- ವಾಲ್ಮೀಕಿ ಜಾತ್ರಾ ಮಹೋತ್ಸವ ಜನಜಾಗೃತಿ ಸಮಾವೇಶ
ಹರಿಹರ: ಬದುಕಿಗಿಂತ ಧರ್ಮ ಶ್ರೇಷ್ಠವಲ್ಲ, ಧರ್ಮಕ್ಕಿಂತ ನಮ್ಮ ಬದುಕು ಮತ್ತು ಬದುಕಿಗೆ ಪ್ರೇರಣೆಯಾಗುವ ಸಾಂಸ್ಕೃತಿಕ ನಡೆಗಳೇ ಶ್ರೇಷ್ಠ. ವಾಲ್ಮೀಕಿ ಮತ್ತು ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳು ಒಂದೇ ಆಗಿವೆ. ಅವರ ಆದರ್ಶದಂತೆ ನಾವೆಲ್ಲರೂ ವೈಚಾರಿಕ ಬದುಕು ಕಟ್ಟಿಕೊಳ್ಳಬೇಕಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಪ್ರತಿಪಾದಿಸಿದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಾತ್ರಾ ಮಹೋತ್ಸವದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಮಹರ್ಷಿಗಳು ರಾಮಾಯಣದ ಮೂಲಕ ರಾಮ, ಸೀತೆ, ರಾವಣ ಸೇರಿದಂತೆ ಎಲ್ಲ ಪಾತ್ರಗಳನ್ನು ಸೃಷ್ಟಿಸಿದವರು. ಆದರೆ ಇಂದು ರಾಮನನ್ನು ಮುಂದೆ ತಂದು ಸೃಷ್ಟಿಕರ್ತ ವಾಲ್ಮೀಕಿಯನ್ನೇ ಕಡೆಗಣಿಸಲಾಗುತ್ತಿದೆ. ವಾಲ್ಮೀಕಿ, ಕನಕದಾಸರು ಮತ್ತು ಅಂಬೇಡ್ಕರ್ ಅವರನ್ನು ನಾವು ಒಟ್ಟಾಗಿ ಆರಾಧಿಸದಿದ್ದರೆ ಶೋಷಿತ ಸಮುದಾಯಕ್ಕೆ ಅಪಾಯವಿದೆ ಎಂದು ಎಚ್ಚರಿಸಿದರು.ಸಂವಿಧಾನ ನಮಗೆ ಸಮಾನ ಅವಕಾಶಗಳನ್ನು ನೀಡಿದ್ದರೂ ಅವು ಇನ್ನೂ ಪೂರ್ಣವಾಗಿ ಸಾಧಿತವಾಗಿಲ್ಲ. ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲಾ- ಕಾಲೇಜುಗಳಲ್ಲಿ ಸಂವಿಧಾನ ಪಠಣಕ್ಕೆ ಅವಕಾಶ ಮಾಡಿಕೊಡುವ ಮೂಲಕ ಶೋಷಿತರ ಹಿತರಕ್ಷಣೆಗೆ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಹಿಂದುಳಿದ ವರ್ಗಗಳ ಮಕ್ಕಳು ಅವಲಂಬಿಸಿರುವ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಬಡವರಿಗೆ ಆಧಾರವಾಗಿರುವ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಎಸ್.ಸಿ/ಎಸ್.ಟಿ ಸಮುದಾಯದ ಬಡವರಿಗೆ ನಿವೇಶನ ಮತ್ತು ಮನೆ ನಿರ್ಮಿಸಿಕೊಡಲು ಅಂಬೇಡ್ಕರ್ ಹಾಗೂ ವಾಲ್ಮೀಕಿ ಕಾಲೋನಿ ನಿರ್ಮಾಣಕ್ಕಾಗಿ ತಲಾ ₹20 ಕೋಟಿಯಂತೆ ಒಟ್ಟು ₹40 ಕೋಟಿ ರೂ. ಅನುದಾನದ ಯೋಜನೆಗೆ ಅನುಮೋದನೆ ನೀಡಬೇಕೆಂದು ಕೋರಿದರು.
(ಎಚ್‌ಸಿ ಮಹಾದೇವಪ್ಪ)