ಕನ್ನಡಪ್ರಭ ವಾರ್ತೆ ತಿಪಟೂರು
ಧರ್ಮವು ನಂಬಿಕೆ ಹಾಗೂ ಸಾಮರಸ್ಯದ ಮೇಲೆ ನಿಂತಿದೆಯಾದರೂ ನಮ್ಮ ಧಾರ್ಮಿಕ ನೆಲೆಗಟ್ಟಿನ ಭಾರತದಲ್ಲಿ ಧರ್ಮವು ಏಕೀಕರಣಕ್ಕೆ ಸವಾಲಾಗಿ ಪರಿಣಮಿಸಿದೆ ಎಂದು ಭಾರತೀಯ ಸಮಾಜಶಾಸ್ತ್ರ ಸಂಘದ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶದ ಬನಾರಸ್ ಹಿಂದೂ ವಿವಿ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಶ್ವೇತಾ ಪ್ರಸಾದ್ ತಿಳಿಸಿದರು.ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕರ್ನಾಟಕ ಸಮಾಜಶಾಸ್ತ್ರ ಸಂಘ, ಶ್ರೀ ಹೊನ್ನಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಂಡಿನಶಿವರ ಹಾಗೂ ತುಮಕೂರು ವಿವಿ ಸಮಾಜಶಾಸ್ತ್ರ ಪ್ರಾಧ್ಯಾಪಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನದಲ್ಲಿ ಆಶಯನುಡಿಗಳನ್ನಾಡಿದರು.
ರಾಷ್ಟ್ರದಲ್ಲಿ ಧಾರ್ಮಿಕ ಉಗ್ರವಾದ, ಹಿಂಸಾಚಾರ, ಸಾಮಾಜಿಕ ಸ್ಥಿರತೆಗೆ ಧಕ್ಕೆಯುಂಟಾಗುತ್ತಿದೆ. ಸಾಂಸ್ಕೃತಿಕ ಘೋಷಣೆಗಳು, ಧಾರ್ಮಿಕ ಅಡಚಣೆಗಳು ಅಥವಾ ನಂಬಿಕೆಗಳ ಆಧಾರದ ಮೇಲೆ ಸಾಂಸ್ಕೃತಿಕ ಘನತೆಗೆ ಪೆಟ್ಟು ಬೀಳುತ್ತಿದ್ದು ಇದರಿಂದ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ ಎಂದರು.ಬೆಂಗಳೂರು ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿವಿಯ ಸಮಾಜ ವಿಜ್ಞಾನದ ಪ್ರೊ.ಆರ್. ಇಂದಿರಾ ಮಾತನಾಡಿ, ಸಮಾಜಶಾಸ್ತ್ರದ ಸುಸ್ಥಿರತೆಯ ಮೇಲೆ ಬಾರಿ ಹೊಡೆತ ಬೀಳುತ್ತಿದ್ದು, ಅದನ್ನು ಹೇಗೆ ಉಳಿಸಿ ಬೆಳೆಸಬೇಕೆಂಬ ಬಗ್ಗೆ ಇಂದಿನ ಸಮಾಜಶಾಸ್ತ್ರ ವಿದ್ಯಾರ್ಥಿಗಳು, ಅಧ್ಯಾಪಕರು ಆಲೋಚಿಸಬೇಕಿದೆ. ಸವಾಲುಗಳನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಚರ್ಚಿಸಬೇಕಿದೆ. ದೇಶ ಮತ್ತು ರಾಜ್ಯದಲ್ಲಿ ಸಮಾಜಶಾಸ್ತ್ರ ಉಳಿದುಕೊಂಡಿದೆ ಎಂದರೆ ಚಿಂತಕರು, ಅಧ್ಯಾಪಕರ ಶ್ರಮವೇ ಕಾರಣ. ಆದ್ದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇದರ ಬಗ್ಗೆ ಪರಿಚಯಿಸಬೇಕೆಂಬ ಉದ್ದೇಶ ಈ ಸಮ್ಮೇಳನದ್ದಾಗಿದೆ ಎಂದರು.
ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ. ಜೋಗನ್ ಶಂಕರ್ ಮಾತನಾಡಿ, ವಿವಿಗಳು ಸಮಾಜಶಾಸ್ತ್ರವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ಅಧ್ಯಾಪಕರು, ವಿದ್ಯಾರ್ಥಿಗಳು ಸಮಾಜಶಾಸ್ತ್ರದ ಬಗ್ಗೆ ಹೆಚ್ಚಿನ ಒಲವು ತೋರಿಸಬೇಕು. ಇಂತಹ ಸಮ್ಮೇಳನಗಳು ರಾಷ್ಟ್ರ ಮಟ್ಟದ ಒಗ್ಗಟ್ಟಿಗೆ, ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಕರೆದೊಯ್ಯುವಲ್ಲಿ ಸಹಕಾರಿಯಾಗಿದೆ. ಈ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳಿಂದ ಪ್ರಬಂಧಗಳನ್ನು ಮಂಡಿಸಲು ಪ್ರತಿನಿಧಿಗಳು ಆಗಮಿಸಿದ್ದು ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಅರಿವು ಮೂಡಿಸಿಕೊಂಡು ಸಮಾಜದಲ್ಲಿ ಸಮಾಜಶಾಸ್ತ್ರದ ಕೊಡುಗೆ ಏನೆಂಬುದನ್ನು ತಿಳಿಸಬೇಕು ಎಂದರು.ಉದ್ಘಾಟನೆಯ ನಂತರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮಾಜಶಾಸ್ತ್ರ ಅಧ್ಯಾಪಕರುಗಳಿಂದ ಪ್ರಬಂಧ ಮಂಡನೆ ನಡೆಯಿತು. ದೆಹಲಿ, ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಹಾಗೂ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಂದ ನೂರಾರು ಸಂಖ್ಯೆಯಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲರಿಗೂ ಕರ್ನಾಟಕದ ವಿಶೇಷ ಒಬ್ಬಟ್ಟಿನ ಊಟದ ವ್ಯವಸ್ಥೆ ಮಾಡಿಸಲಾಗಿತ್ತು. ರಾಷ್ಟ್ರ ಮಟ್ಟದ ಸಮ್ಮೇಳನ ಕಲ್ಪತರು ನಾಡು ತಿಪಟೂರು ನಗರದಲ್ಲಿ ಮಟ್ಟದಲ್ಲಿ ನಡೆದಿದ್ದು ಸಮಾಜಶಾಸ್ತ್ರದ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು.
ಕರ್ನಾಟಕ ಸಮಾಜಶಾಸ್ತ್ರ ಸಂಘದ ಅಧ್ಯಕ್ಷ ಪ್ರೊ. ಎಂ. ಗುರುಲಿಂಗಯ್ಯ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಎಚ್.ಬಿ. ಕುಮಾರಸ್ವಾಮಿ ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಇ. ನಾಗೇಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ವೈ. ನಾರಾಯಣಚೆಟ್ಟಿ, ಕರ್ನಾಟಕ ಸಮಾಜಶಾಸ್ತ್ರ ಸಂಘದ ಕಾರ್ಯದರ್ಶಿ ಪ್ರೊ. ಶೇಖರ್, ಉಪಾಧ್ಯಕ್ಷ ಪ್ರೊ. ಕಾಳಚನ್ನೇಗೌಡ, ದಂಡಿನಶಿವರ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ಪಿ. ಶಿವಾನಂದಯ್ಯ, ಪ್ರಾಧ್ಯಾಪಕರಾದ ಡಾ. ಶಾಂತಾ ಬಿ. ಅಷ್ಟಗಿ, ಡಾ. ಸ.ರಾ. ಲೇಪಾಕ್ಷ, ಸಂಯೋಜಕಿ ಡಾ. ಅಶ್ವಿನಿ ಬಿ. ಜಾನೆ, ಸುಧಾ ಕೊಟ್ಟಿಗೆ, ಎಸ್.ಎಲ್. ನಾಗಭೂಷಣ್ ಸೇರಿದಂತೆ ವಿವಿಧ ಕಾಲೇಜುಗಳ ಅಧ್ಯಾಪಕರು, ವಿದ್ಯಾರ್ಥಿಗಳು, ವಿವಿಧ ರಾಜ್ಯಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.