ವಿಂಡ್‌ ಫ್ಯಾನ್‌ ಅಳವಡಿಸಲು ಬಿಡುವುದಿಲ್ಲ: ಶಾಸಕ ದೇವೇಂದ್ರಪ್ಪ

KannadaprabhaNewsNetwork | Published : Jun 17, 2024 1:31 AM

ಸಾರಾಂಶ

ಜಗಳೂರು ತಾಲೂಕಿನಲ್ಲಿ ಇನ್ನು ಮುಂದೆ ವಿಂಡ್‌ಫ್ಯಾನ್‌ ಅಳವಡಿಸುವುದಕ್ಕೆ ಅನುಮತಿ ನೀಡಲು ಬಿಡುವುದಿಲ್ಲ. ರೈತರ ಜಮಿನುಗಳನ್ನು ರಕ್ಷಿಸುವುದು ನಮ್ಮ ಹಾಗೂ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.

- ಜಗಳೂರಿನಲ್ಲಿ ಸ್ವಚ್ಛತಾ ಕಾರ್ಯಕ್ರಮ । ಸಾರ್ವಜನಿಕ ಶೌಚಾಲಯಗಳ ಪರೀಶಿಲನೆ - - - ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನಲ್ಲಿ ಇನ್ನು ಮುಂದೆ ವಿಂಡ್‌ಫ್ಯಾನ್‌ ಅಳವಡಿಸುವುದಕ್ಕೆ ಅನುಮತಿ ನೀಡಲು ಬಿಡುವುದಿಲ್ಲ. ರೈತರ ಜಮಿನುಗಳನ್ನು ರಕ್ಷಿಸುವುದು ನಮ್ಮ ಹಾಗೂ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಭಾನುವಾರ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಪರೀಶಿಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತಾಲೂಕಿನಲ್ಲಿ ವಿಂಡ್ ಫ್ಯಾನ್ ಹಾವಳಿ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರೈತರು ಕೂಡ ತಮ್ಮ ಜಮಿನುಗಳನ್ನು ಉಳಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಬೃಹತ್ ನೀರಾವರಿ ಯೋಜನೆಗಳು ಜಾರಿಗೆ ಬರಲಿದ್ದು, ಈಗ ಭೂಮಿ ಕಳೆದುಕೊಂಡರೆ ಮತ್ತೆ ಭೂಮಿ ಸಿಗುವುದಿಲ್ಲ. ವಿದ್ಯುತ್ ಕೂಡ ಅವಶ್ಯಕವಾಗಿ ಬೇಕಾಗಿದೆ. ವಿದ್ಯುತ್‌ ಉತ್ಪಾದನೆ ಮಾಡುವ ಸಲುವಾಗಿ ಖಾಸಗಿ ಕಂಪನಿಗಳು ಮೊದಲು ಗುಡ್ಡಗಳನ್ನು ಆಯ್ಕೆ ಮಾಡಿಕೊಂಡರು. ನಂತರ ಅರಣ್ಯ ಪ್ರದೇಶ, ಈಗ ರೈತರ ಜಮಿನುಗಳಲ್ಲಿ ಅಳವಡಿಸುವಂತ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ವಿಂಡ್ ಫ್ಯಾನ್ ಅಳವಡಿಸಲು ಬಿಡುವುದಿಲ್ಲ ಎಂದು ಪುನರುಚ್ಚರಿಸಿದರು.

೫೭ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಶೇ.೯೦ರಷ್ಟು ಪೂರ್ಣಗೊಂಡಿದೆ. ದೇವಿಕೆರೆಯಿಂದ ಜಗಳೂರು ಕೆರೆಗೆ ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಕೆರೆಗಳಿಗೆ ನೀರು ಬರಲಿದೆ. ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಕಾಮಗಾರಿ ಶೇ.೩೦ರಷ್ಟು ಪೂರ್ಣಗೊಂಡಿದೆ. ನೀತಿ ಸಂಹಿತೆ ಮುಗಿದಿದ್ದು ನಾನು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಮಗಾರಿ ಶೀಘ್ರವಾಗಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಲಾಗುವುದು. ಪಟ್ಟಣದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದ್ದು, ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಹೇಳಿದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಲ್ಲಗಟ್ಟೆ ಶೇಖರಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ರವಿಕುಮಾರ್, ರಮೇಶ್, ಅಹಮದ್ ಆಲಿ, ಆರೋಗ್ಯ ನಿರೀಕ್ಷಕ ಪ್ರಶಾಂತ್, ಮೋದಿನ್, ಮುಖಂಡರಾದ ಮಂಜುನಾಥ್, ತಿಪ್ಪೇಸ್ವಾಮಿ ಸೇರಿದಂತೆ ಇತರರು ಇದ್ದರು.

- - - -೧೬ಜೆಜಿಎಲ್೦೨:

ಜಗಳೂರು ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

Share this article