ಧರ್ಮ ಜಾಗೃತಿ ಸಮಾರಂಭ
ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖ ಬಯಸುವ ಮನುಷ್ಯ ಧರ್ಮ ಪರಿಪಾಲನೆ ಮಾಡುವುದನ್ನು ಮರೆಯುತ್ತಾನೆ. ಆದರೆ ಸುಖ ಶಾಂತಿಯ ಬದುಕಿಗೆ ಧರ್ಮವೇ ಮೂಲ ಎಂಬುದನ್ನು ಮರೆಯಬಾರದು ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ತಾಲೂಕು ವೀರಶೈವ ಲಿಂಗಾಯತ ಸಮಾಜದಿಂದ ಶನಿವಾರ ಪಟ್ಟಣದ ಬಸವೇಶ್ವರ ಶಾಲಾ ಆವರಣದಲ್ಲಿ ಆಯೋಜಿಸಿದ್ದ ರಂಭಾಪುರಿ ಶ್ರೀಗಳ ಪುರಪ್ರವೇಶ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ‘ಧರ್ಮ, ಸಂಸ್ಕೃತಿ ಮತ್ತು ಪರಂಪರೆ ಮನುಷ್ಯನ ನಂಬಿಕೆಯ ಮೇಲೆ ನಿಂತುಕೊಂಡಿವೆ. ನಂಬಿಕೆಯೇ ಜೀವನದ ಮೂಲ ಸೆಲೆ. ನಂಬಿಕೆ ಇಲ್ಲದವರಿಗೆ ಯಾವುದೂ ಇಲ್ಲ. ಕಣ್ಣು ಚೆನ್ನಾಗಿದ್ದರೆ ಜಗತ್ತು ಚೆನ್ನಾಗಿ ಕಾಣುತ್ತದೆ. ನಾಲಿಗೆ ಚೆನ್ನಾಗಿದ್ದರೆ ಜನತೆಗೆ ಚೆನ್ನಾಗಿ ಕಾಣುತ್ತೇವೆ. ವಿದ್ಯೆ, ದುಡಿಮೆ ಮತ್ತು ತಾಳ್ಮೆ ಜೀವನದ ಶ್ರೇಯಸ್ಸಿಗೆ ಅಡಿಪಾಯ’ ಎಂದು ಹೇಳಿದರು.‘ವೀರಶೈವ ಧರ್ಮ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದೆ. ಸಕಲ ಜೀವಾತ್ಮರಿಗೆ ಸದಾ ಲೇಸನ್ನೇ ಬಯಸಿದ ವೀರಶೈವ ಧರ್ಮ ಬಹಳ ಪ್ರಾಚೀನವಾದ ಧರ್ಮ, ಇದಕ್ಕೊಂದು ಇತಿಹಾಸ ಭವ್ಯ ಪರಂಪರೆಯಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಶಿವಾದ್ವೈತ ತತ್ವ ಸಿದ್ಧಾಂತವನ್ನು ಬೋಧಿಸಿದ ಇತಿಹಾಸವಿದೆ. ವೈಚಾರಿಕತೆ ಮತ್ತು ಸುಧಾರಣೆಯ ನೆಪದಲ್ಲಿ ಧರ್ಮ ಸಂಸ್ಕೃತಿಯ ಬಗೆಗೆ ನಿರ್ಲಕ್ಷ್ಯ ಮನೋಭಾವ ತಾಳುತ್ತಿರುವ ಕಾರಣ ಜಗದಲ್ಲಿ ಅಶಾಂತಿ, ಸಂಘರ್ಷ ಹೆಚ್ಚುತ್ತಿರುವುದನ್ನು ಕಾಣುತ್ತೇವೆ. ದ್ವೇಷ ಮರೆತು ಪ್ರೀತಿ ವಿಶ್ವಾಸ ಹೆಚ್ಚಿದಾಗ ಜಗದಲ್ಲಿ ಶಾಂತಿ ನೆಲೆಗೊಳ್ಳಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.
ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿ ವಹಿಸಿದ್ದರು, ಯಸಳೂರು ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿ, ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿ, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿ, ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮಿ, ಸಂಕಲಾಪುರ ಮಠದ ಧರ್ಮರಾಜೇಂದ್ರ ಸ್ವಾಮಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.