ಹಾವೇರಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಹಿಡಿದಿದ್ದ ಜಿಟಿಜಿಟಿ ಮಳೆ ಮಂಗಳವಾರ ತಗ್ಗಿದೆ. ಆದರೆ, ಮಲೆನಾಡು ಭಾಗದಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಹರಿದಿರುವ ನದಿಗಳ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.ವರದಾ, ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳು ಮೈದುಂಬಿ ಹರಿಯುತ್ತಿವೆ. ವರದಾ ನದಿ ನೀರಿನ ಮಟ್ಟ ಇನ್ನೂ ತಗ್ಗಿಲ್ಲ. ಇದರಿಂದ ತಾಲೂಕಿನ ಹೊಸರಿತ್ತಿಯಲ್ಲಿರುವ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮೂಲ ಸಂಸ್ಥಾನ ಮಠ ಜಲಾವೃತಗೊಂಡಿದೆ. ಮಠದ ಸುತ್ತ ವರದಾ ನದಿ ನೀರು ತುಂಬಿದ್ದು, ಒಳನುಗ್ಗುವ ಆತಂಕ ಎದುರಾಗಿದೆ. ವರದಾ ನದಿ, ಧರ್ಮಾ ನದಿ ಅಬ್ಬರಕ್ಕೆ ನೂರಾರು ಎಕರೆ ಜಮೀನು ಮುಳುಗಡೆಯಾಗಿದೆ. ಬೆಳವಗಿ, ಕೋಲೂರು, ನಾಗನೂರು, ಹೊಳಲು, ಹೊಸರಿತ್ತಿ ಮುಂತಾದ ಗ್ರಾಮಗಳ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಹತ್ತಿ, ಮೆಕ್ಕೆಜೋಳ, ತರಕಾರಿ ಬೆಳೆಗಳು ನೀರಿನಲ್ಲಿ ಮುಳುಗಿ ಕೊಳೆಯತೊಡಗಿದೆ. ನಾಗನೂರು-ಕೂಡಲ, ಕರ್ಜಗಿ, ಚಿಕ್ಕಮುಗದೂರು, ಕಳಸೂರು-ಕೋಳೂರು, ಚಿಕ್ಕಮುಗದೂರು-ಕರ್ಜಗಿ, ಹಿರೇಮರಳಿಹಳ್ಳಿ-ಕೊಣತಂಬಿಗಿ, ಆಡೂರು-ತುಮರಿಕೊಪ್ಪ, ಅಂತರವಳ್ಳಿ-ಲಿಂಗದಹಳ್ಳಿ, ರಟ್ಟೀಹಳ್ಳಿ-ಯಲಿವಾಳ ಸೇರಿದಂತೆ ೧೦ಕ್ಕೂ ಹೆಚ್ಚು ಕಡೆ ಮುಳುಗಡೆಯಾಗಿದ್ದ ಸೇತುವೆ ಇನ್ನೂ ತೆರವಾಗದ್ದರಿಂದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.೫೨೬ ಮನೆ ಹಾನಿ: ಜಿಲ್ಲೆಯಲ್ಲಿ ಮಳೆಯಿಂದ ಈವರೆಗೆ ಒಟ್ಟು ೩ ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ ಎರಡು ಮನೆ ಸಂಪೂರ್ಣ, ೭ ಮನೆಗಳಿಗೆ ತೀವ್ರಹಾನಿ, ೫೧೬ ಮನೆಗಳು ಭಾಗಶಃ ಸೇರಿದಂತೆ ೫೨೬ ಮನೆಗಳಿಗೆ ಹಾನಿಯಾಗಿವೆ. ನಿರಂತರ ಮಳೆಯಿಂದಾಗಿ ಹಾವೇರಿ-ಶಿರಸಿ ಸಂಪರ್ಕ ಕಲ್ಪಿಸುವ ರಾಷ್ಟ್ರಿಯ ಹೆದ್ದಾರಿಯಲ್ಲಿ ಹಾನಗಲ್ಲ ತಾಲೂಕಿನ ಸಮ್ಮಸಗಿ ಬಳಿ ಗುಡ್ಡ ಕುಸಿತವಾಗಿದೆ. ಎಕ್ಕುಂಬಿ-ಮೊಳಕಾಲ್ಮೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಸಮ್ಮಸಗಿ ಬಳಿ ರಸ್ತೆ ಮೇಲೆ ಗುಡ್ಡಿ ಕುಸಿತ ಉಂಟಾಗಿತ್ತು. ಬಳಿಕ ಅಧಿಕಾರಿಗಳು ಜೆಸಿಬಿ ಮೂಲಕ ಮಣ್ಣ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಪ್ರವಾಹ ಸ್ಥಿತಿ ಇರುವ ಗ್ರಾಮಗಳಿಗೆ ಮಂಗಳವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.