ಕನ್ನಡಪ್ರಭ ವಾರ್ತೆ ಮೈಸೂರು
ಸಂಗೀತದಿಂದ ಮನೋಲ್ಲಾಸ ಉಂಟಾಗುತ್ತದೆ ಎಂದು ಅಲೆಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ ವಿ. ಭೈರಿ ಹೇಳಿದರು.ಅಲೆಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ, ಗಾನ- ನಂದನ ವತಿಯಿಂದ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಒತ್ತಡದಲ್ಲಿದ್ದಾಗ ಸಂಗೀತ ಕೇಳಿದರೆ ಮನಸ್ಸಿಗೆ ಮುದ ನೀಡುತ್ತದೆ ಎಂದರು.
ಮುಖ್ಯಅತಿಥಿಯಾಗಿದ್ದ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ, ತಾತಯ್ಯನವರ ಕಾಲದಿಂದಲೂ ಮೈಸೂರು ಪತ್ರಿಕೋದ್ಯಮಕ್ಕೆ ತನ್ನದೇ ಆದ ಘನತೆ- ಗೌರವ ಇದೆ. ಈಗಲೂ ಸಹ ಅದು ಉಳಿದುಕೊಂಡು ಬಂದಿದೆ ಎಂದರು.ಮತ್ತೊರ್ವ ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಪತ್ರಕರ್ತರು ಗಡಿಕಾಯುವ ಯೋಧರಿದ್ದಂತೆ. ಮಧ್ಯರಾತ್ರಿವರೆಗೆ ಕೆಲಸ ಮಾಡಿ, ಬೆಳಗಿನ ಜಾವದ ವೇಳೆಗೆ ಅತ್ಯುತ್ತಮವಾದ ಸುದ್ದಿಗಳನ್ನು ಓದುಗರಿಗೆ ತಲುಪಿಸುತ್ತಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ರೂಪಿಸುವ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಸರ್ಕಾರ ಹಾಗೂ ಸಮಾಜದ ನಡುವೆ ಸೇತುವೆಯಂತಿರುವ ಪತ್ರಕರ್ತರು ನೈತಿಕತೆ ಹಾಗೂ ವಿಶ್ವಾರ್ಸತೆ ಉಳಿಸಿಕೊಂಡೇ ಕೆಲಸ ಮಾಡಬೇಕಿದೆ ಎಂದರು.ಪತ್ರಕರ್ತರಾದ ಎಂ.ಆರ್. ಸತ್ಯನಾರಾಯಣ, ಕೆ.ಜೆ. ಲೋಕೇಶ್ ಬಾಬು ಹಾಗೂ ಎಸ್. ಪ್ರಕಾಶ್ ಬಾಬು ಅವರಿಗೆ ಮಾಧ್ಯಮರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮತ್ತೊರ್ವರಾದ ಸಿ.ಕೆ. ಮಹೇಂದ್ರ ಗೈರಾಗಿದ್ದರು.
ಉಪನ್ಯಾಸಕಿ ಚಂದ್ರಕಲಾ ನಿರೂಪಿಸಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಪ್ರಾಸ್ತಾವಿಕ ಭಾಷಣ ಮಾಡಿದರು. ಅಲೆಯನ್ಸ್ ಕ್ಲಬ್ ಆಫ್ ನಾಲ್ವಡಿ ಅಧ್ಯಕ್ಷ ಎನ್. ಬೆಟ್ಟೇಗೌಡ ಸ್ವಾಗತಿಸಿದರು.ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಮ.ನ. ಲತಾ ಮೋಹನ್, ಸಂಘಟನಾ ಕಾರ್ಯದರ್ಶಿ ಮೈನಾ ಲೋಕೇಶ್, ಎ.ಜಿ. ದೇವರಾಜ್, ಎಸ್. ವೆಂಕಟೇಶ್, ರಾಜಶೇಖರ ಕದಂಬ, ಡಾ.ಶಂಕರೇಗೌಡ, ಟಿ. ಸತೀಶ್ ಜವರೇಗೌಡ, ಇಂದಿರಾ ವೆಂಕಟೇಶ್, ಲಕ್ಷ್ಮೀದೇವಿ, ಸುನೀತಾ ಬೆಟ್ಟೇಗೌಡ, ಮಹಾಬಲೈಶ್ವರ ಬೈರಿ ಮೊದಲಾದವರು ಇದ್ದರು.
ಸವಿಗಾನ-3:ಡಾ.ವೈ.ಡಿ. ರಾಜಣ್ಣ, ಡಾ.ಬಿ.ಎನ್. ರವೀಶ್, ಡಾ.ಎ.ಎಸ್. ಪೂರ್ಣಿಮಾ, ಎನ್. ಬೆಟ್ಟೇಗೌಡ, ಶ್ರೀಲತಾ ಮನೋಹರ್, ಸಿ.ಎಸ್. ವಾಣಿ ಅವರು ಭಾವಗೀತೆ ಹಾಗೂ ಹಳೆಯ ಕನ್ನಡ ಚಿತ್ರಗೀತೆಗಳ ಗಾಯನ ನಡೆಸಿಕೊಟ್ಟು, ಮನರಂಜಿಸಿದರು.