ರಾಜ್ಯದ 5 ಕಡೆ ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರ : ವಿವಿ ಕುಲಪತಿ ಡಾ.ಎಂ.ಕೆ. ರಮೇಶ್‌

KannadaprabhaNewsNetwork |  
Published : Jan 17, 2025, 12:46 AM ISTUpdated : Jan 17, 2025, 12:25 PM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಕುಲಪತಿ ಡಾ.ಎಂ.ಕೆ. ರಮೇಶ್‌. | Kannada Prabha

ಸಾರಾಂಶ

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಹೊಸ ಕ್ಯಾಂಪಸ್‌ ರಾಮನಗರಕ್ಕೆ ಸ್ಥಳಾಂತರ ಆಗಲಿದೆ. ವಿಶಾಲವಾದ ಸ್ವಂತ ನಿವೇಶನದಲ್ಲಿ ಇನ್ನು 2-3 ವರ್ಷಗಳಲ್ಲಿ ಈ ಕ್ಯಾಂಪಸ್‌ ಕಾರ್ಯಾರಂಭವಾಗುವ ನಿಟ್ಟಿನಲ್ಲಿ ಪೂರಕ ಕೆಲಸ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.

 ಮಂಗಳೂರು : ಮಂಗಳೂರು ಸೇರಿದಂತೆ ರಾಜ್ಯದ ಐದು ಕಡೆಗಳಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ವಿವಿ ಕುಲಪತಿ ಡಾ.ಎಂ.ಕೆ. ರಮೇಶ್‌ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪ್ರಾದೇಶಿಕ ಕೇಂದ್ರಕ್ಕೆ ಸಿಎಂ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಂಗಳೂರು, ಮೈಸೂರು, ಕಲಬುರ್ಗಿ, ದಾವಣಗೆರೆ, ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಕೇಂದ್ರ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ಮಂಗಳೂರು ವಿಭಾಗದಲ್ಲಿ ಅತಿ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳಿದ್ದು, ಅನೇಕ ವರ್ಷಗಳ ಬೇಡಿಕೆ ಇರುವುದರಿಂದ ಮೊದಲು ಇಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಜಾಗ ಗುರುತಿಸಲಾಗಿದ್ದು, ವಿವಿಗೆ ಹಸ್ತಾಂತರವಾಗಿದೆ. ಎಲ್ಲ ಪ್ರಾದೇಶಿಕ ಕೇಂದ್ರಗಳೂ ವಿವಿಯ ಸ್ವಂತ ಅನುದಾನದಲ್ಲಿ ನಿರ್ಮಾಣವಾಗಲಿವೆ ಎಂದು ಹೇಳಿದರು.

ವೈದ್ಯಕೀಯ ಕೌಶಲ್ಯ ಹೆಚ್ಚಳಕ್ಕೆ ಲ್ಯಾಬ್‌: ಪ್ರಸ್ತುತ ವೈದ್ಯಕೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅವರ ವೈದ್ಯಕೀಯ ಕೌಶಲ್ಯ ಹೆಚ್ಚಿಸುವುದು ಪ್ರಾದೇಶಿಕ ಕೇಂದ್ರಗಳ ಮುಖ್ಯ ಉದ್ದೇಶ. ರೋಗಿಗಳ ಮೇಲೆ ಪ್ರಯೋಗ ಮಾಡುವ ಮೊದಲು ವಿದ್ಯಾರ್ಥಿಗಳು ಪೂರಕ ಕೌಶಲ್ಯ ಕಲಿಯಲು ಈ ಕೇಂದ್ರದಲ್ಲಿರುವ ಸ್ಕಿಲ್ಸ್‌ ಮತ್ತು ಸಿಮ್ಯುಲೇಶನ್‌ ಲ್ಯಾಬ್‌ ಸಹಾಯಕವಾಗಲಿದೆ. ಒಟ್ಟಾರೆ 49 ಕೋಟಿ ರು. ವೆಚ್ಚದಲ್ಲಿ ಎರಡು ವರ್ಷಗಳಲ್ಲಿ ಮೇರಿಹಿಲ್‌ನಲ್ಲಿರುವ ಒಂದು ಎಕರೆ ಜಾಗದಲ್ಲಿ ಕಟ್ಟಡ ತಲೆ ಎತ್ತಲಿದೆ ಎಂದು ಡಾ.ರಮೇಶ್‌ ಮಾಹಿತಿ ನೀಡಿದರು.

ರಾಮನಗರದಲ್ಲಿ ಹೊಸ ಕ್ಯಾಂಪಸ್‌: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಹೊಸ ಕ್ಯಾಂಪಸ್‌ ರಾಮನಗರಕ್ಕೆ ಸ್ಥಳಾಂತರ ಆಗಲಿದೆ. ವಿಶಾಲವಾದ ಸ್ವಂತ ನಿವೇಶನದಲ್ಲಿ ಇನ್ನು 2-3 ವರ್ಷಗಳಲ್ಲಿ ಈ ಕ್ಯಾಂಪಸ್‌ ಕಾರ್ಯಾರಂಭವಾಗುವ ನಿಟ್ಟಿನಲ್ಲಿ ಪೂರಕ ಕೆಲಸ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.

ವಿವಿಯನ್ನು ಸಂಪೂರ್ಣ ಪೇಪರ್‌ಲೆಸ್‌ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಲಾಗಿದ್ದು, ಕಳೆದ ಆರು ತಿಂಗಳಿನಿಂದ ವಿವಿಯ ಆಡಳಿತ ಕಚೇರಿಯನ್ನು ಸಂಪೂರ್ಣ ಪೇಪರ್‌ಲೆಸ್‌ ಮಾಡಿದ್ದೇವೆ ಎಂದು ತಿಳಿಸಿದರು.

ವಿವಿ ಕುಲಸಚಿವ ಶಿವಪ್ರಸಾದ್‌ ಪಿ.ಆರ್‌., ಕುಲಸಚಿವ (ಮೌಲ್ಯಮಾಪನ) ಡಾ.ರಿಯಾಝ್‌ ಬಾಷ, ಸೆನೆಟ್‌ ಸದಸ್ಯರಾದ ಯು.ಟಿ. ಇಫ್ತೀಕರ್‌ ಅಲಿ, ಡಾ.ಶಿವಶರಣ್‌ ಶೆಟ್ಟಿ ಇದ್ದರು.

ಡ್ರಗ್ಸ್‌ ತಡೆಗೆ ಕ್ರಮ

ವೈದ್ಯಕೀಯ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗದಂತೆ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿ ಕಾಲೇಜಿನಲ್ಲೂ ಇದರ ಮೇಲೆ ನಿಗಾ ಇರಿಸಲು ಸಮಿತಿ ರಚನೆಗೆ ಸೂಚನೆ ನೀಡಿದ್ದೇವೆ. ಮಾತ್ರವಲ್ಲದೆ, ಹಾಸ್ಟೆಲ್‌ಗಳಲ್ಲಿ ರ್‍ಯಾಂಡಮ್‌ ಆಗಿ ಡ್ರಗ್ಸ್‌ ಸೇವನೆ ಚೆಕಪ್‌ ಮಾಡಲಾಗುತ್ತಿದೆ. ಮೆಂಟರ್‌ ಮೆಂಟಿ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳೇ ಮೆಂಟರ್‌ ಆಗಿ ಕಾರ್ಯ ನಿರ್ವಹಿಸುತ್ತಾರೆ. ಯಾವುದಾದರೂ ವಿದ್ಯಾರ್ಥಿ ಡ್ರಗ್ಸ್‌ ಸೇವನೆ ಮಾಡುವ ವಿಚಾರ ತಿಳಿದುಬಂದರೆ ಸೂಕ್ತ ರೀತಿಯಲ್ಲಿ ಅದನ್ನು ತಡೆಯಲು ಕ್ರಮ ವಹಿಸಲಾಗುವುದು ಎಂದು ಡಾ.ಎಂ.ಕೆ. ರಮೇಶ್‌ ತಿಳಿಸಿದರು.

PREV

Recommended Stories

ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ
ಬೆಂಗಳೂರು : ನಗರದ ಕೆಲವು ಸ್ಥಳಗಳಲ್ಲಿ ಸೆ.20 ರಂದು ವಿದ್ಯುತ್ ಕಡಿತ