ಕನ್ನಡಪ್ರಭ ವಾರ್ತೆ ಹನೂರು
ದೇಶದಲ್ಲಿರುವ ಜನ ವಿರೋಧಿ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬರು ಪಣತೊಟ್ಟಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್. ಸಿ. ಮಹದೇವಪ್ಪ ತಿಳಿಸಿದರು.ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾರ್ಟಳ್ಳಿ, ಹೂಗ್ಯಂ, ಪೊನ್ನಾಚಿ, ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ಪರ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಬಂದ ಮೇಲೆ ಹೆಚ್ಚು ನಿರುದ್ಯೋಗ:ಬಿಜೆಪಿಯ ಸಂಸದರು, ನಾಯಕರು ಸಂವಿಧಾನ ಬದಲಾವಣೆ ಮಾಡಲು 400 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಇದುವರೆಗೂ ಇದರ ಬಗ್ಗೆ ಮಾತನಾಡದೆ ನರೇಂದ್ರ ಮೋದಿ ಅಂಬೇಡ್ಕರ್ ಹುಟ್ಟಿ ಬಂದರು ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಅಂಬೇಡ್ಕರ್ ಮತ್ತೆ ಎಲ್ಲಿ ಹುಟ್ಟಿ ಬರುತ್ತಾರೆ ಎಂದರು. ಇವರು ಅಧಿಕಾರಕ್ಕೆ ಬರುವ ಮುನ್ನ ದೇಶದಲ್ಲಿ ಶೇ2% ನಿರುದ್ಯೋಗಿಗಳಿದ್ದರೂ ಇವರು ಅಧಿಕಾರಕ್ಕೆ ಬಂದ ನಂತರ ಶೇ8% ನಿರುದ್ಯೋಗಿಗಳಿದ್ದಾರೆ.
ಎಚ್‌ಡಿಕೆಗೆ ರಾಜಕೀಯ ಸಿದ್ಧಾಂತ ಇಲ್ಲ:ಪ್ರತಿಯೊಂದು ಆಹಾರ ಪದಾರ್ಥಗಳು ಸೇರಿದಂತೆ ವಾಣಿಜ್ಯ ಪದಾರ್ಥಗಳಿಗೆ ಜಿಎಸ್‌ಟಿ ಹೇರಿಕೆ ಮಾಡಿದ್ದಾರೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ ಇದರಿಂದ ಸಾಮಾನ್ಯ ಜನ ತತ್ತರಿಸಿ ಹೋಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿಗೆ ರಾಜಕೀಯ ಸಿದ್ಧಾಂತ ಮತ್ತು ಬದ್ಧತೆ ಎರಡೂ ಇಲ್ಲದಾಗಿದೆ. ರಾಜ್ಯದಲ್ಲಿ ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯ ಮಂತ್ರಿ ಆಗಿದ್ದಾಗ ಬಿಜೆಪಿ ಕೋಮುವಾದಿ ಪಕ್ಷ ಎಂದು ಹೇಳುತ್ತಿದ್ದವರು. ಈಗ ಅದೇ ಕೋಮುವಾದಿ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಅವರಿಗೆ ಜನರ ಅಭಿವೃದ್ಧಿ ಮುಖ್ಯವೋ ಇಲ್ಲ ಅವರ ಕುಟುಂಬದ ಅಭಿವೃದ್ಧಿ ಮುಖ್ಯವೋ ಎಂಬುದನ್ನು ನೀವೇ ತೀರ್ಮಾನಿಸಬೇಕು. ಈ ನಿಟ್ಟಿನಲ್ಲಿ ಜನಪರ ಕಾಂಗ್ರೆಸ್ ಸರ್ಕಾರಕ್ಕೆ ಮತ ನೀಡುವಂತೆ ತಿಳಿಸಿದರು.
ಬಿಜೆಪಿ ಸುಳ್ಳು ಹೇಳಿ ರಾಜಕೀಯ ಮಾಡುತ್ತಿದೆ: ಮಾಜಿ ಶಾಸಕ ಆರ್ ನರೇಂದ್ರ ಮಾತನಾಡಿ, ರಾಜ್ಯದಲ್ಲಿ ಇನ್ನು ಮುಂದೆ ಜೆಡಿಎಸ್ ಪಕ್ಷ ಕರ್ನಾಟಕದಲ್ಲಿ ಇರುವುದಿಲ್ಲ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಮಾತ್ರ ಉಳಿದುಕೊಳ್ಳಲಿದೆ, ಜೆಡಿಎಸ್ ಪಕ್ಷವನ್ನು ಬಿಜೆಪಿಯವರೇ ಮುಗಿಸಲಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ ಕಳೆದ 70 ವರ್ಷಗಳಲ್ಲಿ ಕ್ಷೇತ್ರದ ಜನತೆ ನಮ್ಮ ಕುಟುಂಬದವರಿಗೆ ಸುಮಾರು 50 ವರ್ಷಗಳ ಕಾಲ ಅಧಿಕಾರ ನೀಡಿದ್ದಾರೆ. ನಿಮ್ಮ ಆಶೀರ್ವಾದದಿಂದ ಕ್ಷೇತ್ರದಲ್ಲಿ ನನ್ನ ಕೈಲಾದ ಮಟ್ಟಿಗೆ ಕ್ಷೇತ್ರದ ಅಭಿವೃದ್ಧಿಪಡಿಸಿದ್ದೇನೆ. ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಜ್ಞಾವಂತರೆ ಹೆಚ್ಚಿದ್ದು ದೇಶದಲ್ಲಿ ಬಿಜೆಪಿ ಯಾವ ರೀತಿ ಸುಳ್ಳು ಹೇಳಿ ರಾಜಕೀಯ ಮಾಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ, ಕಳೆದ 10 ವರ್ಷದ ಅವಧಿಯಲ್ಲಿ ಬಿಜೆಪಿಯವರು ಬಡವರಿಗೆ ಯಾವುದೇ ಒಂದು ಉತ್ತಮ ಯೋಜನೆ ತರಲಿಲ್ಲ, ವಿದ್ಯಾವಂತರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದರು ಆದರೆ ಇದುವರೆಗೂ ಉದ್ಯೋಗ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು ಆದರೆ ಬಿಜೆಪಿ ಸರ್ಕಾರ ಅಂದಾನಿ ಅಬಾನಿ, ಟಾಟಾ ರವರ ಅಂತಹ ಉಳ್ಳವರ ಸಾಲ ಮನ್ನಾ ಮಾಡಿದ್ದಾರೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡದೆ ರಸಗೊಬ್ಬರ ಕೀಟನಾಶಕಗಳ ಬೆಲೆ ಏರಿಕೆ ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿದ್ದು ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ 10ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮುಕುಂದವರ್ಮ, ಈಶ್ವರ್ ಮಾಟಳ್ಳಿ ಗ್ರಾಪಂ ಅಧ್ಯಕ್ಷ ಇಗ್ನೇಶಿ ಮುತ್ತು ಉಪಾಧ್ಯಕ್ಷ ನದಿಯಾ, ಸದಸ್ಯ ರಾಮಲಿಂಗಂ, ಸುರೇಶ್ ಮುಖಂಡರಾದ ಮಣಿ, ನಟರಾಜು, ಬಿದರಳ್ಳಿ ಶಿವು ಮತ್ತಿತರರು ಹಾಜರಿದ್ದರು.