಜ್ಞಾನಿಕ ಸ್ಫೂರ್ತಿ ಅಪಾರ. ಉತ್ಸಾಹದಿಂದ ಟೆಲಿಸ್ಕೋಪ್ ವಿನ್ಯಾಸಗೊಳಿಸಿ, ಸಿದ್ಧಪಡಿಸುವ ಮೂಲಕ ತಾಂತ್ರಿಕ ಕೌಶಲ್ಯ ಮತ್ತು ಬ್ರಹ್ಮಾಂಡದ ವಿಸ್ಮಯಗಳನ್ನು ಆವಿಷ್ಕರಿಸಲು ಅಪಾರ ಕುತೂಹಲ ತೋರಿಸಿದ್ದೀರಿ. ಈ ಸಾಧನೆಯು ನಿಮ್ಮ ಆವಿಷ್ಕಾರದ ಚಿಂತನೆ, ತಂಡದ ಪರಿಶ್ರಮ ಮತ್ತು ಶ್ರೇಷ್ಠತೆ ಸಾಧಿಸುವ ಬದ್ಧತೆ ತೋರಿಸುತ್ತದೆ. ನಿಮ್ಮ ಸಾಧನೆ ಪಥ ಮುಂದುವರಿಯಲಿ ಎಂದು ಕರ್ನಾಟಕದ ರಾಜ್ಯಪಾಲರಾದ ತ್ಯಾವರ್ ಚಂದ್ ಗೆಹಲೋಟ್, ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಕೆ.ಎಸ್. ಕಿರಣ್ ಕುಮಾರ್ ಅವರಿಂದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಗಿದೆ.