ರಾಮಕೃಷ್ಣ ದಾಸರಿ
ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿದ್ದರೂ ಸಹ ಅದನ್ನು ಉಲ್ಲಂಘಿಸಿ ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಆಡಳಿತ ಮಂಡಳಿಯವರು ಅಕ್ರಮ / ಅನಧಿಕೃತ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿ, ನೇಮಕಾತಿ ಆದೇಶಗಳನ್ನು ಹೊರಡಿಸಿರುವುದರ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ನಾಲ್ಕು ಜನರ ತನಿಖಾ ತಂಡವನ್ನು ರಚನೆ ಮಾಡಲಾಗಿದ್ದು, ಎರಡು ದಿನಗಳಲ್ಲಿ ಕೃಷಿ ವಿವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಕೆಗೆ ಸೂಚನೆ ನೀಡಲಾಗಿದೆ.
ಏನಿದು ಪ್ರಕರಣ ?: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಕಳೆದ 2023ರ ಅ.18ರಂದು 75 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಕೃಷಿವಿವಿ ಹಿಂದಿನ ಕುಲಪತಿ,ಪ್ರಾಧ್ಯಾಪಕರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಬೆಂಗಳೂರಿನ ಜಿಕೆವಿಕೆ ಕೇಂದ್ರದ ಅಧಿಕಾರಿ ಗಳು ಸೇರಿಕೊಂಡು ಆರ್ಥಿಕ ಇಲಾಖೆಯ ಅನುಮತಿ ಪಡೆಯದೆ, ನಿಯಮಗಳನ್ನು ಉಲ್ಲಂಘಿಸಿ, ಅಧಿಸೂಚನೆಯ ಪ್ರಕಾರ ಲಿಖಿತ ಪರೀಕ್ಷೆ, ಸಂದರ್ಶನ, ಅಂಕಪಟ್ಟಿ ಹಾಗೂ ಮೀಸಲಾತಿ ರೋಸ್ಟರ್ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡದೇ ಪ್ರತಿಯೊಬ್ಬ ಅಭ್ಯರ್ಥಿಗಳಿಂದ ತಲಾ 40 ರಿಂದ 50 ಲಕ್ಷ ರು.ವರೆಗೆ ಲಂಚ ಪಡೆದಿ ದ್ದಾರೆ ಎಂದು ಆರೋಪಗಳು ದಟ್ಟವಾಗಿ ಕೇಳಿಬರುತ್ತಿದ್ದ ಸಮಯದಲ್ಲಿ ಕಳೆದ ತಿಂಗಳು ನಿವೃತ್ತಿ ಹೊಂದಿದ ಕೃಷಿ ವಿವಿ ಕುಲಸಚಿವರಾಗಿದ್ದ ಡಾ.ಎಂ.ಹನುಮಂತಪ್ಪ ಅವರು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರು ವ್ಯವಸ್ಥಾಪನಾ ಮಂಡಳಿ ಸಭೆಯನ್ನು ನಡೆಸಿ ಅನುಮೋದನೆ ಪಡೆದು, ಪ್ರಭಾರಿ ಕುಲಸಚಿವರನ್ನು ನೇಮಿಸಿ ರಾತ್ರೋರಾತ್ರಿ ನೇಮಕಾತಿ ಆದೇಶ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಎಂಸಿಸಿ ಉಲ್ಲಂಘಿಸಿ ನಡೆದಿರುವ ನೇಮಕಾತಿ ಪ್ರಕ್ರಿಯೇ ಕುರಿತು ರವಿಕುಮಾರ ಎಂಬುವವರು ಜಿಲ್ಲಾಡಳಿತಕ್ಕೆ ದೂರನ್ನು ಸಹ ಸಲ್ಲಿಸಿದ್ದರು. ಇದನ್ನಾಧರಿಸಿ ಜಿಲ್ಲಾಧಿಕಾರಿ ಪೂವಿತಾ ಎಸ್.ಅವರು ನಾಲ್ಕು ಜನ ಅಧಿಕಾರಿ-ಸಿಬ್ಬಂದಿಯನ್ನು ತನಿಖಾ ತಂಡವನ್ನು ರಚನೆ ಮಾಡಿ, ಪರಿಶೀಲನೆ ನಡೆಸಿ ವರದಿ ಸಲ್ಲಿಕೆಗೆ ಆದೇಶಿಸಿದ್ದಾರೆ.ತಂಡದಲ್ಲಿ ಯಾರಿದ್ದಾರೆ?: ತನಿಖಾ ಅಧಿಕಾರಿಗಳಾಗಿ ಲಿಂಗಸುಗೂರು ಸಹಾಯಕ ಆಯುಕ್ತ ನಾಗೇಂದ್ರ ಬಾಬು ಕುಮಾರ, ಸಹಾಯಕ ತನಿಖಾ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೃಷ್ಣ ಶಾವಂತಗೇರಾ, ಸಹಾಯಕರಾಗಿ ಡಿಸಿ ಕಚೇರಿ ಶಿರಸ್ತಿದಾರ ಸುಗೂರೇಶ್ ದೇಸಾಯಿ, ಪ್ರ.ದ.ಸ ಸತ್ಯ ನಾರಾಯಣ ಅವರನ್ನು ನೇಮಕ ಮಾಡಿದ್ದು, ಈ ತಂಡವು ಬುಧವಾರ ಮತ್ತು ಗುರುವಾರ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ತೆರಳಿ ದೂರಿನಾಂಶಗಳನ್ನಾಧರಿಸಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ವಿವರವಾದ ತನಿಖಾ ವರದಿಯನ್ನು ಸಲ್ಲಿಸುವಂತೆ ಆದೇಶ ಪ್ರತಿಯಲ್ಲಿ ಡಿಸಿ ತಿಳಿಸಿದ್ದಾರೆ.
ಕೃಷಿ ವಿವಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಅವಧಿಯಲ್ಲಿ ನೇಮಕಾತಿ ಆದೇಶಗಳನ್ನು ಹೊರಡಿಸಿರುವ ಕುರಿತು, ನೇಮಕಾತಿ ಪ್ರಕ್ರಿಯೇಯನ್ನು ಕೈಗೊಂಡಿರುವ ಹಿನ್ನೆಲೆ, ಅನುಸರಿಸಲಾದ ನಿಯಮಗಳು ಮತ್ತು ಕಾರ್ಯವಿಧಾನಗಳು,ನೇಮಕಾತಿಗೆ ಸಂಬಂಧಿಸಿದ ಅನುಮೋದನೆಗಳು ಹಾಗೂ ಈ ಆದೇಶ ಗಳನ್ನು ಹೊರಡಿಸಿರುವುದರಿಂದ ಎಂಸಿಸಿ ಉಲ್ಲಂಘನೆಯಾಗಿದೆಯೇ ಅಥವಾ ಇಲ್ಲವೇ ಎಂಬುವುದರ ಕುರಿತು ಸಮಗ್ರ ಪರಿಶೀಲನೆಯ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಮೂಲ ದಾಖಲೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾಗಳಿಂದ ಅಗತ್ಯ ಮಾಹಿತಿ ಹಾಗೂ ಸ್ಪಷ್ಟೀಕರಣ ವನ್ನು ಪಡೆದು, ವಾಸ್ತವಾಂಶಗಳ ಆಧಾರದ ಮೇಲೆ ಸಮಗ್ರ ತನಿಖೆ ಕೈಗೊಂಡು, ಅಭಿಪ್ರಾಯ ಹಾಗೂ ಶಿಫಾರಸ್ಸುಗಳೊಂದಿಗೆ ಸವಿಸ್ತಾರವಾದ ತನಿಖಾ ವರದಿಯನ್ನು ಸಲ್ಲಿಸುವಂತೆ ತನಿಖಾ ತಂಡಕ್ಕೆ ಡಿಸಿ ಆದೇಶಿಸಿದ್ದಾರೆ.