ರಾಜಕಾರಣದಲ್ಲಿ ಪ್ರಾದೇಶಿಕ ಅಸ್ಮಿತೆಗೆ ಪ್ರಾಶಸ್ತ್ಯ ಅಗತ್ಯ

KannadaprabhaNewsNetwork | Published : Jul 15, 2024 1:46 AM

ಸಾರಾಂಶ

ದೊಡ್ಡಬಳ್ಳಾಪುರ: ಕನ್ನಡದ ಹೆಸರಿನಲ್ಲಿ ರಾಜಕೀಯ ಶಕ್ತಿಯನ್ನು ರೂಪಿಸುವ ಮಹತ್ವಾಕಾಂಕ್ಷೆ ಇನ್ನೂ ಈಡೇರಿಲ್ಲ. ನಾಡಿನ ಸಮಗ್ರತೆಯ ರಕ್ಷಣೆಗೆ ಪ್ರಾದೇಶಿಕ ಅಸ್ಮಿತೆಯ ಉಳಿವು ಅತ್ಯಗತ್ಯ ಎಂದು ಕನ್ನಡ ಪಕ್ಷದ ರಾಜ್ಯಾಧ್ಯಕ್ಷ ಪುರುಷೋತ್ತಮ್‌ ಹೇಳಿದರು.

ದೊಡ್ಡಬಳ್ಳಾಪುರ: ಕನ್ನಡದ ಹೆಸರಿನಲ್ಲಿ ರಾಜಕೀಯ ಶಕ್ತಿಯನ್ನು ರೂಪಿಸುವ ಮಹತ್ವಾಕಾಂಕ್ಷೆ ಇನ್ನೂ ಈಡೇರಿಲ್ಲ. ನಾಡಿನ ಸಮಗ್ರತೆಯ ರಕ್ಷಣೆಗೆ ಪ್ರಾದೇಶಿಕ ಅಸ್ಮಿತೆಯ ಉಳಿವು ಅತ್ಯಗತ್ಯ ಎಂದು ಕನ್ನಡ ಪಕ್ಷದ ರಾಜ್ಯಾಧ್ಯಕ್ಷ ಪುರುಷೋತ್ತಮ್‌ ಹೇಳಿದರು.

ಇಲ್ಲಿನ ಸಂಜಯನಗರದಲ್ಲಿ ದೊಡ್ಡಬಳ್ಳಾಪುರ ತಾಲೂಕು ಕನ್ನಡ ಪಕ್ಷ ಭಾನುವಾರ ಆಯೋಜಿಸಿದ್ದ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ಕನ್ನಡ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ದೊಡ್ಡಬಳ್ಳಾಪುರದಿಂದ ಚಾಲನೆ ನೀಡಲಾಗುತ್ತಿದೆ. ರಾಜ್ಯದಲ್ಲಿ 15 ಲಕ್ಷ ಸದಸ್ಯರನ್ನು ನೊಂದಾಯಿಸುವ ಗುರಿಯನ್ನು ಹೊಂದಲಾಗಿದೆ ಎಂದ ಅವರು, ಕರ್ನಾಟಕದಲ್ಲಿ 224 ಶಾಸಕರು, 28 ಚುನಾಯಿತ ಸಂಸದರು ಇದ್ದರೂ ಯಾರೊಬ್ಬರೂ ನಾಡಿನ ಹಿತಾಸಕ್ತಿಯ ರಕ್ಷಣೆಗಾಗಿ ರಾಜಕಾರಣ ಮಾಡುವ ಉದ್ದೇಶ ಹೊಂದಿಲ್ಲ. ಅವರವರ ಪಕ್ಷದ ಹೈಕಮಾಂಡ್‌ ಮತ್ತು ಸ್ವಹಿತಾಸಕ್ತಿಗಳ ರಕ್ಷಣೆಯೇ ಅವರ ಪರಮೋಚ್ಛ ಆದ್ಯತೆಯಾಗಿರುತ್ತದೆ ಎಂದರು.

ಕನ್ನಡದ ಪರವಾಗಿ ಈ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಪರವಾಗಿ ದನಿಯೆತ್ತುವ ಹೊಣೆಗಾರಿಕೆಯನ್ನೇ ಪ್ರಧಾನವಾಗಿಸಿಕೊಳ್ಳುವ ರಾಜಕಾರಣಿಗಳ ಅಗತ್ಯ ಹೆಚ್ಚಿದೆ. ಚುನಾವಣೆ ಸಂದಭ್ದಲ್ಲಿ ಹಣ ಕೊಟ್ಟು ಮತ ಕೊಳ್ಳುವ ರಾಜಕಾರಣಿಗಳು ನಂತರದ ದಿನಗಳಲ್ಲಿ ಜನರ ಆಶೊತ್ತರಗಳನ್ನು ಸಂಪೂರ್ಣ ಮರೆಯುತ್ತಾರೆ ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಬೆಲೆ ಏರಿಕೆಯಂತಹ ಜನವಿರೋಧಿ ನೀತಿಗಳ ವಿರುದ್ದ ಯಾವೊಬ್ಬ ರಾಜಕಾರಣಿಯೂ ನೈತಿಕತೆಯಿಂದ ದನಿಯೆತ್ತುವ ಕಾಳಜಿ ಪ್ರದರ್ಶಿಸುವುದಿಲ್ಲ ಎಂದ ಮೇಲೆ ಇಂತಹವರು ನಮ್ಮನ್ನು ಪ್ರತಿನಿಧಿಸಲು ಅರ್ಹರಾ ಎಂಬುದು ಆದ್ಯತೆಯ ಪ್ರಶ್ನೆಯಾಗಬೇಕು ಎಂದರು.

ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ್‌ ಮಾತನಾಡಿ, 1967ರಲ್ಲಿ ಸ್ಥಾಪನೆಯಾದ ಕನ್ನಡ ಪಕ್ಷ ಮಾ.ರಾಮಮೂರ್ತಿ ಅವರ ಆಶಯಗಳಿಗೆ ಪೂರಕವಾಗಿ ಸಂಘಟಿತವಾಗಿದೆ. ದೊಡ್ಡಬಳ್ಳಾಪುರದಲ್ಲಿ 80ರ ದಶಕದಿಂದಲೂ ತನ್ನ ಪ್ರಭಾವವನ್ನು ಉಳಿಸಿಕೊಂಡಿರುವ ಪಕ್ಷ, ಒಂದು ಹಂತದಲ್ಲಿ ನಗರಸಭೆಯಲ್ಲಿ ನಿರ್ಣಾಯಕ ಸ್ಥಾನದಲ್ಲಿತ್ತು. ಬದಲಾದ ರಾಜಕೀಯ ಸ್ಥಿತಿಗತಿಗಳು ಪ್ರಾಂತೀಯ ಪಕ್ಷಗಳಿಗೆ ಬಹುದೊಡ್ಡ ಸವಾಲು ಉಂಟುಮಾಡಿವೆ. ಬಡವರ, ಶೋಷಿತರ ಪರವಾಗಿ ದನಿಯೆತ್ತುವ ಮೂಲಕ ಡಾ.ವೆಂಕಟರೆಡ್ಡಿ ಅವರ ಚಿಂತನೆಗಳ ಸಾಕಾರಕ್ಕೆ ಪಕ್ಷ ಇಂದಿಗೂ ಶ್ರಮಿಸುತ್ತಿದೆ ಎಂದು ವಿವರಿಸಿದರು.

ಕನ್ನಡ ಪಕ್ಷವನ್ನು ಮುಂಬರುವ ದಿನಗಳಲ್ಲಿ ಮತ್ತಷ್ಟು ಸಶಕ್ತವಾಗಿ ಕಟ್ಟಲು ಪೂರಕವಾಗಿ ಈ ಸದಸ್ಯತ್ವ ಅಭಿಯಾನವನ್ನು ನಡೆಸಲಾಗುತ್ತಿದೆ. ಕನ್ನಡಿಗರ ಅಸ್ಮಿತೆಯ ರಕ್ಷಣೆಯ ಸಂಕಲ್ಪದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಬೇಕು ಎಂದರು.

ಕನ್ನಡ ಪಕ್ಷದ ರಾಜ್ಯ ಕಾರ್ಯದರ್ಶಿ ಡಾ.ಹಿರೇಮಠ, ಕಾರ್ಯದರ್ಶಿಗಳಾದ ವಿಜಯಸೂರ್ಯ, ದೇವಕುಮಾರ್, ಸಂಘಟನಾ ಕಾರ್ಯದರ್ಶಿ ಜಯಕುಮಾರ್, ಮುಖಂಡರಾದ ಸುಲೋಚನಮ್ಮ ವೆಂಕಟರೆಡ್ಡಿ, ಡಿ.ಪಿ.ಆಂಜನೇಯ, ಜ್ಯೋತಿಷಿ ಡಾ.ಶ್ರೀನಿವಾಸನ್ ಗುರೂಜಿ,‌ ತಾಲೂಕು ಅಧ್ಯಕ್ಷ ವೆಂಕಟೇಶ್, ನಗರಸಭೆ ಮಾಜಿ ಸದಸ್ಯೆ ಜಯಮ್ಮ ಮುನಿರಾಜು, ಜಿಲ್ಲಾ ಮುಖಂಡ ಮುನಿಪಾಪಯ್ಯ ಮತ್ತಿತರರು ಹಾಜರಿದ್ದರು.

14ಕೆಡಿಬಿಪಿ2-

ದೊಡ್ಡಬಳ್ಳಾಪುರದಲ್ಲಿ ಭಾನುವಾರ ಕನ್ನಡ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ರಾಜ್ಯಾಧ್ಯಕ್ಷ ಪುರುಷೋತ್ತಮ್‌ ಕನ್ನಡ ಡಿಂಡಿಮ ಬಾರಿಸುವ ಮೂಲಕ ಚಾಲನೆ ನೀಡಿದರು.

Share this article