ಸಂಬಂಧಗಳು ಕೃತಕ, ಬಾಂಧವ್ಯದಲ್ಲಿ ಬಿರುಕು: ನರಸಿಂಹಮೂರ್ತಿ

KannadaprabhaNewsNetwork |  
Published : Sep 08, 2026, 01:45 AM IST
೭ಕೆಎಂಎನ್‌ಡಿ-೪ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸಾಹಿತಿ ಡಾ.ಶುಭಶ್ರೀ ಪ್ರಸಾದ್ ರಚಿಸಿರುವ ನೋಟಿನಾಚೆಗಿನ ನೋಟ ಪುಸ್ತಕವನ್ನು ಲೇಖಕಿಯವರ ತಾಯಿ ಸುವರ್ಣ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಗಂಡ-ಹೆಂಡತಿ ಸಂಬಂಧ, ತಂದೆ, ತಾಯಿ-ಮಕ್ಕಳ ನಡುವಿನ ಬಾಂಧವ್ಯ ಹಳಸಿದೆ. ಅವಿಭಕ್ತ ಕುಟುಂಬದಲ್ಲಿನ ಪ್ರೀತಿ, ನಂಬಿಕೆ ಕಣ್ಮರೆಯಾಗಿದೆ, ಗುರು-ಹಿರಿಯರಿಗೆ ಆತ್ಮಪೂರ್ವಕವಾದ ಗೌರವ ಸಿಗದಂತಾಗಿದೆ. ಕೇವಲ ತೋರಿಕೆಗಷ್ಟೇ ಸೀಮಿತವಾದಂತೆ ಕೃತಕವೆಂಬಂತೆ ಕಂಡುಬರುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿ ಸಂಬಂಧಗಳು ಕೃತಕವಾಗುತ್ತಿವೆ. ಬಾಂಧವ್ಯದಲ್ಲಿ ಬಿರುಕುಗಳು ಮೂಡುತ್ತಿವೆ. ಸಂಸ್ಕೃತಿ-ಪರಂಪರೆಗಳಿಂದ ಯುವಕರು ದೂರ ಸರಿಯುತ್ತಿರುವುದು ವಿಪರ್ಯಾಸ ಎಂದು ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ವಿಷಾದಿಸಿದರು.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಡಾ.ಶುಭಶ್ರೀ ಪ್ರಸಾದ್ ರಚಿಸಿರುವ ನೋಟಿನಾಚೆಗಿನ ನೋಟ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಂಡ-ಹೆಂಡತಿ ಸಂಬಂಧ, ತಂದೆ, ತಾಯಿ-ಮಕ್ಕಳ ನಡುವಿನ ಬಾಂಧವ್ಯ ಹಳಸಿದೆ. ಅವಿಭಕ್ತ ಕುಟುಂಬದಲ್ಲಿನ ಪ್ರೀತಿ, ನಂಬಿಕೆ ಕಣ್ಮರೆಯಾಗಿದೆ, ಗುರು-ಹಿರಿಯರಿಗೆ ಆತ್ಮಪೂರ್ವಕವಾದ ಗೌರವ ಸಿಗದಂತಾಗಿದೆ. ಕೇವಲ ತೋರಿಕೆಗಷ್ಟೇ ಸೀಮಿತವಾದಂತೆ ಕೃತಕವೆಂಬಂತೆ ಕಂಡುಬರುತ್ತಿದೆ. ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳುವಲ್ಲಿ ಅಥವಾ ಅರ್ಥೈಸಿಕೊಡುವಲ್ಲಿ ವಿಫಲರಾಗಿರುವಂತೆ ಕಂಡುಬರುತ್ತಿದ್ದೇವೆ ಎಂದರು.

ಇಂದಿನ ಜೆನ್‌ಝೀಗಳು ಎಂದು ಕರೆಯಲ್ಪಡುವ ಯುವಕರು ಸಂಸ್ಕೃತಿ-ಪರಂಪರೆಯಿಂದ ದೂರವೇ ಉಳಿದಿದ್ದಾರೆ. ಅದರ ಬಗ್ಗೆ ಅವರಿಗೆ ಪರಿಜ್ಞಾನವೇ ಇಲ್ಲ. ಅವರೆಲ್ಲರೂ ತಮ್ಮದೇ ಆದ ಲೋಕದಲ್ಲಿ ಮುಳುಗಿಹೋಗಿದ್ದಾರೆ. ಬದುಕು, ಜೀವನ, ಸಂಬಂಧಗಳು, ಸಂಸ್ಕೃತಿಯ ಪರಿಚಯವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಮೊಬೈಲ್‌ಯುಗ ಎಲ್ಲವನ್ನೂ ಮರೆಮಾಚುತ್ತಿದೆ ಎಂದರು.

ಬದುಕಿನ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಬದುಕನ್ನು ಸುಂದರಗೊಳಿಸಲು ಹಾಸ್ಯ ಬೇಕೇಬೇಕು. ಹಾಸ್ಯವಿಲ್ಲದಿದ್ದರೆ ಜೀವನದಲ್ಲಿ ಖುಷಿಯೇ ಇರುವುದಿಲ್ಲ. ಇಂದಿನ ದಿನಮಾನಗಳಲ್ಲಿ ಪರಸ್ಪರರು ಮಾತನಾಡುವುದೇ ದೂರವಾಗುತ್ತಿದೆ. ಮಾನವೀಯ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹಾಗಾಗಿ ಪುಸ್ತಕ ಓದುವುದು, ಬದುಕಿನ ಅನುಭವಗಳನ್ನು ಹಂಚಿಕೊಳ್ಳುವುದು, ಮಾನವೀಯ ಸಂಬಂಧಗಳನ್ನು ವೃದ್ಧಿಸುವುದು ಅತ್ಯವಶ್ಯಕವಾಗಿದೆ ಎಂದರು.

ನಿವೃತ್ತ ಮುಖ್ಯ ಆಡಳಿತಾಧಿಕಾರಿ ತ.ನಾ.ಶಿವಕುಮಾರ್ ಮಾತನಾಡಿ, ನಮ್ಮಲ್ಲಿ ಸಂಸ್ಕಾರವಿದ್ದಾಗ ಮಾತ್ರ ಮಕ್ಕಳಿಗೆ ಸಂಸ್ಕಾರ ಬರಲು ಸಾಧ್ಯ. ನಮ್ಮ ನಡವಳಿಕೆಗಳು ಮಕ್ಕಳಿಗೆ ವಿಶ್ವವಿದ್ಯಾಲಯಗಳಾಗಬೇಕು. ನಮ್ಮ ನಡಳಿಕೆಯಲ್ಲಿ ವ್ಯತ್ಯಾಸವಿದ್ದರೆ ಮಕ್ಕಳಲ್ಲಿ ಉತ್ತಮ ನಡವಳಿಕೆ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬದುಕಿಗೆ ಹಣ ಅನಿವಾರ್ಯ ನಿಜ. ಆದರೆ, ನಾವು ಸಂಪಾದಿಸುವ ಹಣ ಧರ್ಮಮಾರ್ಗದಲ್ಲಿದ್ದರೆ ಹಣಕ್ಕೂ ಗೌರವ, ನಮಗೂ ಗೌರವ. ಕೆಲವರು ಮೂರು ತಲೆಮಾರಿಗಾಗುವಷ್ಟು ಆಸ್ತಿಯನ್ನು ಸಂಪಾದಿಸುತ್ತಾರೆ. ಅದರಿಂದ ಏನು ಪ್ರಯೋಜನ. ಅದು ನಿಮ್ಮ ಮಕ್ಕಳ ದುಡಿಮೆ ಮತ್ತು ಶ್ರಮವನ್ನು ನೀವೇ ಕಸಿದುಕೊಂಡಂತಾಗುತ್ತದೆ ಎಂದು ಹೇಳಿದರು.

ಶುಭಶ್ರೀ ಅವರುಮ್ಮ ಪುಸ್ತಕದಲ್ಲಿ ಹಣ ಮತ್ತು ಬದುಕಿನ ಚಿತ್ರಣವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಬಾಂಧವ್ಯ ಎಂದರೆ ಪ್ರೀತಿ-ಗೌರವ ಎಂದು ಸೊಗಸಾಗಿ ವರ್ಣಿಸಿದ್ದಾರೆ. ಹಣದ ಥೈಲಿಗೆ ಒಳಗಾದ ಮಕ್ಕಳು ತಂದೆ-ತಾಯಿಯನ್ನು ವೃದ್ಧಾಶ್ರಮಗಳಿಗೆ ಸೇರಿಸುವ, ಇಂಟರ್‌ನೆಟ್ ಮೂಲಕವೇ ಅಂತ್ಯಕ್ರಿಯೆ ವೀಕ್ಷಿಸುವಂತಹ ವಿಲಕ್ಷಣ ಘಟನೆಗಳನ್ನು ಕಾಣುತ್ತಿದ್ದೇವೆ. ಅದಕ್ಕಾಗಿ ಬದುಕಿನಲ್ಲಿ ಹಣವೇ ಪ್ರಧಾನವಾಗಬಾರದು. ಮೌಲ್ಯಗಳು ಜೀವನವನ್ನು ತುಂಬಿಕೊಳ್ಳಬೇಕು. ಸಂಬಂಧಗಳು ಸಂಯೋಜನೆಗೊಂಡು, ಬಾಂಧವ್ಯಗಳ ಬೆಸುಗೆಯಾದಾಗ ಜೀವನ ಸುಂದರವಾಗುತ್ತದೆ ಎಂದರು.

ಡಾ.ಶುಭಶ್ರೀ ಪ್ರಸಾದ್ ತಾಯಿ ಸುವರ್ಣ ನೋಟಿನಾಚೆಗಿನ ನೋಟ ಪುಸ್ತಕ ಬಿಡುಗಡೆ ಮಾಡಿದರು. ಸಂವಹನ ಪ್ಕಾಶಕ ಡಿ.ಎನ್.ಲೋಕಪ್ಪ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಂಗ್‌ಪಿನ್‌ ಕನ್ನಾಳೆಗೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದವರಾರು?: ಖಂಡ್ರೆ
ಬರ ಘೋಷಣೆ ಕೇಂದ್ರವೇ ಹೊಣೆ: ಸಚಿವ ಖಂಡ್ರೆ