ಜನಗಣತಿ ಕಾರ್ಯ ಯಶಸ್ವಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ: ಜಿಲ್ಲಾಧಿಕಾರಿ ಪೂವಿತಾ

KannadaprabhaNewsNetwork |  
Published : Nov 05, 2026, 01:15 AM IST
04ಕೆಪಿಆರ್‌ಸಿಆರ್ 01:  | Kannada Prabha

ಸಾರಾಂಶ

ಜನಗಣತಿ- 2027ರ 2ನೇ ಹಂತದ ಜನಸಂಖ್ಯೆ ಗಣತಿ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳು. ಚಾರ್ಜ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗಾಗಿ ಎರಡು ದಿನಗಳ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ರಾಯಚೂರು

ಭಾರತದ ಅತ್ಯಂತ ಪ್ರಮುಖ ಕಾರ್ಯಗಳಲ್ಲಿ ಜನಗಣತಿ ಕಾರ್ಯವೂ ಒಂದಾಗಿದ್ದು ದೇಶದ ಅಭಿವೃದ್ಧಿಗೆ ಅಗತ್ಯವಿರುವ ಮಹತ್ವದ ದಾಖಲೆ ಹಾಗೂ ಮಾಹಿತಿ ಯನ್ನು ಒದಗಿಸುವಲ್ಲಿ ಜನಗಣತಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ನಿಯೋಜಿತ ಅಧಿಕಾರಿ ಮತ್ತು ಸಿಬ್ಬಂದಿ ಸಮಗ್ರವಾದ ಮಾಹಿತಿ ತಿಳಿದುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು.

ಸ್ಥಳೀಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜನಗಣತಿ- 2027ರ 2ನೇ ಹಂತದ ಜನಸಂಖ್ಯೆ ಗಣತಿ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳು. ಚಾರ್ಜ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದ ಅವರು. ಈ ಬಾರಿ ದೇಶದಲ್ಲಿ ಪ್ರಥಮ ಬಾರಿಗೆ ಡಿಜಿಟಲ್ ಜನಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಈ ಹಿಂದೆ 2011ರಲ್ಲಿ ಕೈಗೊಂಡ ಜನಗಣತಿಯನ್ನು ಮ್ಯಾನುವಲ್ ವಿಧಾನದಲ್ಲಿ ನಡೆಸಲಾಗಿತ್ತು. ಆದರೆ ಈ ಬಾರಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಜನಗಣತಿ ನಡೆಯುತ್ತಿರುವುದರಿಂದ ಕೆಳಹಂತದ ಸಿಬ್ಬಂದಿಗಳಿಂದ ಹಿಡಿದು ಮೇಲ್ಮಟ್ಟದ ಅಧಿಕಾರಿಗಳವರೆಗೆ ಎಲ್ಲರೂ ಜವಾಬ್ದಾರಿಯಿಂದ ಹಾಗೂ ಪ್ರಾಮಾಣಿಕವಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಮಾತ್ರ ಜನಗಣತಿ ಕಾರ್ಯ ಯಶಸ್ವಿಯಾಗಲು ಸಾಧ್ಯ. ಆರಂಭದಲ್ಲಿ ಈ ಕಾರ್ಯ ಸ್ವಲ್ಪ ಕಷ್ಟಕರವೆನಿಸಬಹುದು. ನಂತರ ಸುಲಭವಾಗಲಿದೆ. ಪ್ರತಿಯೊಬ್ಬರೂ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ, ನಿಖರವಾಗಿ ಮತ್ತು ಪಾರದರ್ಶಕವಾಗಿ ಮಾಹಿತಿಯನ್ನು ಸಂಗ್ರಹಿಸಬೇಕು. ಈ ಕಾರ್ಯದಲ್ಲಿ ಯಾರೂ ನಿರ್ಲಕ್ಷ್ಯ ತೋರಬಾರದು.

ಎರಡು ದಿನಗಳ ಕಾಲ ನಡೆಯುವ ಈ ತರಬೇತಿಯನ್ನು ಎಲ್ಲರೂ ಸಂಪೂರ್ಣವಾಗಿ ತಿಳಿದುಕೊಂಡಾಗ ಮುಂದಿನ ದಿನಗಳಲ್ಲಿ ಜನಗಣತಿ ಕಾರ್ಯವನ್ನು ಸುಗಮವಾಗಿ ಹಾಗೂ ಯಶಸ್ವಿಯಾಗಿ ನಿರ್ವಹಿಸಲು ಅನುಕೂಲವಾಗಲಿದೆ. ಪ್ರತಿ ಮನೆಯ ಕುಟುಂಬದ ಸದಸ್ಯರ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಬೇಕೆಂದು ಹೇಳಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರು ಮಾತನಾಡಿ, ಪ್ರತಿ 10 ವರ್ಷಗಳಿಗೊಮ್ಮೆ ನಡೆಯುವ ಈ ಜನಗಣತಿ ಕಾರ್ಯ ತಮಗೆ ವಿಶೇಷ ಅನುಭವ ನೀಡಲಿದೆ, ಇದನ್ನು ಎಲ್ಲರೂ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಇನ್ನೂ ಸಮಯ ಇರುವುದರಿಂದ ತಮಗೆ ಯಾವುದೇ ಸಮಸ್ಯೆಗಳಿದ್ದರೆ ಜಿಲ್ಲಾಧಿಕಾರಿಗಳು ಮತ್ತು ನಮ್ಮ ಗಮನಕ್ಕೆ ತರಬೇಕೆಂದು ಹೇಳಿದರು.

ಜನಗಣತಿ ನೋಡಲ್ ಅಧಿಕಾರಿಗಳಾದ ಸುದರ್ಶನ್ ಹಾಗೂ ಬೇಗಂ ಅವರು ಜನಗಣತಿ ಕುರಿತು ಸವಿವರವಾದ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೋಪಾಲ ಗೆಣ್ಣೂರ. ಲಿಂಗಸುಗೂರಿನ ಸಹಾಯಕ ಆಯುಕ್ತರಾದ ನಾಗೇಂದ್ರ ಪ್ರಸಾದ್. ಜಿಪಂ ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕ ಬಸವಣ್ಣೆಪ್ಪ ಕಲಶೆಟ್ಟಿ. ಜಿಲ್ಲಾ ಜನಗಣತಿ ತರಬೇತಿ ಅಧಿಕಾರಿ ಸದಾಶಿವಪ್ಪ. ಜಿಲ್ಲೆಯ ಎಲ್ಲಾ ತಾಲೂಕಿನ ತಹಸೀಲ್ದಾರರು. ಚಾರ್ಜಾ ಅಧಿಕಾರಿ ಹಾಗೂ ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್ ಪ್ರಕರಣದಲ್ಲಿ ಎಚ್ಡಿಕೆ ತನಿಖೆಗೆ ಸಹಕರಿಸಲಿ
ಕಿತ್ತೂರು ತಾಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರೊ.ಜಿ.ಸಿ.ಕೋಟಗಿ ಸರ್ವಾಧ್ಯಕ್ಷ