ಯಲ್ಲಾಪುರ: ತಾಲೂಕಿನ ಮಾಗೋಡಿನಲ್ಲಿ ಸಾಫ್ಟ್‌ವೇರ್ ಟೆಕ್ ಪಾರ್ಕ್ ನಿರ್ಮಾಣದ ಕುರಿತು ಸೋಮವಾರ ಜನಾಭಿಪ್ರಾಯ ಸಂಗ್ರಹಿಸಲಾಯಿತು.
ಅನಂತಮೂರ್ತಿ ಚಾರಿಡೇಬಲ್ ಟ್ರಸ್ಟ್ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಮಾತನಾಡಿ, ಗ್ರಾಮೀಣ ಭಾಗದಲ್ಲೂ ಐಟಿ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಉದ್ಯೋಗ ಸೃಷ್ಟಿ ಮಾಡಲು ಅವಕಾಶವಿದೆ. ಹಿಂದೆ ಕೆಪಿಸಿಗೆ ಸೇರಿದ್ದ ಮಾಗೋಡ ಕಾಲನಿಯ ಜಾಗ ಈಗ ಮರಳಿ ಅರಣ್ಯ ಇಲಾಖೆಗೆ ಸೇರಿದೆ. ಅದನ್ನು ಕೆಐಎಡಿಬಿ ವ್ಯಾಪ್ತಿಗೆ ಹಸ್ತಾಂತರಿಸಿ, ಟೆಕ್ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಸೌಲಭ್ಯಗಳನ್ನು ನೀಡುವಂತೆ ಪಕ್ಷಾತೀತವಾಗಿ ಎಲ್ಲರೂ ಸೇರಿ ಸರ್ಕಾರದ ಮೇಲೆ ಒತ್ತಡ ತರೋಣ. ನಂತರ ಕೇಂದ್ರ ಬೃಹತ್ ಕೈಗಾರಿಕಾ ಸಚಿವರನ್ನು ಭೇಟಿ ಮಾಡಿ, ಇಲಾಖೆಯ ಮೂಲಕ ಇಂಡಸ್ಟ್ರಿಯಲ್ ಎಸ್ಟೇಟ್ ನಿರ್ಮಿಸಲು ಪ್ರಯತ್ನ ಮಾಡಬಹುದು ಎಂದು ಹೇಳಿದರು.
ಐಟಿ ಪಾರ್ಕ್ ನಿರ್ಮಾಣವಾದಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಸಾಧ್ಯ. ಉದ್ಯೋಗಕ್ಕಾಗಿ ಮಹಾನಗರಗಳನ್ನೇ ಆಶ್ರಯಿಸುವುದನ್ನು ತಪ್ಪಿಸಿ, ಊರಿನಲ್ಲಿದ್ದುಕೊಂಡೇ ಕೆಲಸ ಮಾಡಬಹುದು. ಕೃಷಿ ಕೆಲಸ ಮಾಡಿಕೊಂಡು, ತಂದೆ, ತಾಯಿಯರನ್ನೂ ನೋಡಿಕೊಳ್ಳಬಹುದು. ೧೦ ಸಾವಿರ ಎಕರೆಗಿಂತ ಹೆಚ್ಚಿನ ಸ್ಥಳವನ್ನು ಸರ್ಕಾರದ ವಿವಿಧ ಯೋಜನೆಗಳಿಗೆ ಜಿಲ್ಲೆಯ ಜನ ತ್ಯಾಗ ಮಾಡಿದ್ದಾರೆ. ಜಿಲ್ಲೆಯವರಿಗಾಗಿ ಈ ಯೋಜನೆಯನ್ನು ಸರ್ಕಾರ ನೀಡಬೇಕು. ಶಿರಸಿಯಲ್ಲಿ ಈಗಾಗಲೇ ೨ ಐಟಿ ಪಾರ್ಕ್ ನಿರ್ಮಾಣವಾಗಿದೆ. ಅನೇಕ ಯುವಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ರಸ್ತೆಯಂತಹ ಮೂಲ ಸೌಕರ್ಯವೇ ಸಮರ್ಪಕವಾಗಿ ಇಲ್ಲದ ಸ್ಥಳದಲ್ಲಿ ಟೆಕ್ ಪಾರ್ಕ್ ನಿರ್ಮಾಣದ ಕನಸು ಕಾಣುತ್ತಿದ್ದೇವೆ. ಇದು ಸುಲಭದ ಕಾರ್ಯವಲ್ಲ. ಕ್ರಮಿಸಬೇಕಾದ ದಾರಿ ತುಂಬ ದೂರವಿದೆ. ಇಲ್ಲಿನ ಸಾಧ್ಯಾಸಾಧ್ಯತೆಯ ಬಗ್ಗೆ ಸರಿಯಾದ ಅಧ್ಯಯನ ನಡೆಯಬೇಕು ಎಂದರು.
ಉದ್ಯಮಿ ನಿರಂಜನ ಭಟ್ಟ, ಎಂಜಿನಿಯರ್ ಅಂಕಿತ್ ಹೆಗಡೆ ಶಿರಸಿ, ಕುಂದರಗಿ ಗ್ರಾಪಂ ಸದಸ್ಯ ಗಣೇಶ ಹೆಗಡೆ, ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ಪತ್ರಕರ್ತರಾದ ನಾಗರಾಜ ಮದ್ಗುಣಿ, ಜಿ.ಎನ್. ಭಟ್ಟ ತಟ್ಟಿಗದ್ದೆ, ಗಣೇಶ ಹೆಗಡೆ ನಂದೊಳ್ಳಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನರಸಿಂಹ ಭಟ್ಟ ಕುಂಕಿಮನೆ, ನಂದೊಳ್ಳಿ ಗ್ರಾಪಂ ಸದಸ್ಯ ಟಿ.ಆರ್. ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದಿನ ವಾರ ಸ್ವರ್ಣವಲ್ಲೀ ಶ್ರೀಗಳನ್ನು ಭೇಟಿಯಾಗಿ ಹೋರಾಟದ ನೇತೃತ್ವ ವಹಿಸುವಂತೆ ಕೋರಲು ನಿರ್ಣಯಿಸಲಾಯಿತು.